
ಕೂಡ್ಲಿಗಿ(ಡಿ.10): ಯುವಕರು ದಾರಿ ತಪ್ಪುತ್ತಾರೆ ಎಂಬ ಕಾರಣಕ್ಕೆ ಬಾರ್, ಮದ್ಯದಂಗಡಿಗಳಿಗೆ ಬಹಿಷ್ಕಾರ ಹಾಕಿದ ಊರುಗಳನ್ನು ಕೇಳಿದ್ದೇವೆ. ಆದರೆ ಆಲಸಿಗಳಾಗುತ್ತಾರೆ ಎನ್ನುವ ಕಾರಣಕ್ಕಾಗಿ ಹೋಟೆಲ್‌ಗಳಿಗೆ ಅವಕಾಶ ಕೊಡದ ಊರೊಂದು ಬಳ್ಳಾರಿಯ ಕೂಡ್ಲಿಗಿ ತಾಲೂಕಿನಲ್ಲಿದೆ. ಹೌದು, ರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾಗಟಗೆರೆ ಎಂಬ 300 ಮನೆಗಳಿರುವ, ಅಂದಾಜು 1200 ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಹೋಟೆಲ್‌ಗಳೇ ಇಲ್ಲ!
ನಮ್ಮಲ್ಲಿಯ ಜನ ಸೋಮಾರಿಗಳಾಗಬಾರದು, ರೈತರ ಆರೋಗ್ಯ ಹಾಳಾಗಬಾರದು, ದುಡಿದ ಪುಡಿಗಾಸು ಹೋಟೆಲ್, ಮದ್ಯದಂಗಡಿಗಳಿಗಿಟ್ಟು ಆರ್ಥಿಕವಾಗಿ ಹಾಳಾಗಬಾರದು ಎನ್ನುವ ಹಿರಿಯರ ಆಶಯ, ಸದುದ್ದೇಶ ಈವರೆಗೂ ಪಾಲನೆಯಾಗಿದೆ.
ಕಿರಾಣಿ ಅಂಗಡಿಯೂ ಇಲ್ಲ: ಇನ್ನೊಂದು ವಿಶೇಷವೆಂದರೆ ಈ ಗ್ರಾಮದಲ್ಲಿ ನೆಟ್ಟಗೆ ಒಂದು ಕಿರಾಣಿ ಅಂಗಡಿಯೂ ಇಲ್ಲ. ಬದಲಾಗಿ 4- 5 ಚಿಕ್ಕ ಗೂಡಂಗಡಿಗಳಲ್ಲಿ ಟೀ ಪುಡಿ, ಸಕ್ಕರೆ, ಬೆಲ್ಲ, ಅಡಕೆ ಪುಡಿ, ಎಲೆ, ಇತರ ವಸ್ತುಗಳನ್ನು ಮಾರಲಾಗುತ್ತಿದೆ.
ಅಲ್ಲಿ ಸಣ್ಣ ಪ್ರಮಾಣದಲ್ಲಿ ಅವಶ್ಯಕ ಪದಾರ್ಥಗಳು ಸಿಗುತ್ತವೆ. ಹತ್ತಾರು ಕೆಜಿ ಬೆಲ್ಲ, ಸಕ್ಕರೆ ಬೇಕೆಂದರೆ ಸಿಗದು. ಇಲ್ಲಿಯ ಗ್ರಾಮಸ್ಥರೂ ಇಲ್ಲಿಯ ವ್ಯವಸ್ಥೆಗೆ ಹೊಂದಿಕೊಂಡಿದ್ದಾರೆ. ಇಲ್ಲಿ ಪೂರ್ವಜರು ರೂಪಿಸಿದ ಇಂತಹ ಕಟ್ಟುನಿಟ್ಟಿನ ಆದೇಶಗಳನ್ನು ಇಂದಿನ ತಲೆಮಾರಿನವರು ಪಾಲಿಸಿಕೊಂಡು ಬಂದಿದ್ದಾರೆ.
ಈ ಬಗ್ಗೆ ಊರಲ್ಲಿ ವಿಚಾರಿಸಿದರೆ, ‘ಹಳ್ಳಿಗಳಲ್ಲಿ ಹೋಟೆಲ್, ಅಂಗಡಿಗಳು ಇದ್ದರೆ ಊರವರು ಕೆಟ್ಟು ಹೋಗುತ್ತಾರೆ. ಚಟಗಳಿಗೆ ಬೀಳುತ್ತಾರೆ ಎಂದು 60 ವರ್ಷಗಳ ಹಿಂದೆ ನಮ್ಮ ಹಿರಿಯರು ಈ ನಿರ್ಧಾರಕ್ಕೆ ಬಂದರು. ಆದರೆ ಅಂದು ಹಲವು ಗ್ರಾಮಗಳಲ್ಲಿ ಹೋಟೆಲ್‌ಗಳೇ ಇರಲಿಲ್ಲ.
ಆದರೆ ಇಂದು ಕಾಲ ಬದಲಾಗಿದೆ. ನಾಲ್ಕು ಮನೆಗಳಿದ್ದರೂ ಊರ ಹೊರಗೆ ಸ್ಕೂಲ್, ಕಾಲೇಜುಗಳಿದ್ದರೂ ಅಲ್ಲಿ ಐದಾರು ಹೋಟೆಲ್, ಅಂಗಡಿಗಳು ಪ್ರಾರಂಭವಾಗುತ್ತವೆ. ಆದರೆ 300 ಮನೆಗಳಿರುವ ನಮ್ಮ ಊರಿನಲ್ಲಿ ಇರುವರೆಗೂ ಹೋಟೆಲ್, ಅಂಗಡಿ ಆರಂಭಿಸಿಲ್ಲ’ ಎಂದು ಗ್ರಾಮಸ್ಥರು ಹೇಳುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.