
ಬೆಂಗಳೂರು(ಏ.20): ‘ಬಾಹುಬಲಿ-2’ ಸಿನಿಮಾ ಬಿಡುಗಡೆ ದಿನಾಂಕ ಸಮೀಪಿಸುತ್ತಿದ್ದಂತೆ ಆ ಚಿತ್ರದಲ್ಲಿನ ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್ ವಿರುದ್ಧದ ಹೋರಾಟ ರಾಜ್ಯದಲ್ಲಿ ತೀವ್ರಗೊಳ್ಳುತ್ತಿದೆ. ಕನ್ನಡಿಗರಿಗೆ ಅವಮಾನವಾಗುವಂತೆ ಮಾತನಾಡಿದ ಸತ್ಯರಾಜ್ ಕನ್ನಡಿಗರ ಕ್ಷಮೆ ಯಾಚಿಸುವ ತನಕ ಕರ್ನಾಟಕದಲ್ಲಿ ಬಾಹುಬಲಿ-2 ಚಿತ್ರ ಬಿಡುಗಡೆ ಸಾಧ್ಯವಿಲ್ಲವೆಂದು ಕನ್ನಡ ಪರ ಹೋರಾಟಗಾರರು ಪಟ್ಟು ಹಿಡಿದಿದ್ದಾರೆ.ಈ ಹಿನ್ನೆಲೆಯಲ್ಲಿ ಏ.28ರಂದು ರಾಜ್ಯದಲ್ಲಿ ಚಿತ್ರ ಬಿಡುಗಡೆ ಆಗುವ ಬಗ್ಗೆ ಅನುಮಾನಗಳು ಮುಂದುವರೆದಿವೆ.
ವಿವಾದ ತೀವ್ರವಾಗುತ್ತಿದ್ದಂತೆ ಚಿತ್ರದ ನಿರ್ದೇಶಕ ರಾಜಮೌಳಿ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬಿಡುಗಡೆ ಮಾಡಿ, ‘ಇದು 9 ವರ್ಷದ ಹಿಂದಿನ ವಿಡಿಯೋ. ಇದಕ್ಕೂ ಬಾಹುಬಲಿ-2 ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಸ್ಪಷ್ಟನೆ ನೀಡಿದರೂ ಕನ್ನಡ ಪರ ಹೋರಾಟಗಾರರು ಪಟ್ಟು ಸಡಿಲಿಸಿಲ್ಲ.
ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಂಗಳೂರಿನ ಆನಂದರಾವ್ ವೃತ್ತದ ಮಹಾತ್ಮಗಾಂಧಿ ಪ್ರತಿಮೆ ಬಳಿ ಸತ್ಯರಾಜ್ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು. ನಂತರ ವಾಣಿಜ್ಯ ಮಂಡಳಿವರೆಗೂ ಜಾಥಾ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ಎಚ್. ಶಿವರಾಮೇಗೌಡ, ಕನ್ನಡದ ಬಗ್ಗೆ ಸತ್ಯರಾಜ್ ಮಾತನಾಡಿರುವ ಪದಗಳು ಬಹಳ ಅಸಹ್ಯವಾಗಿದ್ದು, ಕನ್ನಡ ನಾಡು, ಕನ್ನಡಪರ ಹೋರಾಟಗಾರರು ಹಾಗೂ ಕನ್ನಡಿಗರ ಜೀವನಾಡಿಯಾದ ಕಾವೇರಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನಾರ್ಹ. ಕನ್ನಡ ನಾಡು-ನುಡಿ, ನೆಲ-ಜಲಕ್ಕೆ ಧಕ್ಕೆಯುಂಟಾದಾಗ ಸಹಿಸುವುದಿಲ್ಲ ಹಾಗೂ ಸತ್ಯರಾಜ್ ನಟಿಸಿರುವ ಯಾವುದೇ ಚಿತ್ರಗಳು ಕರ್ನಾಟಕದಲ್ಲಿ ಪ್ರದರ್ಶನ ಕಾಣಲು ಅವಕಾಶ ನೀಡುವುದಿಲ್ಲ. ಕೂಡಲೇ ಹೇಳಿಕೆ ವಾಪಸ್ ಪಡೆಯಬೇಕು, ಕನ್ನಡಿಗರನ್ನು ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
‘ನಮ್ಮ ಹೋರಾಟ ಸತ್ಯರಾಜ್ ವಿರುದ್ಧವೇ ಹೊರತು, ಬಾಹುಬಲಿ ವಿರುದ್ಧವಲ್ಲ. ಒಂಬತ್ತು ವರ್ಷಗಳ ಹಿಂದೆ ನಟ ಸತ್ಯರಾಜ್ ಮಾತನಾಡಿರುವ ವಿಷಯ ಎಷ್ಟೇ ಹಳೆಯದಾಗಿದ್ದರೂ ಆಡಿರುವ ಮಾತುಗಳಂತೂ ಸತ್ಯ. ಕನ್ನಡ ಚಿತ್ರೋದ್ಯಮದ ಹಿತದೃಷ್ಟಿಯಿಂದ ಯಾವುದೇ ಪರಭಾಷೆ ಚಿತ್ರಗಳನ್ನು ಪ್ರದರ್ಶಿಸಲು ಕನಿಷ್ಠ ಚಿತ್ರಮಂದಿರ ನಿಗದಿಯಾದರೆ, ಕನ್ನಡ ಸಿನಿಮಾಗಳ ಪ್ರಗತಿ ಸಾಧ್ಯವಾಗುತ್ತದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಕನ್ನಡಿಗರು ಮತ್ತು ಕಾವೇರಿ ವಿಚಾರದಲ್ಲಿ ಹಗುರವಾಗಿ ಮಾತನಾಡುವವರಿಗೆ ಎಚ್ಚರಿಕೆ ನೀಡಿದಂತಾಗುತ್ತದೆ ಎಂದು ತಿಳಿಸಿದರು.
ರಾಜ್ಯದ ಜನರ ಭಾವನೆಗಳಿಗೆ ಬೆಲೆ ನೀಡಿದರೆ ಶಾಂತಿಯುತ ವಾತಾವರಣ ನಿರ್ಮಾಣವಾಗುತ್ತದೆ. ಇಲ್ಲವಾದಲ್ಲಿ ಕ್ರಾಂತಿ ಕಹಳೆ ಮೊಳಗಲಿದೆ. ಇನ್ನು ಮುಂದೆ ಕನ್ನಡಿಗರ ಬಗ್ಗೆ ಮಾತನಾಡುವಾಗ ಎಚ್ಚರದಿಂದ ಇರಬೇಕು ಎಂಬ ಸಂದೇಶವನ್ನು ರವಾನಿಸುತ್ತಿದ್ದೇವೆ ಎಂದು ಹೇಳಿದರು. ಜಾಥಾದಲ್ಲಿ ನೂರಾರು ಕಾರ್ಯಕರ್ತರು ಹಾಗೂ ಕನ್ನಡಪರ ಹೋರಾಟಗಾರರು ಪಾಲ್ಗೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.