ರಾಯಚೂರು ವಿದ್ಯಾರ್ಥಿನಿ ಸಾವಿನ ರಹಸ್ಯ ಬಯಲು

By Web DeskFirst Published May 11, 2019, 7:42 AM IST
Highlights

ರಾಯಚೂರು ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿನ ಪ್ರಕರಣದ ರಹಸ್ಯ ಬಯಲಾಗಿದೆ. 

ಬೆಂಗಳೂರು :  ಇತ್ತೀಚೆಗೆ ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ರಾಯಚೂರಿನ ಎಂಜಿನಿಯರಿಂಗ್‌ ವಿದ್ಯಾರ್ಥಿನಿ  ನಿಗೂಢ ಸಾವಿನ ರಹಸ್ಯ ಬಯಲಾಗಿದ್ದು, ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ವರದಿಯಲ್ಲಿ ದೃಢಪಡಿಸಿದ್ದಾರೆ.

ಮೃತ ವಿದ್ಯಾರ್ಥಿನಿಯ ಕುತ್ತಿಗೆ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿದಂತಹ ಗುರುತು ಇದೆ. ಇದರ ಹೊರತು ಆಕೆಯ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಪತ್ತೆಯಾಗಿಲ್ಲ. ಘಟನಾ ಸ್ಥಳದಲ್ಲಿ ಆಕೆಯ ಚಪ್ಪಲಿಗಳು ಸಹ ಹಾಗೇ ಬಿದ್ದಿದ್ದವು. ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ಸಹ ಕುರುಹುಗಳು ಸಿಕ್ಕಿಲ್ಲ. ಈ ಅಂಶಗಳನ್ನು ವಿಶ್ಲೇಷಿಸಿದಾಗ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ ಎಂದು ಮರಣೋತ್ತರ ವರದಿಯಲ್ಲಿ ತಿಳಿಸಿರುವುದಾಗಿ ಸಿಐಡಿ ಉನ್ನತ ಮೂಲಗಳು ತಿಳಿಸಿವೆ.

ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಮೂರು ದಿನಗಳ ಬಳಿಕ ಘಟನೆ ಗೊತ್ತಾಗಿದೆ. ಹಾಗಾಗಿ ಆಕೆಯ ದೇಹವು ಕೊಳೆತ ಸ್ಥಿತಿಗೆ ತಲುಪಿತ್ತು. ಆತ್ಮಹತ್ಯೆಗೆ ಮುನ್ನ ಆಕೆ ಮೇಲೆ ದೈಹಿಕ ಹಲ್ಲೆ ನಡೆದಿರುವ ಕುರಿತು ಸಹ ಅಂಶಗಳು ಪತ್ತೆಯಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿರುವುದಾಗಿ ಮೂಲಗಳು ಹೇಳಿವೆ.

ಈ ಮರಣೋತ್ತರ ವರದಿಯು ವಿದ್ಯಾರ್ಥಿನಿ ಸಾವಿನ ಕುರಿತು ಎದ್ದಿದ್ದ ಪ್ರಶ್ನೆಗಳಿಗೆ ಉತ್ತರ ಒದಗಿಸಿದೆ. ಏ.13ರಂದು ಮನೆಯಿಂದ ಹೊರಬಂದ ವಿದ್ಯಾರ್ಥಿ, ಅಂದೇ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಂದು ಮಧ್ಯಾಹ್ನವೇ ಮಗಳು ಕಾಣೆಯಾಗಿದ್ದಾಳೆ ಎಂದು ಸ್ಥಳೀಯ ಪೊಲೀಸರಿಗೆ ಮೃತಳ ಪೋಷಕರು ದೂರು ಕೊಟ್ಟಿದ್ದರು.

