
ಬೆಂಗಳೂರು : ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನೀಡುವ 2017ನೇ ಸಾಲಿನ ‘ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ’ ಘೋಷಿಸಿದೆ. ರಾಜ್ಯದ ಮೂವರು ಶಿಕ್ಷಕರು ಆಯ್ಕೆಯಾಗಿದ್ದಾರೆ.
ಒಟ್ಟಾರೆ ದೇಶಾದ್ಯಂತ 45 ಶಿಕ್ಷಕರಿಗೆ ಈ ಬಾರಿ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಘೋಷಿಸಲಾಗಿದೆ. ಬೆಂಗಳೂರು ಉತ್ತರ ವಿಭಾಗದ ಜಿಲ್ಲಾ ಉಪನಿರ್ದೇಶಕರ ಕಚೇರಿಗೆ ಇತ್ತೀಚೆಗೆ ವರ್ಗಾವಣೆಗೊಂಡಿರುವ ಶಿಕ್ಷಕಿ ಶೈಲಾ, ಶಿಢ್ಲಘಟ್ಟತಾಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಡಾ.ಎಂ.ಶಿವಕುಮಾರ್ ಮತ್ತು ದೇವನಹಳ್ಳಿ ತಾಲೂಕಿನ ವಿಜಯಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕ ಡಾ.ಜಿ.ರಮೇಶಪ್ಪ ಆಯ್ಕೆಯಾಗಿದ್ದಾರೆ.
ಸೆ.5ರಂದು ದೆಹಲಿಯ ವಿಜ್ಞಾನಭವನದಲ್ಲಿ ನಡೆಯಲಿರುವ ಶಿಕ್ಷಕರ ದಿನಾಚರಣೆಯಲ್ಲಿ ಉಪರಾಷ್ಟ್ರಪತಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು . 50 ಸಾವಿರ ನಗದು, ಬೆಳ್ಳಿ ಪದಕ ಮತ್ತು ಪ್ರಮಾಣ ಪತ್ರವನ್ನು ಒಳಗೊಂಡಿರುತ್ತದೆ.
ಶೈಲಾ ಅವರಿಂದ ‘ಸರಳ ವಿಜ್ಞಾನ’
ಕಳೆದ 24 ವರ್ಷಗಳಿಂದ ಶೈಲಾ ಅವರು ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯವನ್ನು ಸರಳವಾಗಿ ಕಲಿಯುವ ವಿಧಾನವನ್ನು ತಿಳಿಸಿಕೊಟ್ಟಿದ್ದಾರೆ. ಈ ಸಾಧನೆ ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ.
ಶಿವಕುಮಾರ್ ‘ಗಣಿತ ಆ್ಯಪ್’
ಕಳೆದ 14 ವರ್ಷಗಳಿಂದ ಸರ್ಕಾರಿ ಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಎಂ. ಶಿವಕುಮಾರ್, ಗಣಿತವನ್ನು ಸರಳವಾಗಿ ಅರ್ಥೈಸುವ ಸಲುವಾಗಿ ಹಲವಾರು ವಿಡಿಯೋ, ಮೊಬೈಲ್ ಆ್ಯಪ್‌ಗಳನ್ನು ರೂಪಿಸಿದ್ದಾರೆ. ಯೂಟ್ಯೂಬ್ ನಲ್ಲಿ ತಮ್ಮ ಹೆಸರಿನಲ್ಲಿ ಖಾತೆ ತೆಗೆದು ಗಣಿತದ ಲೆಕ್ಕಗಳನ್ನು ಸುಲಭ ರೀತಿಯಲ್ಲಿ ಬಿಡಿಸಿ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳಿಸುವಂತೆ ಮಾಡಿದ್ದಾರೆ.
ರಮೇಶಪ್ಪ ‘ಪಠ್ಯೇತರ ನೆರವು’
ಡಾ. ಜಿ. ರಮೇಶಪ್ಪ ಅವರು ಶಾಲಾ ಮಕ್ಕಳಿಗೆ ಕ್ರೀಡೆ, ಯೋಗ, ಏರೋಬಿಕ್ಸ್, ನೃತ್ಯ ಮುಂದಾದವುಗಳಲ್ಲಿ ಉನ್ನತ ಮಟ್ಟಕ್ಕೆ ಕರೆದೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ. ರಾಜ್ಯ ಸರ್ಕಾರ ಈ ಹಿಂದೆ ರಾಜ್ಯ ಅತ್ಯುತ್ತಮ ಪ್ರಶಸ್ತಿ ನೀಡಿ ಗೌರವಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.