ಕರ್ನಾಟಕದ ಕಟ್ಟಕಡೆಯ ತಾಲೂಕು ಚಿಂಚೋಳಿಗೂ ರಾಜ್ಯದ ಶಕ್ತಿಕೇಂದ್ರ ವಿಧಾನಸೌಧಕ್ಕೂ ಎತ್ತಣದೆತ್ತ ಸಂಬಂಧ? ಅಂತ ನೀವು ಹುಬ್ಬೇರಿಸಬಹುದು. ಆದ್ರೆ ಇತಿಹಾಸವನ್ನೊಮ್ಮೆ ಕೆದಕಿ ನೋಡಿದಾಗ ಅಚ್ಚರಿ ಅನ್ನಿಸುವ ಸತ್ಯ ಗೋಚರವಾಗುತ್ತದೆ
ಕಲಬುರಗಿ[ಏ.28]: ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಯಾವ ಪಕ್ಷದ ಶಾಸಕರು ಇರ್ತಾರೋ ಅದೇ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿ ಇರುತ್ತೆ.. ಇದು ಒಂದೆರಡು ವರ್ಷಗಳ ಉದಾಹರಣೆ ಅಲ್ಲ.. ರಾಜ್ಯ ರಾಜಕಾರಣದ ಆರಂಭದಿಂದ ಇಲ್ಲಿಯವರೆಗೂ ತಿರುಗಿ ನೋಡಿದಾಗ ಚಿಂಚೋಳಿ ಯಾವ ಪಕ್ಷದ ವಶದಲ್ಲಿ ಇರುತ್ತದೋ ಅದೇ ಪಕ್ಷ ರಾಜ್ಯದಲ್ಲಿ ಅಧಿಕಾರ ನಡೆಸಿದೆ. ಚಿಂಚೋಳಿ ವಿಧಾನಸಭೆ ಕ್ಷೇತ್ರ ಅಸ್ತಿತ್ವಕ್ಕೆ ಬಂದ 1957ರಿಂದ 2018ರವರೆಗೆ ಚಿಂಚೋಳಿಯಲ್ಲಿ ಗೆದ್ದ ಶಾಸಕರ ಪಕ್ಷವೇ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿದೆ. ಇದು ಪವಾಡವೋ ಕಾಕತಾಳೀಯವೋ ಗೊತ್ತಿಲ್ಲ. 62 ವರ್ಷಗಳಿಂದ ಇದು ನಡೆದುಕೊಂಡು ಬಂದಿದೆ. ಹಾಗಾದ್ರೆ ಮತ್ತೆ ಮತ್ಯಾಕೆ ತಡ ಚಿಂಚೋಳಿಯ ಒಂದಿಷ್ಟು ರೋಚಕ ಇತಿಹಾಸ.
1957ರಲ್ಲಿ ಕಾಂಗ್ರೆಸ್‌ನ ವೀರೇಂದ್ರ ಪಾಟೀಲ ಗೆದ್ದಿದ್ದರು. ಆಗ ಕಾಂಗ್ರೆಸ್‌ನ ಬಿ.ಡಿ. ಜತ್ತಿ ಸರ್ಕಾರ ಆಡಳಿತ ನಡೆಸಿತ್ತು.
1962 ಹಾಗೂ 1967ರ ವಿಧಾನಸಭೆ ಚುನಾವಣೆಯಲ್ಲಿ ವೀರೇಂದ್ರ ಪಾಟೀಲ ಸತತವಾಗಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು. ಆಗಲೂ ಕಾಂಗ್ರೆಸ್ ಸರ್ಕಾರವೇ ಆಡಳಿತದಲ್ಲಿತ್ತು.
1972 ಹಾಗೂ 1977ರಲ್ಲಿ ಚಿಂಚೋಳಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ದೇವೇಂದ್ರಪ್ಪ ಘಾಳೆಪ್ಪ ಗೆಲುವು ಸಾಧಿಸಿದ್ದರು. ಈ ಸಂದರ್ಭದಲ್ಲಿ ದೇವರಾಜು ಅರಸು ಸರ್ಕಾರವಿತ್ತು.
