
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 11500 ಕೋಟಿ ರು. ವಂಚನೆ ಎಸಗಿರುವ ಆರೋಪ ಎದುರಿಸುತ್ತಿರುವ ಬಹುಕೋಟಿ ಆಭರಣ ಉದ್ಯಮಿ ನೀರವ್ ಮೋದಿ ಕುಟುಂಬ ಸಮೇತ ದೇಶ ಬಿಟ್ಟು ಪಲಾಯನ ಮಾಡಿದ್ದಾರೆ.
ಬ್ಯಾಂಕುಗಳಿಗೆ 9000 ಕೋಟಿ ರು. ಸಾಲ ಮರುಪಾವತಿಸದೆ ವಿದೇಶಕ್ಕೆ ಪಲಾಯನ ಮಾಡಿರುವ ವಿಜಯ್ ಮಲ್ಯ ರೀತಿಯಲ್ಲೇ ನೀರವ್ ಪರಾರಿಯಾಗಿದ್ದಾರೆ. ಈಗಿನ 11500 ಕೋಟಿ ರು. ಹಗರಣಕ್ಕಿಂತಲೂ ಮೊದಲು ಜ.29 ರಂದು ಪಂಜಾಬ್ ನ್ಯಾಷನಲ್ ಬ್ಯಾಂಕಿನ ಅಧಿಕಾರಿಗಳು 280 ಕೋಟಿ ರು. ವಂಚನೆ ಪ್ರಕರಣದಲ್ಲಿ ನೀರವ್ ವಿರುದ್ಧ ಸಿಬಿಐಗೆ ದೂರು ನೀಡಿದ್ದರು.
ಆದರೆ, ಅದಕ್ಕೂ ಮೊದಲೇ, ಅಂದರೆ ಜ.1ಕ್ಕೇ ನೀರವ್ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಬೆಲ್ಜಿಯಂ ಪೌರತ್ವ ಹೊಂದಿರುವ ಅವರ ಸೋದರ ನಿಶಾಲ್, ಅಮೆರಿಕದ ಪೌರತ್ವ ಹೊಂದಿರುವ ಅವರ ಪತ್ನಿ ಆ್ಯಮಿ ಹಾಗೂ ಅವರ ಉದ್ದಿಮೆಯ ಪಾಲುದಾರರಾಗಿರುವ ಗೀತಾಂಜಲಿ ಜ್ಯುವೆಲರಿಯ ಪ್ರವರ್ತಕ ಮೆಹುಲ್ ಚೋಕ್ಸಿ ಕೂಡ ವಿದೇಶಕ್ಕೆ ಪರಾರಿಯಾಗಿದ್ದಾರೆ. ಇವರೆಲ್ಲರೂ 280 ಕೋಟಿ ರು. ವಂಚನೆ ಪ್ರಕರಣದಲ್ಲಿ ಸಹ ಆರೋಪಿಗಳಾಗಿದ್ದಾರೆ.
ಸ್ವಿಜರ್‌ಲೆಂಡಿನಲ್ಲಿ ಇದ್ದಾರೆನ್ನಲಾದ ನೀರವ್ ಮೋದಿ ಜ.23ರಂದು ವಿಶ್ವ ಆರ್ಥಿಕ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಫೋಟೋ ತೆಗೆಸಿಕೊಂಡಿದ್ದ ಭಾರತೀಯ ಸಿಇಒಗಳ ಸಾಲಿನಲ್ಲಿ ಇದ್ದರು. ಅಧಿಕಾರಿಗಳು ನೀರವ್ ವಿರುದ್ಧ ಸಿಬಿಐಗೆ ದೂರು ನೀಡುವುದಕ್ಕಿಂತ 6 ದಿನಗಳ ಮೊದಲಷ್ಟೇ ಕ್ಲಿಕ್ಕಿಸಿದ ಈ ಫೋಟೋವನ್ನು ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ ಬಿಡುಗಡೆ ಮಾಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.