13ರಂದು ಪಾಕಿಸ್ತಾನ ಮೇಲೆ ಮೋದಿ ವಿಮಾನ ಸಂಚಾರ?

By Web DeskFirst Published Jun 10, 2019, 7:51 AM IST
Highlights

13ರಂದು ಪಾಕಿಸ್ತಾನ ಮೇಲೆ ಮೋದಿ ವಿಮಾನ ಸಂಚಾರ?| ಕಿರ್ಗಿಸ್ತಾನಕ್ಕೆ ತೆರಳಲಿರುವ ಮೋದಿ| ಪಾಕ್‌ ಅನುಮತಿಗೆ ಭಾರತ ಮೊರೆ

ನವದೆಹಲಿ[ಜೂ.10]: ಕಿರ್ಗಿಸ್ತಾನ ರಾಜಧಾನಿ ಬಿಷ್ಕೇಕ್‌ನಲ್ಲಿ ಜೂ.13 ಮತ್ತು 14ರಂದು ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ ಶೃಂಗದಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿಮಾನ ಹಾದು ಹೋಗಲು ಅನುಮತಿ ನೀಡುವಂತೆ ಪಾಕಿಸ್ತಾನಕ್ಕೆ ಭಾರತ ಕೋರಿಕೊಂಡಿದೆ.

ಭಾರತದ 40ಕ್ಕೂ ಹೆಚ್ಚು ಸಿಆರ್‌ಪಿಎಫ್‌ ಯೋಧರ ಬಲಿ ಪಡೆದ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಾಕೋಟ್‌ ಮೇಲೆ ವೈಮಾನಿಕ ದಾಳಿ ನಡೆಸಿ ಜೈಷ್‌-ಎ-ಮೊಹಮ್ಮದ್‌ ಉಗ್ರರನ್ನು ಸಂಹಾರ ಮಾಡಿತ್ತು. ಇದರಿಂದ ಕ್ರುದ್ಧಗೊಂಡಿದ್ದ ಪಾಕಿಸ್ತಾನ, ಭಾರತದ ಯಾವುದೇ ವಿಮಾನಗಳನ್ನು ತನ್ನ ವಾಯುನೆಲೆಗೆ ಪ್ರವೇಶಿಸದಂತೆ ನಿರ್ಬಂಧ ಹೇರಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿಮಾನವು ಪಾಕಿಸ್ತಾನದ ವಾಯು ನೆಲೆ ಮೂಲಕ ಹಾದು ಹೋಗಲು ಅವಕಾಶ ಕಲ್ಪಿಸಬೇಕು ಎಂದು ಪಾಕಿಸ್ತಾನಕ್ಕೆ ಕೋರಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೇ 21ರಂದು ಬಿಷ್ಕೇಕ್‌ನಲ್ಲಿ ನಡೆದಿದ್ದ ಶಾಂಘೈ ಸಹಕಾರ ಸಂಘಟನೆಯ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದ ಅಂದಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರ ವಿಮಾನ ಪಾಕಿಸ್ತಾನ ಮೂಲಕ ಹಾದುಹೋಗಲು ಪಾಕಿಸ್ತಾನ ವಿಶೇಷ ಅವಕಾಶ ಕಲ್ಪಿಸಿಕೊಟ್ಟಿತ್ತು.

click me!