ಶಿಕ್ಷಣ ಇಲಾಖೆಗೆ ಇನ್ನು ರಜೆ ಇಲ್ಲ ..?

First Published Jul 5, 2018, 8:19 AM IST
Highlights

ಶಿಕ್ಷಣ ಇಲಾಖೆಯನ್ನು ರಜೆ ರಹಿತ ಇಲಾಖೆ ಮಾಡುವ ಕುರಿತು ಹಾಗೂ ಪ್ರಸಕ್ತ ಸಾಲಿನಲ್ಲಿ ಪದವಿಪೂರ್ವ ಕಾಲೇಜುಗಳಲ್ಲಿ ಅವಧಿಗೂ ಮುನ್ನ ಶೈಕ್ಷಣಿಕ ವರ್ಷಾರಂಭ ಮಾಡಿರುವುದರಿಂದ ಆಗುವ ಸಮಸ್ಯೆಗಳ ಪರಿಹಾರಕ್ಕೆ ಅಧಿವೇಶನ ಮುಗಿಯುವುದರೊಳಗೆ ಸಭೆ ಕರೆದು ಚರ್ಚಿಸಿ ನಿರ್ಣಯಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಶಿಕ್ಷಣ ಎನ್‌. ಮಹೇಶ್‌ ಹೇಳಿದ್ದಾರೆ. 

ವಿಧಾನ ಪರಿಷತ್‌ :  ಶಿಕ್ಷಣ ಇಲಾಖೆಯನ್ನು ರಜೆ ರಹಿತ ಇಲಾಖೆ ಮಾಡುವ ಕುರಿತು ಹಾಗೂ ಪ್ರಸಕ್ತ ಸಾಲಿನಲ್ಲಿ ಪದವಿಪೂರ್ವ ಕಾಲೇಜುಗಳಲ್ಲಿ ಅವಧಿಗೂ ಮುನ್ನ ಶೈಕ್ಷಣಿಕ ವರ್ಷಾರಂಭ ಮಾಡಿರುವುದರಿಂದ ಆಗುವ ಸಮಸ್ಯೆಗಳ ಪರಿಹಾರಕ್ಕೆ ಅಧಿವೇಶನ ಮುಗಿಯುವುದರೊಳಗೆ ಅಧಿಕಾರಿಗಳು ಮತ್ತು ಶಿಕ್ಷಣ ಕ್ಷೇತ್ರವನ್ನು ಪ್ರತಿನಿಧಿಸುವ ಸದಸ್ಯರ ಸಭೆ ಕರೆದು ಚರ್ಚಿಸಿ ನಿರ್ಣಯಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಶಿಕ್ಷಣ ಎನ್‌. ಮಹೇಶ್‌ ತಿಳಿಸಿದರು.

ಗಮನ ಸೆಳೆಯುವ ಸೂಚನೆ ಅಡಿ ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಪದವಿ ಪೂರ್ವ ಶಿಕ್ಷಣ ಇಲಾಖೆಯು ಯಾವುದೇ ಮುನ್ಸೂಚನೆ ನೀಡದೆ ವಿಧಾನಸಭಾ ಚುನಾವಣೆ ವೇಳೆ ಏಕಾಏಕಿ 2018-19ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಪ್ರಕಟಿಸಿದೆ. ಇದರಿಂದ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಪಾಠದಿಂದ ವಂಚಿತರಾಗುತ್ತಿದ್ದಾರೆ. 

ಮಾ.18ರ ವರೆಗೆ ಕಾರ್ಯನಿರ್ವಹಿಸುವ ಉಪನ್ಯಾಸಕರು, ಮತ್ತೆ ಮೇ 2ರಂದು ಬಂದು ಕಾಲೇಜು ಆರಂಭಿಸಿದರು. ಇದರಿಂದ ಉಪನ್ಯಾಸಕರಿಗೆ ರಜೆ ಇಲ್ಲದಂತಾಗಿದೆ. ಇಲಾಖೆಯನ್ನು ರಜೆರಹಿತ ಇಲಾಖೆ ಎಂದು ಘೋಷಿಸಬೇಕು. ಇಲ್ಲವಾದಲ್ಲಿ, ನಿಗದಿತ ಅವಧಿಯಲ್ಲಿ ಕಾಲೇಜುಗಳನ್ನು ಆರಂಭಿಸಬೇಕು. ಕಾಲೇಜುಗಳನ್ನು ಅವಧಿಗೂ ಮುನ್ನವೇ ಆರಂಭಿಸಿರುವುದರಿಂದ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ತಪ್ಪಿದ ಪಾಠವನ್ನು ಯಾವ ರೀತಿಯಲ್ಲಿ ತುಂಬಿಕೊಡಲಿದ್ದಾರೆ ಎಂದು ಪ್ರಶ್ನಿಸಿದರು.

ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿ ಹಾಗೂ ಇಲಾಖೆ ನಿರ್ದೇಶಕರು ಇಬ್ಬರೂ ಮಹಿಳೆಯರೇ ಆಗಿರುವುದರಿಂದ ಇವರ ಜಗಳದಲ್ಲಿಯೇ ಕಾಲ ಮುಗಿಯುತ್ತಿದೆ. ಇಲಾಖೆ ಸುಧಾರಣೆ, ಬದಲಾವಣೆ ಸಾಧ್ಯವಿಲ್ಲ. ಕಾಲೇಜುಗಳು ಆರಂಭಗೊಂಡಿದ್ದರೂ ಅತಿಥಿ ಉಪನ್ಯಾಸಕರ ನೇಮಕಕ್ಕೆ ಅವಕಾಶ ಕಲ್ಪಿಸುತ್ತಿಲ್ಲ. ಆದ್ದರಿಂದ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಸಭಾಪತಿ ಬಸವರಾಜ ಹೊರಟ್ಟಿ, ಕೂಡಲೇ ಸಭೆ ಕರೆದು ಸಮಸ್ಯೆಗಳನ್ನು ಚರ್ಚಿಸಿ. ಅಗತ್ಯವಿದ್ದರೆ, ನನ್ನನ್ನು ಕೂಡ ಸಭೆಗೆ ಆಹ್ವಾನಿಸಿ ಎಂದು ಸಲಹೆ ನೀಡಿದರು. ಇದಕ್ಕೆ ಉತ್ತರಿಸಿದ ಸಚಿವರು, ಅಧಿವೇಶನ ಮುಗಿಯುವುದರೊಳಗೆ ಸಭೆ ಕರೆದು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

click me!