ಮುಂದೆ 1983ರ ಚುನಾವಣೆಯಲ್ಲಿ ದೇವೇಂದ್ರಪ್ಪ ಘಾಳೆಪ್ಪ ಪುನರಾಯ್ಕೆಯಾಗಿದ್ದರು. ಆ ಸಮಯದಲ್ಲಿ ಆರ್.ಗುಂಡೂರಾವ್ ಸರ್ಕಾರವಿತ್ತು.
1989ರಲ್ಲಿ ವಿರೇಂದ್ರ ಪಾಟೀಲ ಮತ್ತೆ ಆಯ್ಕೆ ಯಾದರು. ಆಗ ಅವರೇ ಸಿಎಂ ಯಾದರು.
1994ರಲ್ಲಿ ವೈಜನಾಥ ಪಾಟೀಲ ಜನತಾ ದಳದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಆಗ ಜನತಾದಳದ ಸರ್ಕಾರ ರಚನೆಯಾಗಿ ದೇವೇಗೌಡ
ಸಿಎಂ ಯಾಗಿದ್ದರು.
1999ರಲ್ಲಿ ಕಾಂಗ್ರೆಸ್‌ನ ಕೈಲಾಸನಾಥ ಪಾಟೀಲ ಆಯ್ಕೆ ಯಾದ ಸಂದರ್ಭದಲ್ಲಿ ಎಸ್.ಎಂ. ಕೃಷ್ಣ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿತ್ತು.
2004ರಲ್ಲಿ ವೈಜನಾಥ ಪಾಟೀಲ ಜೆಡಿಎಸ್ ಶಾಸಕರಾದರೆ ಧರ್ಮಸಿಂಗ್ ನೇತೃತ್ವದಲ್ಲಿ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ, ತದನಂತರ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಬಿಜೆಪಿ ಸಮ್ಮಿಶ್ರ ಸರ್ಕಾರ ರಚನೆಯಾಗಿತ್ತು.
2008ರಲ್ಲಿ ಬಿಜೆಪಿಯಿಂದ ಸುನೀಲ ವಲ್ಯಾಪುರೆ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟ ಚಿಂಚೋಳಿಯಿಂದ ಚುನಾಯಿತರಾದರು. ಆಗ ಯಡಿಯೂರಪ್ಪ ಮುಖ್ಯಮಂತ್ರಿಯಾದರು.
2013ರಲ್ಲಿ ಡಾ. ಉಮೇಶ ಜಾಧವ ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾದರು. ಆಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂತು.
2018ರಲ್ಲಿ ಡಾ. ಜಾಧವ ಪುನರಾಯ್ಕೆಯಾದರು. ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್ ಜೆಡಿಎಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ
ಈಗ ಉಮೇಶ್ ಜಾದವ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಈಗ ಚಿಂಚೋಳಿಗೆ ಮತ್ತೆ ಉಪಚುನಾವಣೆ ನಡೆಯುತ್ತಿದೆ.. ಚಿಂಚೋಳಿಯಲ್ಲಿ ಕಾಂಗ್ರೆಸ್ ಗೆದ್ದರೆ, ಸಮ್ಮಿಶ್ರ ಸರ್ಕಾರ ಉಳಿಯುತ್ತದೆ. ಇಲ್ಲವೇ ಇಲ್ಲ ಬಿಜೆಪಿ ಗೆದ್ದರೆ ರಾಜ್ಯದ ಸಮ್ಮಿಶ್ರ ಸರಕಾರ ಪತನಗೊಂಡು ಬಿಜೆಪಿ ಸರ್ಕಾರ ರಚನೆಯಾಗುತ್ತದೆ ಎಂಬ ಲೆಕ್ಕಾಚಾರಗಳು ಇಲ್ಲಿನ ಜನರಲ್ಲಿ ಮೂಡಿ ಚರ್ಚೆ ಹುಟ್ಟು ಹಾಕುತ್ತಿವೆ..