
ಬೆಂಗಳೂರು(ನ.25): ಖಾಸಗಿ ಬಸ್ ಆಪರೇಟರ್‌ಗಳು ನಗರದ ಕಲಾಸಿಪಾಳ್ಯ ಸಮೀಪದ ಅಲ್ಬರ್ಟ್ ವಿಕ್ಟರ್, ಹೈದರಾಲಿ ಖಾನ್ ರಸ್ತೆ ಹಾಗೂ ಬಿ ಸ್ಟ್ರೀಟ್ ರಸ್ತೆಗಳನ್ನು ಬಸ್ ನಿಲ್ದಾಣಗಳಾಗಿ ಮಾಡಿಕೊಂಡಿದ್ದು, ಸ್ಥಳೀಯರು ಹಾಗೂ ಸಾರ್ವಜನಿಕರು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ. ಈ ರಸ್ತೆಗಳ ಎರಡೂ ಬದಿಯಲ್ಲಿ ಹಲವು ಖಾಸಗಿ ಬಸ್ ಆಪರೇಟರ್'ಗಳ ಕಚೇರಿಗಳಿದ್ದು, ಬಸ್'ಗಳನ್ನು ಕಚೇರಿ ಎದುರಿನ ರಸ್ತೆಗಳಲ್ಲಿ ಬೇಕಾಬಿಟ್ಟಿ ನಿಲುಗಡೆ ಮಾಡಲಾಗುತ್ತಿದೆ. ವಾಹನ ನಿಲುಗಡೆ ನಿಷೇಧವಿದ್ದರೂ ರಾಜಾರೋಷವಾಗಿ ನಿಲುಗಡೆ ಮಾಡಲಾಗುತ್ತಿದೆ. ರಸ್ತೆಯ ಎರಡೂ ಬದಿಗಳಲ್ಲೂ ಖಾಸಗಿ ಬಸ್'ಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ಇತರೆ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಅಲ್ಲದೆ, ಸವಾರರು ಹಾಗೂ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಅಲ್ಬರ್ಟ್ ವಿಕ್ಟರ್ ರಸ್ತೆಯಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ವಾಹನ ಸವಾರರು ಮನಬಂದಂತೆ ವಿರುದ್ಧ ದಿಕ್ಕನಲ್ಲೇ ವಾಹನ ಚಲಾಯಿಸುವುದು ಸಾಮಾನ್ಯವಾಗಿದೆ. ದ್ವಿಚಕ್ರ ವಾಹನ ಸವಾರರು ಈ ರಸ್ತೆಯ ಪಾದಚಾರಿ ಮಾರ್ಗಗಳಲ್ಲೂ ಬೈಕ್ ಚಾಲನೆ ಮಾಡುತ್ತಾರೆ. ಇದರಿಂದ ಪಾದಚಾರಿಗಳು ಜೀವ ಬಿಗಿ ಹಿಡಿದು ಓಡಾಡುವ ಸ್ಥಿತಿಯಿದೆ. ಜೊತೆಗೆ ಖಾಸಗಿ ಬಸ್ ಆಪರೇಟರ್‌ಗಳು ತಮ್ಮ ಕಚೇರಿಗಳ ಎದುರಿಗೆ ಅಂದರೆ ಪಾದಚಾರಿ ಮಾರ್ಗದಲ್ಲೇ ಬಸ್‌ಗಳ ಟೈರ್'ಗಳು, ಸರಕು ಸರಂಜಾಮುಗಳನ್ನು ಇರಿಸಿದ್ದಾರೆ. ಇದು ಕೂಡ ಪಾದಚಾರಿಗಳ ಸಂಚಾರಕ್ಕೆ ಅಡಚಣೆಯಾಗಿದೆ.
ಇನ್ನು ಟಿಪ್ಪು ಅರಮನೆ ಸಮೀಪವಿರುವ ಕೃಷ್ಣ ರಾಜೇಂದ್ರ ಮೆಟ್ರೋ ನಿಲ್ದಾಣದ ಬಳಿ ಹಾದು ಹೋಗುವ ಕೆ.ಆರ್. ರಸ್ತೆಯನ್ನೂ ಖಾಸಗಿ ಬಸ್ ಆಪರೇಟರ್'ಗಳು ಬಸ್ ನಿಲ್ದಾಣ ಮಾಡಿಕೊಂಡಿದ್ದಾರೆ. ಮೆಟ್ರೋ ರೈಲು ನಿಲ್ದಾಣದ ದ್ವಾರದ ಬಳಿಯೇ ಬಸ್ ಗಳನ್ನು ನಿಲುಗಡೆ ಮಾಡುತ್ತಿದ್ದಾರೆ. ಇದರಿಂದ ಈ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗುತ್ತಿದೆ.
