ದೇಗುಲಗಳಿಂದ ನೆರೆಗೆ 120 ಕೋಟಿ ನೆರವು

By Web DeskFirst Published Aug 22, 2018, 8:07 AM IST
Highlights

ರಾಜ್ಯದಲ್ಲಿ ಭಾರೀ ಮಳೆ ಸುರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ಈ ನಿಟ್ಟಿನಲ್ಲಿ ಮುಜರಾಯಿ ದೇಗುಲಗಳು 120 ಕೋಟಿ ನೆರವು ನೀಡಬೇಕು ಎಂದು ಸರ್ಕಾರ ಆದೇಶ ನೀಡಿದೆ. 

ಬೆಂಗಳೂರು :  ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಸತತ ಮಳೆ ಹಾಗೂ ಪ್ರವಾಹದಿಂದ ಉಂಟಾಗಿರುವ ಹಾನಿ ಹಾಗೂ ಸಂತ್ರಸ್ತ ಜನರಿಗೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ಲಭ್ಯವಿರುವ ನಿಧಿಯಿಂದ ಒಟ್ಟು 120.30 ಕೋಟಿ ರು. ಸಹಾಯಾನುದಾನ ನೀಡುವಂತೆ ಸರ್ಕಾರ ಆದೇಶ ಹೊರಡಿಸಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಾಲಯ, ನಂಜನಗೂಡು ಶ್ರಿಕಂಠೇಶ್ವರ ದೇವಾಲಯ, ಮೈಸೂರಿನ ಚಾಮುಂಡೇಶ್ವರಿ ದೇವಾಲಯ ಮತ್ತು ಅರಮನೆ ಮುಜರಾಯಿ ದೇವಾಲಯಗಳು, ಕೊಲ್ಲೂರು ಮೂಕಾಂಬಿಕೆ ದೇವಾಲಯ, ಮಂದಾರ್ತಿ ದುರ್ಗಾ ಪರಮೇಶ್ವರಿ ದೇವಾಲಯ, ಕನಕಪುರ ತಾಲ್ಲೂಕಿನ ಕಬ್ಬಾಳಮ್ಮ ದೇವಾಲಯ, ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ, ಮಾಲೂರು ಚಿಕ್ಕತಿರುಪತಿಯ ವೆಂಕಟರಮಣಸ್ವಾಮಿ ದೇವಾಲಯ, ಸವದತ್ತಿಯ ರೇಣುಕಾ ಯಲ್ಲಮ್ಮ ದೇವಾಲಯ, ಬೆಂಗಳೂರಿನ ಬನಶಂಕರಿ ದೇವಾಲಯ ಸೇರಿದಂತೆ ರಾಜ್ಯದ ಒಟ್ಟು 16 ಜಿಲ್ಲೆಗಳ 81 ದೇವಾಲಯಗಳ ನಿಧಿಯಲ್ಲಿ ಲಭ್ಯವಿರುವ ಹಣದಲ್ಲಿ ಒಟ್ಟು 120.30 ಕೋಟಿ.ರು. ಸಹಾಯಾನುದಾನದ ರೂಪದಲ್ಲಿ ಮಳೆ ಅನಾಹುತ ಪ್ರದೇಶಗಳ ಪರಿಹಾರ ಕಾರ್ಯಗಳಿಗೆ ನೀಡುವಂತೆ ಮಂಗಳವಾರ ಸರ್ಕಾರ ಆದೇಶ ಮಾಡಿದೆ.

Latest Videos

ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳ ನಿಧಿಯ ಸೂಚಿತ ಮೊತ್ತದ ಅನುದಾನವನ್ನು ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ, ಟಿಪ್ಪು ಸುಲ್ತಾನ್‌ ರಸ್ತೆ ಶಾಖೆ, ಚಾಮರಾಜಪೇಟೆ ಬೆಂಗಳೂರು, ಇವರ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಉಳಿತಾಯ ಖಾತೆ ಸಂಖ್ಯೆ - 67211676062, ಐಎಫ್‌ಎಸ್‌ಸಿ ಸಂಖ್ಯೆ- ಎಸ್‌ಬಿಐಎನ್‌0070242 ಖಾತೆಗೆ ಆರ್‌ಟಿಜಿಎಸ್‌/ಎಇಎಫ್‌ಟಿ ಮೂಲಕ ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಜಮೆ ಮಾಡುವಂತೆ ಇಲಾಖೆಯ ಆಯುಕ್ತರಿಗೆ ನಿರ್ದೇಶಿಸಿ ಸರ್ಕಾರದ ಅಧೀನ ಕಾರ್ಯದರ್ಶಿ (ಮುಜರಾಯಿ) ಬಿ.ಎಸ್‌.ನಾಗರತ್ನಮ್ಮ ಆದೇಶ ಮಾಡಿದ್ದಾರೆ.

