ನಗರದ ವಾಯುಮಾಲಿನ್ಯ ತಡೆಯಲು ಮಾಸ್ಟರ್ ಪ್ಲಾನ್

Published : Dec 28, 2017, 10:12 AM ISTUpdated : Apr 11, 2018, 12:42 PM IST
ನಗರದ ವಾಯುಮಾಲಿನ್ಯ ತಡೆಯಲು ಮಾಸ್ಟರ್ ಪ್ಲಾನ್

ಸಾರಾಂಶ

ಬೆಂಗಳೂರಿನಲ್ಲಿ ಮಾಲಿನ್ಯ ಅಪಾಯಕಾರಿ ಮಟ್ಟ ತಲುಪದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಮಗ್ರ ಯೋಜನಾ ವರದಿ ಸಿದ್ಧಪಡಿಸುವ ಕುರಿತಂತೆ ಬುಧವಾರ ನಡೆದ ಬಿಬಿಎಂಪಿ ವಿಶೇಷ ಕೌನ್ಸಿಲ್ ಸಭೆಯಲ್ಲಿ ಸದಸ್ಯರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ ಗಳಿಂದ ಸಲಹೆಗಳನ್ನು ಪಡೆದುಕೊಳ್ಳಲಾಯಿತು.

ಬೆಂಗಳೂರು (ಡಿ.28): ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಗರದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ನಿಯಂತ್ರಿಸಲು 15 ವರ್ಷ ಹಳೆಯ ವಾಹನಗಳು ನಗರದಲ್ಲಿ ಸಂಚರಿಸದಂತೆ ನಿಷೇಧಿಸಬೇಕು, ತ್ಯಾಜ್ಯಕ್ಕೆ ಬೆಂಕಿ ಹಚ್ಚುವವರಿಗೆ 1-2 ಲಕ್ಷ ರು. ದಂಡ ವಿಧಿಸಬೇಕು, ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಲು 198 ವಾರ್ಡ್‌ಗಳಲ್ಲಿ ಮಾಲಿನ್ಯ ಮಾಪನ ಕೇಂದ್ರ ಆರಂಭಿಸಬೇಕು, 2 ಸ್ಟ್ರೋಕ್ ಆಟೋಗಳನ್ನು ಗುಜರಿಗೆ ಹಾಕಬೇಕು ಎಂಬುದು ಸೇರಿದಂತೆ ಹತ್ತು ಹಲವು ಸಲಹೆ ಸೂಚನೆಗಳನ್ನು  ಬಿಬಿಎಂಪಿ ಸದಸ್ಯರು ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾಲಿನ್ಯ ಅಪಾಯಕಾರಿ ಮಟ್ಟ ತಲುಪದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಮಗ್ರ ಯೋಜನಾ ವರದಿ ಸಿದ್ಧಪಡಿಸುವ ಕುರಿತಂತೆ ಬುಧವಾರ ನಡೆದ ಬಿಬಿಎಂಪಿ ವಿಶೇಷ ಕೌನ್ಸಿಲ್ ಸಭೆಯಲ್ಲಿ ಸದಸ್ಯರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ ಗಳಿಂದ ಸಲಹೆಗಳನ್ನು ಪಡೆದುಕೊಳ್ಳಲಾಯಿತು.

ಅಲ್ಲದೆ, ಶೇ.42 ವಾಯು ಮಾಲಿನ್ಯ ವಾಹನಗಳ ಸಂಚಾರದಿಂದ ಉಂಟಾಗುತ್ತಿರುವುದರಿಂದ ನಗರದ ಹೃದಯ ಭಾಗದಿಂದ ಎಲ್ಲಾ ಸರ್ಕಾರಿ, ಖಾಸಗಿ ಬಸ್ ನಿಲ್ದಾಣಗಳನ್ನು(ಬಿಎಂಟಿಸಿ ಹೊರತುಪಡಿಸಿ) ಹೊರ ವಲಯಕ್ಕೆ ವರ್ಗಾಯಿಸಬೇಕು ಎಂಬ ಸಲಹೆಯನ್ನು ಸದಸ್ಯರು ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ನಗರದಲ್ಲಿ ಉಂಟಾಗುತ್ತಿರುವ ಮಾಲಿನ್ಯದಲ್ಲಿ ಶೇ.42ರಷ್ಟು ವಾಹನಗಳ ಸಂಚಾರದಿಂದ ಉಂಟಾಗುತ್ತಿದೆ. ರಸ್ತೆ ಧೂಳಿನಿಂದ ಶೇ.20ರಷ್ಟು, ಕಟ್ಟಡ ನಿರ್ಮಾಣ ಕಾಮಗಾರಿಗಳಿಂದ ಶೇ.14ರಷ್ಟು, ಕೈಗಾರಿಕೆಯಿಂದ ಶೇ.14ರಷ್ಟು , ಜನರೇಟರ್‌ಗಳಿಂದ ಶೇ.7 ಮತ್ತು ಇನ್ನಿತರೆ ಕಾರಣಗಳಿಂದ ಶೇ.3ರಷ್ಟು ಮಾಲಿನ್ಯ ಉಂಟಾಗುತ್ತಿದೆ. ನಗರದ 16 ಸ್ಥಳಗಳಲ್ಲಿ ಇರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಲಿನ್ಯ ಮಾಪನ ಕೇಂದ್ರಗಳಲ್ಲೂ ನಗರದ ಮಾಲಿನ್ಯ ಪ್ರಮಾಣ ಮಿತಿ ಮೀರಿರುವುದು ಕಂಡುಬಂದಿದೆ.