ಅನೈತಿಕ ಚಟುವಟಿಕೆ ತಾಣ: ರಸ್ತೆ ಬದಿಯಲ್ಲಿ ಖಾಸಗಿ ಬಸ್'ಗಳನ್ನು ನಿಲುಗಡೆ ಮಾಡುವುದರಿಂದ ರಾತ್ರಿ ವೇಳೆ ಈ ಬಸ್‌ಗಳ ಮರೆಯಲ್ಲಿ ಹಾಗೂ ಬಸ್ ಗಳಲ್ಲೇ ಅನೈತಿಕ ಚುಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿವೆ. ಇದರಿಂದ ರಾತ್ರಿ ಹೊತ್ತು ಹಿರಿಯ ನಾಗರಿಕರು ಹಾಗೂ ಮಹಿಳೆಯರು ಸುಗಮವಾಗಿ ಓಡಾಡುವುದೇ ಕಷ್ಟವಾಗಿದೆ.
ಇನ್ನೂ ಕಳ್ಳರು ಪಾದಚಾರಿಗಳನ್ನು ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ ಬೆದರಿಸಿ ಸುಲಿಗೆ ಮಾಡುವ ಘಟನೆಗಳು ಸಾಮಾನ್ಯವಾಗಿದೆ. ಇಲ್ಲಿನ ಅಕ್ರಮ ಹಾಗೂ ಅಪರಾಧ ಕೃತ್ಯಗಳ ಬಗ್ಗೆ ಹಲವು ಬಾರಿ ಪೊಲೀಸರ ಗಮನಕ್ಕೆ ತರಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ಕಲಾಸಿಪಾಳ್ಯ ನಿವಾಸಿ ವಿಜಯಕುಮಾರ್ ದೂರಿದ್ದಾರೆ.
ಸೂಕ್ತ ಸ್ಪಂದನೆ ಇಲ್ಲ: ಅಲ್ಬರ್ಟ್ ವಿಕ್ಟರ್ ಹಾಗೂ ಹೈದರಾಲಿ ಖಾನ್ ರಸ್ತೆಗಳಲ್ಲಿ ಖಾಸಗಿ ಬಸ್‌ಗಳ ಹಾವಳಿ ಹೆಚ್ಚಾಗಿದೆ. ರಸ್ತೆಯ ಎರಡೂ ಬದಿಯನ್ನು ಅವರೇ ಅತಿಕ್ರಮಿಸಿಕೊಂಡು ನಿಯಮ ಬಾಹಿರವಾಗಿ ಬಸ್ ನಿಲುಗಡೆ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಧಮಕಿ ಹಾಕುತ್ತಾರೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಹಲವು ಬಾರಿ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಈ ರಸ್ತೆಗಳಲ್ಲಿ ಹಗಲು ಮತ್ತು ರಾತ್ರಿ ವೇಳೆ ಓಡಾಡುವುದಕ್ಕೆ ಭಯವಾಗುತ್ತದೆ. ಇನ್ನು ಸವಾರರು ಸಂಚಾರ ನಿಯಮ ಗಾಳಿಗೆ ತೂರಿ ಬೇಕಾಬಿಟ್ಟಿ ವಾಹನ ಚಲಾಯಿಸುತ್ತಾರೆ. ನಿತ್ಯ ಒಂದಾದರೂ ಅಪಘಾತ ಸಂಭವಿಸುತ್ತದೆ. ಇತ್ತ ಸಂಚಾರ ಪೊಲೀಸರೂ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಬೆಂಗಳೂರು ಫೋರ್ಟ್ ಏರಿಯಾ ವೆಲ್‌ಫೇರ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಜನಾರ್ದನ್ ಆರೋಪಿಸಿದ್ದಾರೆ. ನಿತ್ಯ ಇಲ್ಲಿಗೆ ಹಲವಾರು ಪ್ರವಾಸಿಗರು ಬರುತ್ತಿದ್ದು ಮೊದಲಿಗೆ ಈ ಭಾಗದಲ್ಲಿ ಖಾಸಗಿ ಬಸ್‌ಗಳ ನಿಲುಗಡೆ ಹಾಗೂ ಸಂಚಾರ ನಿರ್ಬಂಧಿಸಬೇಕು ಮತ್ತು ಇಲ್ಲಿನ ಅಕ್ರಮ ಚಟುವಟಿಕೆಗಳನ್ನು ಮಟ್ಟಹಾಕಬೇಕು ಎಂದು ಅವರು ಆಗ್ರಹಿಸಿದ್ದಾರೆ.
ವರದಿ: ಮೋಹನ್ ಹಂಡ್ರಂಗಿ - ಕನ್ನಡಪ್ರಭ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.