ಯಾವ ದೇವಾಲಯಗಳ ನಿಧಿಯಿಂದ ಹೆಚ್ಚು ಅನುದಾನ?

ಶ್ರೀ ಕ್ಷೇತ್ರ ಕುಕ್ಕೆಸುಬ್ರಹ್ಮಣ್ಯ ದೇವಾಲಯದ ನಿಧಿಯಿಂದ ಅತಿ ಹೆಚ್ಚು 3 ಕೋಟಿ ರು., ನಂಜನಗೂಡು ಶ್ರೀಕಂಠೇಶ್ವರ ದೇವಾಲಯ, ಮೈಸೂರಿನ ಚಾಮುಂಡೇಶ್ವರಿ ದೇವಾಲಯ ಮತ್ತು ಅರಮನೆ ಮುಜರಾಯಿ ದೇವಾಲಯಗಳು, ಕೊಲ್ಲೂರು ಮೂಕಾಂಬಿಕೆ ದೇವಾಲಯಗಳಿಂದ ತಲಾ 1 ಕೋಟಿ ರು., ಕಟೀಲಿನ ದುರ್ಗಾಪರಮೇಶ್ವರಿ ದೇವಾಲಯದಿಂದ 75 ಲಕ್ಷ ರು, ಘಾಟಿ ಸುಬ್ರಹ್ಮಣ್ಯ ದೇವಾಲಯ, ಸವದತ್ತಿ ರೇಣುಕಾ ಯಲ್ಲಮ್ಮ ದೇವಾಲಯ, ಕೊಪ್ಪಳದ ಹುಲಿಗೆಮ್ಮ ದೇವಾಲಯ, ಮಂದಾರ್ತಿ ದುರ್ಗಾಪರಮೇಶ್ವರಿ ದೇವಾಲಯಗಳಿಂದ ತಲಾ 50 ಲಕ್ಷ ರು., ಚಿಕ್ಕತಿರುಪತಿಯ ಪ್ರಸನ್ನ ವೆಂಕಟರಮಣ ದೇವಾಲಯ, ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಾಲಯ, ಗಂಜಾಂನ ನಿಮಿಷಾಂಬ ದೇವಾಲಯ, ಕಬ್ಬಾಳುವಿನ ಕಬ್ಬಾಳಮ್ಮ ದೇವಾಲಯಗಳಿಂದ ತಲಾ 25 ಲಕ್ಷ ರು. ಅನುದಾನ ನೀಡುವಂತೆ ಆದೇಶ ಮಾಡಲಾಗಿದೆ. ಬೆಂಗಳೂರಿನ ಬನಶಂಕರಿ ದೇವಾಲಯದಿಂದ 50 ಲಕ್ಷ ರು. ಸೇರಿದಂತೆ ರಾಜಧಾನಿಯ ಒಟ್ಟು 14 ದೇವಾಲಯಗಳಿಂದ ಒಟ್ಟು 90 ಕೋಟಿ ರು. ಅನುದಾನ ನೀಡುವಂತೆ ಸೂಚಿಸಲಾಗಿದೆ. ಉಳಿದ ಇನ್ನೂ ಹಲವು ದೇವಾಲಯಗಳಿಂದ ಕನಿಷ್ಠ 25 ಸಾವಿರ ರು.ನಿಂದ ಗರಿಷ್ಠ 10 ಲಕ್ಷ ರು. ವರೆಗೂ ಅನುದಾನ ನೀಡುವಂತೆ ಆದೇಶಿಸಲಾಗಿದೆ.

click me!