ಅದರಲ್ಲೂ ಅಸ್ತಮಾ, ಶ್ವಾಸಕೋಶದ ಸಮಸ್ಯೆಗಳಿಗೆ ಕಾರಣವಾದ 10 ಮೈಕ್ರಾನ್‌ಗಿಂತ ಕಡಿಮೆ ಇರುವ ಪಾರ್ಕಿಕ್ಯುಲೇಟ್ ಪ್ರಮಾಣ ದುಪ್ಪಟ್ಟು ಪ್ರಮಾಣದಲ್ಲಿ ಹೆಚ್ಚಾಗಿದ್ದು, ಇದು ಅಪಾಯದ ಮಟ್ಟ ತಲುಪಿದೆ. ಹಾಗಾಗಿ ಸಂಬಂಧಪಟ್ಟ ಇಲಾಖೆಗಳ ಸಲಹೆ ಪಡೆದು ಮಾಲಿನ್ಯ ನಿಯಂತ್ರಣಕ್ಕೆ ಸಮಗ್ರ ಯೋಜನಾ ವರದಿ ರೂಪಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ವಾರ್ಡ್‌ಗೊಂದು ಮಾಪನ ಕೇಂದ್ರ: ಮಾಲಿನ್ಯ ನಿಯಂತ್ರಣಕ್ಕೆ ಜನ ಜಾಗೃತಿ ಅತಿ ಮುಖ್ಯವಾಗಿದೆ. ಈ ದೃಷ್ಟಿಯಿಂದ ಪ್ರತಿ ವಾರ್ಡ್‌ನಲ್ಲೂ ಒಂದೊಂದು ಮಾಲಿನ್ಯ ಮಾಪನ ಕೇಂದ್ರ ಆರಂಭಿಸಿ ಅಲ್ಲಿ ಲೈವ್ ಸ್ಟ್ರೀಮ್‌ನಲ್ಲಿ ಮಾಲಿನ್ಯ ಪ್ರಮಾಣದ ಏರಿಳಿತವನ್ನು ಸಾರ್ವಜನಿಕರಿಗೆ ಬಿತ್ತರಿಸಬೇಕು. ತಾವು ವಾಸಿಸುವ ವಾರ್ಡ್‌ನ ಮಾಲಿನ್ಯವನ್ನು ನಿತ್ಯ ಅವಲೋಕಿಸಿರುವುದರಿಂದ ಜಾಗೃತಿ ಮೂಡುತ್ತದೆ. ಇದರ ಸಾಧ್ಯಾಸಾಧ್ಯತೆ ಬಗ್ಗೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧಿಕಾರಿಗಳು ಮಾಹಿತಿ ನೀಡಬೇಕು ಎಂದು ಆಯುಕ್ತರು ಹೇಳಿದರು.