ಕಳೆದ ಮೂರು ದಿನಗಳ ಹಿಂದೆ ಸಿಐಡಿ ಪೊಲೀಸರಿಗೆ ಮರಣೋತ್ತರ ವರದಿ ಸಲ್ಲಿಕೆಯಾಗಿದೆ. ಈ ವರದಿ ಆಧರಿಸಿ ಪೊಲೀಸರು ಈಗಾಗಲೇ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಬಂಧಿತನಾಗಿರುವ ಮೃತಳ ಸ್ನೇಹಿತ ಸುದರ್ಶನ್‌ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಆತ್ಮೀಯತೆಯೇ ತಪ್ಪಾಯಿತು:

ಪಿಯುಸಿಯಲ್ಲಿ ಆಕೆ, ಸುದರ್ಶನ್‌ ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. ಆಕೆ ವಿಜ್ಞಾನ ವಿದ್ಯಾರ್ಥಿನಿಯಾಗಿದ್ದರೆ, ಸುದರ್ಶನ್‌ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದ. ಆ ವೇಳೆ ಅವರ ಮಧ್ಯೆ ಸ್ನೇಹವಾಗಿದೆ. ಬಳಿಕ ಕ್ರಮೇಣ ಅವರಿಬ್ಬರಲ್ಲಿ ಆತ್ಮೀಯತೆ ಬೆಳೆದಿದೆ. ಪಿಯುಸಿ ಮುಗಿದ ಬಳಿಕವೂ ಗೆಳೆತನ ಹಾಗೆಯೇ ಮುಂದುವರೆದಿತ್ತು. ಮಧು ಎಂಜಿನಿಯರಿಂಗ್‌ ಕಾಲೇಜಿಗೆ ಸೇರಿದ್ದಳು. ಇತ್ತ ಸುದರ್ಶನ್‌ ಬಿಕಾಂ ಪದವೀಧರನಾದ ಎಂದು ಸಿಐಡಿ ಅಧಿಕಾರಿಗಳು ವಿವರಿಸಿದ್ದಾರೆ.

ಇತ್ತೀಚೆಗೆ ತನ್ನೊಡನೆ ಮಧು ಹೊಂದಿದ್ದ ಸಲುಗೆಯನ್ನೇ ತಪ್ಪಾಗಿ ಅರ್ಥೈಸಿಕೊಂಡ ಆತ, ಪ್ರೀತಿಸುವಂತೆ ದುಂಬಾಲು ಬಿದ್ದಿದ್ದ. ಇದಕ್ಕೆ ಆಕೆ ವಿರೋಧ ವ್ಯಕ್ತಪಡಿಸಿದ್ದಳು. ಇದರಿಂದ ಕೆರಳಿದ ಆತ, ಎರಡ್ಮೂರು ಬಾರಿ ಗೆಳತಿ ಜತೆ ಸಾರ್ವಜನಿಕವಾಗಿ ದುಂಡಾವರ್ತನೆ ತೋರಿದ್ದ. ಈ ನಡವಳಿಕೆಯಿಂದ ಬೇಸರಗೊಂಡು ಮಧು, ಆತನಿಂದ ಶಾಶ್ವತವಾಗಿ ಪ್ರತ್ಯೇಕವಾಗಲು ಯತ್ನಿಸಿದ್ದಳು. ಈ ಬೆಳವಣಿಗೆಯಿಂದ ಮತ್ತಷ್ಟುಆಕ್ರೋಶಿತನಾದ ಸುದರ್ಶನ್‌, ಕಾಲೇಜಿಗೆ ಬಂದಾಗ ಆಕೆ ಮೇಲೆ ಹಲ್ಲೆ ನಡೆಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಆತ್ಮಹತ್ಯೆ ದಿನವೂ ಹಲ್ಲೆ:

ಏ.13ರಂದು ಬೆಳಗ್ಗೆ ಮನೆಯಿಂದ ಹೊರ ಬಂದ ವಿದ್ಯಾರ್ಥಿನಿಯನ್ನು ರಸ್ತೆಯಲ್ಲಿ ಅಡ್ಡಗಟ್ಟಿದ್ದ ಸುದರ್ಶನ್‌ ಗಲಾಟೆ ಮಾಡಿದ್ದ. ಇದಾದ ನಂತರ ಆಕೆ ಪೋಷಕರ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಳು. ಹೀಗಾಗಿ ಸುದರ್ಶನ್‌ ನಡವಳಿಕೆಯಿಂದ ಬೇಸರಗೊಂಡು ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸಿಐಡಿ ಅಧಿಕಾರಿಗಳು ಶಂಕಿಸಿದ್ದಾರೆ.

click me!