ಎಟಿಎಂ ಕಳ್ಳನಿಗಾಗಿ 17 ದಿನ ಸುತ್ತಾಡಿದ ಮಹಿಳೆ: ಕಳ್ಳ ಸಿಕ್ಕಿದ್ದೇಗೆ ಗೊತ್ತಾ?

By Web DeskFirst Published Jan 11, 2019, 5:12 PM IST
Highlights

ಹಣ ಎಗರಿಸಿದ ದುಷ್ಟನಿಗಾಗಿ 17 ದಿನ ಕಾದ ಮಹಿಳೆ| ಎಟಿಎಂ ಕಳ್ಳನನ್ನು ಹಿಡಿಯಲು 17 ದಿನ ಎಟಿಎಂ ತಿರುಗಾಡಿದ ಧೀರೆ| 17 ದಿನ ಸತತ ಪ್ರಯತ್ನ ಪಟ್ಟು ಕಳ್ಳನನ್ನು ಹಿಡಿದ ಮುಂಬೈನ ರೆಹಾನಾ ಶೇಖ್| ರಾತ್ರಿ ಏಕಾಂಗಿಯಾಗಿ ಕಳ್ಳನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಗಟ್ಟಿಗಿತ್ತಿ

ಮುಂಬೈ(ಜ.11): ಎಟಿಎಂ ಕಳ್ಳನೋರ್ವನನ್ನು ಹಿಡಿಯಲು ಮಹಿಳೆಯೊಬ್ಬರ ಸತತ 17 ದಿನಗಳ ಕಾಲ ಎಟಿಎಂ ಗೆ ಭೇಟಿ ನೀಡಿ ಸಫಲವಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಇಲ್ಲಿನ ರೆಹಾನಾ ಶೇಖ್ ಎಂಬ ಮಹಿಳೆ ಬಾಂದ್ರಾ ಬಳಿಯ ಎಟಿಎಂ ಗೆ ಭೇಟಿ ನೀಡಿ ಹಣ ವಿತ್ ಡ್ರಾ ಮಾಡಲು ಬಂದಿದ್ದಾರೆ. ಆದರೆ ತಾಂತ್ರಿಕ ದೋಷದಿಂದಾಗಿ ಎಟಿಎಂ ನಿಂದ ಹಣ ಬಂದಿಲ್ಲ. ಆಗ ಹೊರಗೆ ನಿಂತಿದ್ದ ಅನಾಮಿಕನೋರ್ವ ಸಹಾಯ ಮಾಡುವುದಾಗಿ ಒಳ ಬಂದು ಪ್ರಯತ್ನ ಮಾಡುವಂತೆ ನಟಿಸಿದ್ದಾನೆ.

Latest Videos

ಆದರೆ ಏನೇ ಮಾಡಿದರೂ ಹಣ ಬರದಾದಾಗ ರೆಹಾನಾ ಶೇಖ್ ಆತನಿಂದ ತಮ್ಮ ಎಟಿಎಂ ಪಡೆದು ವಾಪಸ್ಸಾಗಿದ್ದಾರೆ. ಆದರೆ ಅರ್ಧ ಗಂಟೆ ಬಳಿಕ ರೆಹಾನಾ ಅವರಿಗೆ ತಮ್ಮ ಮೊಬೈಲ್‌ನಲ್ಲಿ 10 ಸಾವಿರ ರೂ. ವಿತ್ ಡ್ರಾ ಆದ ಕುರಿತು ಮೆಸೆಜ್ ಬಂದಿದೆ.

ಇದರಿಂದ ಅನುಮಾನಪಟ್ಟ ರೆಹಾನಾ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಇಷ್ಟಕ್ಕೆ ಸುಮ್ಮನಾಗದ ರೆಹಾನಾ ಸತತ ೧೭ ದಿನಗಳ ಕಾಲ ಅದೇ ಎಟಿಎಂ ಸುತ್ತ ತಿರುಗಾಡಿದ್ದಾರೆ. ಕಳೆದ ಡಿ.18 ರಂದು ರೆಹಾನಾ ಹಣ ಕಳೆದುಕೊಂಡಿದ್ದು, ಜ.04ರ ವರೆಗೆ ಕಳ್ಳ ಸಿಗುವವರೆಗೂ ಆಕೆ ನಿರಂತರವಾಗಿ ಎಟಿಎಂ ಗೆ ಭೇಟಿ ನೀಡಿದ್ದಾರೆ.

ಅದರಂತೆ ಜ.04ರ ರಾತ್ರಿ ಕಳ್ಳ ಅದೇ ಎಟಿಎಂ ಮುಂದೆ ನಿಂತಿದ್ದು ರೆಹಾನೆ ಕಂಡು ಹಿಡಿದಿದ್ದಾರೆ. ಕೂಡಲೇ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಭೂಪೇಂದ್ರ ಮಿಶ್ರಾ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

ಕಳ್ಳನಿಗಾಗಿ ರಾತ್ರಿ ಸಮಯದಲ್ಲೂ ಏಕಾಂಗಿಯಾಗಿ ಎಟಿಎಂ ಸುತ್ತಿದ ರೆಹಾನಾ ಶೇಖ್ ಧೈರ್ಯಕ್ಕೆ ಎಲ್ಲೆಡೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

click me!