ಇದಕ್ಕೆ ಮೇಯರ್ ಆರ್.ಸಂಪತ್‌ರಾಜ್ ದನಿಗೂಡಿಸಿದರು. ಸಭೆಗೆ ಉತ್ತರಿಸಿದ ಕೆಎಸ್‌ಪಿಸಿಬಿಯ ಹಿರಿಯ ಪರಿಸರ ಅಧಿಕಾರಿ ಡಾ. ನಾಗಪ್ಪ, ನಗರದಲ್ಲಿ 21 ಕಡೆ ಪ್ರಸ್ತುತ ಮಾಲಿನ್ಯ ಮಾಪನ ಕೇಂದ್ರಗಳನ್ನು ಅಳವಡಿಸಲಾಗಿದೆ. ಆದರೆ, ನಿಯಮ ಪ್ರಕಾರ ಇನ್ನೂ ಮೂರು ಕೇಂದ್ರಗಳನ್ನು ಆರಂಭಿಸಬೇಕಿದೆ. ಲೈವ್‌ಸ್ಟ್ರೀಮ್‌ನಲ್ಲಿ ಮಾಲಿನ್ಯದ ಅಂಕಿ ಅಂಶಗಳು ದೊರೆಯುವಂತಹ ಕೇಂದ್ರಗಳನ್ನು ಆರಂಭಿಸಲು ಪ್ರತಿ ಕೇಂದ್ರಕ್ಕೆ 1.2 ಕೋಟಿ ರು. ವೆಚ್ಚ ತಗುಲಬಹುದು. 5 ಚದರ ಕಿಲೋ ಮೀಟರ್‌ಗೆ ಒಂದು ಮಾಪನ ಕೇಂದ್ರ ಅಳವಡಿಸಬಹುದು ಎಂದು ತಿಳಿಸಿದರು.

೧೫ ವರ್ಷಗಳ ಹಿಂದಿನ ಭಾರದ ವಾಹನಗಳು ನಗರ ಪ್ರವೇಶ ನಿಷೇಧಿಸಿದರೆ ಮಾಲಿನ್ಯ ಕಡಿಮೆಯಾಗಲಿದೆ. ಜೊತೆಗೆ ಪಾರ್ಕಿಂಗ್ ನೀತಿ, ರಸ್ತೆ ಗುಂಡಿ ಮುಚ್ಚುವುದು ಮುಂಜಾಗ್ರತ ಕ್ರಮ ಕೈಗೊಂಡಿದ್ದೇ ಆದಲ್ಲಿ ಶೇ.20ರಿಂದ 25ರಷ್ಟು ಮಾಲಿನ್ಯ ಕಡಿಮೆಗೊಳಿಸಬಹುದು ಎಂದು ಹೇಳಿದರು. ಈ ವೇಳೆ ಆಯುಕ್ತರು ಮಾತನಾಡಿ, ನಗರದ ಎಲ್ಲಾ ಬಸ್ ನಿಲ್ದಾಣಗಳನ್ನು ಹೊರವಲಯಗಳಿಗೆ ವರ್ಗಾಯಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ಇದಕ್ಕೆ ಮೇಯರ್ ದನಿಗೂಡಿಸಿ ಇದು ಉತ್ತಮ ಸಲಹೆಯಾಗಿದ್ದು ಈ ಸಂಬಂಧ ಮುಂದಿನ ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸೋಣ ಎಂದರು. ಕಸಕ್ಕೆ ಬೆಂಕಿ ಹಾಕೋರಿಗೆ ದಂಡ: ಮಾಲಿನ್ಯ ನಿಯಂತ್ರಣಕ್ಕಾಗಿ ರಸ್ತೆ, ಖಾಲಿ ನಿವೇಶನ ಸೇರಿದಂತೆ ಎಲ್ಲೆಂದರಲ್ಲಿ ಕಸ ಸುರಿದು ಬೆಂಕಿ ಹೆಚ್ಚುವವರಿಗೆ 1 ರಿಂದ 2 ಲಕ್ಷ ರು. ದಂಡ ವಿಧಿಸಬೇಕು ಎಂದು ಆಗ್ರಹ ಸದಸ್ಯರಿಂದ ವ್ಯಕ್ತವಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್, ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ನಿರ್ದೇಶನದಂತೆ ಕೆರೆ, ರಾಜಕಾಲುವೆಗಳಲ್ಲಿ ಕಸ, ಕಟ್ಟಡಗಳ ಅವಶೇಷ ಸುರಿಯುವವರಿಗೆ 5 ಲಕ್ಷ ರು. ದಂಡ ವಿಧಿಸಲು ಯೋಚಿಸಲಾಗಿದ್ದು, ಅದೇ ರೀತಿ ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ, ಕಸಕ್ಕೆ ಬೆಂಕಿ ಹಚ್ಚುವವರಿಗೆ 1ರಿಂದ 2 ಲಕ್ಷ ರು. ದಂಡ ವಿಧಿಸುವ ಬಗ್ಗೆಯೂ ಸೂಕ್ತ ನಿರ್ಣಯ ಕೈಗೊಳ್ಳೋಣ ಎಂದರು.

