ಮೆಟ್ರೋ, ಸಾರಿಗೆ, ಟೋಲ್ ದರ ಪಾವತಿಗೆ ಒಂದೇ ಕಾರ್ಡ್

By Web DeskFirst Published Jun 2, 2019, 9:47 AM IST
Highlights

ದೇಶದಾದ್ಯಂತ ಎಲ್ಲಾ ಪೇಮೆಂಟ್ ಮಾಡಲಿ ಒಂದೇ ಕಾರ್ಡ್ ಜಾರಿಗೆ ತರುವ ಯೋಜನೆಗೆ ತಂತ್ರಜ್ಞಾನದ ಅಭಿವೃದ್ಧಿ ಪಡಿಸಲಾಗುತ್ತಿದೆ.  

ಬೆಂಗಳೂರು :  ಮೆಟ್ರೋ, ರಸ್ತೆ ಸಾರಿಗೆ ಪ್ರಯಾಣ, ಟೋಲ್ ದರ ಪಾವತಿ ಸೇರಿದಂತೆ ದೇಶಾದ್ಯಂತ ಎಲ್ಲ ರೀತಿಯ ಸಾರಿಗೆ ಸೇವೆಗಳಲ್ಲಿ ದರ ಪಾವತಿಗೆ ಕೇಂದ್ರ ಸರ್ಕಾರ ಚಾಲನೆ ನೀಡಿರುವ ‘ಒನ್ ನೇಷನ್ ಒನ್ ಕಾರ್ಡ್’ ಯೋಜನೆಗೆ ಪೂರಕವಾಗಿ ಬೆಂಗಳೂರು ಸೇರಿದಂತೆ ಎಲ್ಲ ಮೆಟ್ರೋಗಳಲ್ಲಿ ಎಎಫ್‌ಸಿ ಗೇಟ್‌ಗಳನ್ನು ತೆರೆಯಲು ಬೇಕಾದ ತಂತ್ರಜ್ಞಾನವನ್ನು ಬಿಇಎಲ್ ಅಭಿವೃದ್ಧಿಪಡಿಸಿದೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಿಇಎಲ್ ಮುಖ್ಯಸ್ಥ ಎಂ.ವಿ.ಗೌತಮ್, ಮೊದಲ ಹಂತವಾಗಿ ದೆಹಲಿಯಲ್ಲಿ ‘ಸ್ವಾಗತ್’ ಹೆಸರಿನಲ್ಲಿ ಎಎಫ್‌ಸಿ ಗೇಟ್‌ಗಳನ್ನು ಆರಂಭಿಸಲು ಸದ್ಯದಲ್ಲೇ ಚಾಲನೆ ದೊರೆಯಲಿದೆ. ನಂತರದ ದಿನಗಳಲ್ಲಿ ಬೆಂಗಳೂರು ಸೇರಿದಂತೆ ದೇಶದ ಎಲ್ಲಾ ಮೆಟ್ರೋ ನಿಲ್ದಾಣಗಳಿಗೂ ಹಂತ ಹಂತವಾಗಿ ಇದನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಈಗಾಗಲೇ ಅಹಮದಾಬಾದ್ ನಲ್ಲಿ ಚಾಲನೆ ನೀಡಿರುವ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (ಎನ್‌ಸಿಎಂಸಿ) ಮುಂದಿನ ದಿನಗಳಲ್ಲಿ ದೇಶಾದ್ಯಂತ ಅನುಷ್ಠಾನಕ್ಕೆ ಬರಲಿದೆ. ನಗದು ರಹಿತ ಪ್ರಯಾಣ ದೃಷ್ಟಿಯಿಂದ ರುಪೇ ಕಾರ್ಡ್ ಮಾದರಿಯಲ್ಲಿ ಸಾಮಾನ್ಯ ಕಾರ್ಡ್ ಜಾರಿಯಾಗುತ್ತಿದೆ. 

ಬ್ಯಾಂಕ್‌ಗಳ ಮೂಲಕ ಈ ಕಾರ್ಡ್ ವಿತರಣೆ ಜಾರಿಯಾಗಲಿದ್ದು, ಗ್ರಾಹಕರು ಈ ಕಾರ್ಡ್‌ನಲ್ಲಿ ನಿಗದಿತ ಪ್ರಮಾಣದ ಹಣ ಹೊಂದಿರಬೇಕು. ಗ್ರಾಹಕರು ಇಡೀ ದೇಶದಲ್ಲಿ ಎಲ್ಲ ರೀತಿಯ ಸಾರಿಗೆ ಸೇವೆಯಲ್ಲೂ ಕಾರ್ಡ್ ಬಳಸಬಹುದು. ಮೊದಲ ಹಂತದಲ್ಲಿ ದೇಶಾದ್ಯಂತ ಮೆಟ್ರೋ ಪ್ರಯಾಣಕ್ಕೆ ಈ ಕಾರ್ಡ್ ಬಳಕೆಗೆ ಸಹಾಯವಾಗುವಂತೆ ಬಿಇಎಲ್ ಎಎಫ್‌ಸಿ ಗೇಟ್ ಗಳನ್ನು ತೆರೆಯಲು ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ ಎಂದರು.

click me!