
ಜೈಪುರ್(ಡಿ.27): ತಾಯಿಗಿಂತ ಮಿಗಿಲಾದ ದೇವರಿಲ್ಲ ಅಂತಾರಲ್ಲ ಅದೆಷ್ಟು ನಿಜ ನೋಡಿ. ತಾಯಿ ಇಲ್ಲದ ಜೀವನ ನಿಜಕ್ಕೂ ಕಷ್ಟ. ಮೊದಲ ಹೆಜ್ಜೆ ಇಡಲು ಕಲಿಸಿದ ತಾಯಿ, ಮೊದಲ ತೊದಲು ನುಡಿ ಹೇಳಿಕೊಟ್ಟ ತಾಯಿಗೆ ಆ ದೇವರೂ ಕೂಡ ನಮಿಸುವುದು ಸತ್ಯ.
ಆದರೆ ಜನ್ಮ ಕೊಟ್ಟ ತಾಯಿ ಬದುಕಿದ್ದೂ ಆಕೆಯಿಂದ ದೂರ ಇರಬೇಕಾದ, ಆಕೆ ಎಲ್ಲಿದ್ದಾಳೆ ಎಂಬುದೇ ಗೊತ್ತಿಲ್ಲದೇ ಪರದಾಡಿದ, ಆಕೆಗಾಗಿ ಹಗಲೂ ರಾತ್ರಿ ಹುಡುಕಾಡಿದ ಮಗನೋರ್ವನ ಕರುಣಾಜನಕ ಕಥೆ ಇಲ್ಲಿದೆ.
ಇದು ರಾಜಸ್ಥಾನದ ನಾಗೌರ್ ಜಿಲ್ಲೆಯ ಕಥೆ. 57 ವರ್ಷಗಳ ಹಿಂದೆ ಇಲ್ಲಿನ ಸುವಾ ದೇವಿ ಎಂಬ ಮಹಿಳೆ ತಮ್ಮ 3 ವರ್ಷದ ಮಗ ಗಜರಾಜ್ ನಿಂದ ದೂರವಾಗಿದ್ದರು. ಇದಾದ ಬಳಿಕ ಸುವಾ ದೇವಿ 5 ದಶಕಗಳ ಕಾಲ ತಮ್ಮ ಮಗನಿಗಾಗಿ ಹುಡುಕಾಟ ನಡೆಸುತ್ತಿದ್ದರು.
ಅದರಂತೆ ತಾಯಿ ಇಲ್ಲದೇ ಬೆಳೆದ ಮಗ ಗಜರಾಜ್ ಕೂಡ ಾಕೆಯ ಹುಡುಕಾಟದಲ್ಲಿ 5 ದಶಕ ಸವೆಸಿದ್ದ. ಈ ಮಧ್ಯೆ ಸುವಾ ದೇವಿ ಅವರ ಗ್ರಾಮದವರೇ ಆದ ವಿಮಲಾ ದೇವಿ ಒಮ್ಮೆ ಬಿಜುಭಾ ಪಾಲಿ ಎಂಬ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರಿಗೆ ಗಜರಾಜ್ ಪರಚಯವಾಗಿತ್ತು.
ವಿಮಲಾ ದೇವಿ ಅವರ ಬಳಿ ಗಜರಾಜ್ ತಮ್ಮ ತಾಯಿಗಾಗಿ ಹುಡುಕಾಟ ನಡೆಸುತ್ತಿರುವ ಕುರಿತು ಹೇಳಿದ್ದರು. ಅದರಂತೆ ವಿಮಲಾ ದೇವಿ ತಮ್ಮ ತವರು ಮನೆಗೆ ಮರಳಿ ಸುವಾ ದೇವಿಯ ಕುರಿತು ಮಾಹಿತಿ ಕಲೆ ಹಾಕಿದರು.
ಆಶ್ಚರ್ಯದ ಸಂಗತಿ ಎಂದರೆ ಖುದ್ದು ಸುವಾ ದೇವಿ ತಮ್ಮ ಮಗನಿಗಾಗಿ ಹುಡುಕುತ್ತಾ ವಿಮಲಾ ದೇವಿ ಅವರ ಗ್ರಾಮಕ್ಕೆ ಬಂದಿದ್ದರು. ಇದನ್ನರಿತ ವಿಮಲಾ ದೇವಿ, ಕೊನೆಗೆ ಗಜರಾಜ್ ಅವರಿಗೆ ಫೋನ್ ಮಾಡಿ ಆತನ ತಾಯಿ ಸಿಕ್ಕಿರುವ ವಿಷಯ ತಿಳಿಸಿದ್ದಾರೆ.
ಕೂಡಲೇ ವಿಮಲಾ ದೇವಿ ಅವರ ಗ್ರಾಮಕ್ಕೆ ತೆರಳಿದ ಗಜರಾಜ್ ತನ್ನ ತಾಯಿಯನ್ನು ಕಂಡು ದಿಗ್ಭ್ರಾಂತನಾಗಿದ್ದಾನೆ. ತಾಯಿ-ಮಗನ ಈ ಮಿಲನ ಕಂಡು ಇಡೀ ಗ್ರಾಮವೇ ಆನಂದಬಾಷ್ಪ ಹರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.