ಮೇಲ್ವರ್ಗ ಮೀಸಲು ಜಾರಿ: ಷರತ್ತುಗಳು ಅನ್ವಯ!

By Web DeskFirst Published Jan 25, 2019, 12:23 PM IST
Highlights

ಮೇಲ್ವರ್ಗ ಮೀಸಲಾತಿ ಜಾರಿಗೊಳಿಸಿದ ಮೊದಲ ರಾಜ್ಯ ಎಂಬ ಕೀರ್ತಿ ಗುಜರಾತ್‌ ಪಡೆದಿದೆ. ಅದರೀಗ ಮೀಸಲಾತಿ ಜಾರಿಗೊಲಿಸಿ ಬೆನ್ನಲ್ಲೇ ಕೆಲ ಷರತ್ತುಗಳನ್ನು ಹಾಕಿದ್ದು, ಇದರ ವಿರುದ್ಧ ಟೀಕೆ ವ್ಯಕ್ತವಾಗಿದೆ. ಅಷ್ಟಕ್ಕೂ ಸರ್ಕಾರ ವಿಧಿಸಿರುವ ಷರತ್ತೇನು? ಇಲ್ಲಿದೆ ವಿವರ

ಅಹಮದಾಬಾದ್‌[ಜ.25]: ಮೇಲ್ವರ್ಗಗಳಲ್ಲಿನ ಬಡವರಿಗೆ ಶೇ.10ರಷ್ಟುಮೀಸಲು ನೀಡುವ ಕೇಂದ್ರ ಸರ್ಕಾರದ ಕಾಯ್ದೆಯನ್ನು ಮೊದಲು ಜಾರಿಗೆ ತಂದ ರಾಜ್ಯ ಎಂಬ ಹಿರಿಮೆ ಹೊಂದಿರುವ ಗುಜರಾತ್‌, ಮೀಸಲು ಅನುಷ್ಠಾನಕ್ಕೆ ಸಂಬಂಧಿಸಿದಂತೆ ಎರಡು ನಿರ್ಧಾರಗಳನ್ನು ಕೈಗೊಂಡಿದೆ. 1. ಮೀಸಲಾತಿಯ ಲಾಭ ಪಡೆಯುವ ವ್ಯಕ್ತಿಗಳು 1978ಕ್ಕಿಂತ ಮುಂಚೆಯೇ ಗುಜರಾತಿನಲ್ಲಿ ನೆಲೆಯೂರಿರಬೇಕು. 2. ವಾರ್ಷಿಕ 8 ಲಕ್ಷ ರು. ಒಳಗೆ ಆದಾಯ ಹೊಂದಿರಬೇಕು. ಇದನ್ನು ಬಿಟ್ಟರೆ, ಮನೆ ಅಥವಾ ಜಮೀನು ಎಷ್ಟಿದೆ ಎಂಬುದನ್ನು ಪರಿಗಣಿಸುವುದಿಲ್ಲ ಎಂದು ಸರ್ಕಾರ ಹೇಳಿದೆ.

ಇದರಿಂದಾಗಿ 1978ರ ನಂತರ ಗುಜರಾತಿನಲ್ಲಿ ನೆಲೆ ನಿಂತವರಿಗೆ ಮೀಸಲಾತಿಯ ಪ್ರಯೋಜನ ಸಿಗುವುದಿಲ್ಲ. ಈ ನಿರ್ಧಾರದ ಮೂಲಕ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಸ್ಥಳೀಯರಿಗಷ್ಟೇ ಆದ್ಯತೆ ಸಿಕ್ಕಂತಾಗುತ್ತದೆ. ಗುಜರಾತನ್ನೇ ತಮ್ಮ ತವರು ಮಾಡಿಕೊಂಡಿರುವ ಅನ್ಯ ರಾಜ್ಯಗಳ ಜನರಿಗೆ ಇದರಿಂದ ಅನ್ಯಾಯವಾಗಲಿದೆ ಎಂದು ಕಾಂಗ್ರೆಸ್‌ ಟೀಕಿಸಿದೆ.

ಗುಜರಾತಿನಲ್ಲಿ ಜೀವನ ಸಾಗಿಸುತ್ತಿರುವ ಸಹಸ್ರಾರು ಜನರು ಅದರಲ್ಲೂ ವಿಶೇಷವಾಗಿ ಹಿಂದಿ ಭಾಷಿಕ ರಾಜ್ಯಗಳ ಮಂದಿ ಮೀಸಲಿನಿಂದ ವಂಚಿತರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಉತ್ತರ ಭಾರತೀಯ ವಿಕಾಸ ಪರಿಷದ್‌ ಸರ್ಕಾರದ ಮೊರೆ ಹೋಗಲು ನಿರ್ಧರಿಸಿದೆ.

click me!