ಕಟ್ಟಡ ಅವಶೇಷ ಪುನರ್‌ಬಳಸಿ: ಸಭೆಗೆ ಆಗಮಿಸಿದ್ದ ಕ್ರೆಡಾಯ್ ಸಿಇಓ ಅನಿಲ್‌ರಾಜ್ ಮಾತನಾಡಿ, ನಗರದಲ್ಲಿ 3 ಸಾವಿರ ಡೆವಲಪರ್‌ಗಳಿದ್ದು, ಅಧಿಕೃತವಾಗಿ 250 ಡೆವಲಪರ್‌ಗಳು ಮಾತ್ರ ಕ್ರೆಡಾಯ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ನಗರದಲ್ಲಿ ಶೇ.14ರಷ್ಟು ಕಟ್ಟಡದ ಭಗ್ನಾವಶೇಷದಿಂದ ಮಾಲಿನ್ಯವಾಗುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ತಡೆಯಲು ಕಾಮಗಾರಿ ವೇಳೆ ಹೈಟೆಕ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ.

ಅಲ್ಲದೆ, ಶೇ.95ರಷ್ಟು ಪ್ರಮಾಣದ ಕಟ್ಟಡ ಅವಶೇಷಗಳನ್ನು ಪುನರ್ ಬಳಕೆ ಮಾಡಬಹುದಾಗಿದ್ದು, ಇಂತಹದ್ದೊಂದು ಪ್ರಯತ್ನದಲ್ಲಿ ಕ್ರೆಡಾಯ್ ಯಶಸ್ವಿಯಾಗಿದ್ದು, ಈ ಬಗ್ಗೆ ಎಲ್ಲ ನೋಂದಾಯಿತ ಡೆವಲಪರ್‌ಗಳಿಗೂ ಕೈಪಿಡಿ ಸಿದ್ಧಪಡಿಸಿ ನೀಡಲಾಗಿದೆ. ನಗರದಲ್ಲಿ ಯಾವುದೇ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವಾಗ ಈ ಕೈಪಿಡಿಯಲ್ಲಿನ ಅಂಶಗಳನ್ನು ಅನುಸರಿಸುವಂತೆ ಬಿಬಿಎಂಪಿ ಕೂಡ ಪರಿಗಣಿಸಬೇಕು ಎಂದು ಮನವಿ ಮಾಡಿದರು.

ಹೊಗೆ ಬಗ್ಗೆ ದೂರು ಕೊಟ್ರೆ 1000 ರುಪಾಯಿ ಬಹುಮಾನ : ನಗರದಲ್ಲಿ 6395 ಬಿಎಂಟಿಸಿ ಬಸ್ಸುಗಳು ಸಂಚರಿಸುತ್ತಿದ್ದು, ಇವುಗಳಲ್ಲಿ ಯೂರೋ ಸ್ಟ್ಯಾಂಡರ್ಡ್‌ 1,2 ಮತ್ತು 3 ಮಾದರಿ ಬಸ್ಸುಗಳಿವೆ. ಪ್ರತಿ ತಿಂಗಳು ಬಸ್ಸುಗಳ ಮಾಲಿನ್ಯ ತಪಾಸಣೆ ಮಾಡಲಾಗುತ್ತದೆ. ಸಾರ್ವಜನಿಕರು ಯಾವುದೇ ಬಸ್ ಹೊಗೆ ಉಗುಳುತ್ತಿರುವುದು ಕಂಡು ಬಂದರೆ ಬಿಎಂಟಿಸಿಗೆ ದೂರು ನೀಡಬಹುದು. ದೂರು ಸಾಬೀತಾದರೆ ದೂರು ನೀಡಿದವರಿಗೆ 1000 ರು. ಬಹುಮಾನ ನೀಡಲಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐದು ವರ್ಷ ಬಳಿಕ ಖುಲಾಯಿಸಿದ ಅದೃಷ್ಠ, 24 ಲಕ್ಷ ರೂ ದುಬೈ ಲಾಟರಿ ಗೆದ್ದ ಭಾರತ ಮೂಲದ ನರ್ಸ್‌
ಕೆಎಚ್‌ಬಿ ಬಡಾವಣೆ ನಿರ್ಮಾಣದಲ್ಲಿ ಭಾರೀ ಭ್ರಷ್ಟಾಚಾರ, ದಾಖಲೆಗಳಲ್ಲಿ ಒಂದು, ವಾಸ್ತವದಲ್ಲಿ ಇನ್ನೊಂದು!