65 ಕ್ಕೂ ಹೆಚ್ಚು ಶಾಸಕರು ಕಳೆದ ವರ್ಷದ ಹಣವನ್ನೇ ಬಳಸಿಲ್ಲ

By Web DeskFirst Published Jun 24, 2019, 8:15 AM IST
Highlights

65ಕ್ಕೂ ಹೆಚ್ಚು ಶಾಸಕರು ಕಳೆದ ವರ್ಷದ ಹಣವನ್ನೇ ಬಳಸಿಲ್ಲ | ಸಿಎಂ ಎಚ್ಡಿಕೆ ಬೇಸರ: ಶಾಸಕರಿಗೂ ಪತ್ರ ರವಾನೆ | ಈ ವರ್ಷದ ಶಾಸಕರ ನಿಧಿ ಬಳಕೆಗೂ ಪ್ರಸ್ತಾವನೆ ಸಲ್ಲಿಸಲು ಸೂಚನೆ
 

ಬೆಂಗಳೂರು (ಜೂ. 24): ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಕಳೆದ 2018-19ನೇ ಸಾಲಿನಲ್ಲಿ ಪ್ರತಿ ಕ್ಷೇತ್ರಕ್ಕೆ ಮೀಸಲಿಟ್ಟಿದ್ದ ಎರಡು ಕೋಟಿ ರು. ಅನುದಾನವನ್ನು ಬಳಸಿಕೊಳ್ಳುವ ಸಂಬಂಧ ವಿಧಾನಸಭೆ ಮತ್ತು ವಿಧಾನ ಪರಿಷತ್‌ನ 65ಕ್ಕೂ ಹೆಚ್ಚು ಶಾಸಕರು ಈವರೆಗೂ ಯಾವುದೇ ಪ್ರಸ್ತಾವನೆ ಸಲ್ಲಿಸಿದೆ ನಿರ್ಲಕ್ಷ್ಯ ತೋರಿದ್ದಾರೆ.

ಶಾಸಕರ ಈ ನಿರ್ಲಕ್ಷ್ಯದಿಂದ ಪ್ರಗತಿ ಕುಂಠಿತವಾಗಿದೆ ಎಂದು ಬೇಸರ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ತುರ್ತಾಗಿ ತಮ್ಮ ಕ್ಷೇತ್ರಗಳ ಪ್ರದೇಶಾಭಿವೃದ್ಧಿ ಯೋಜನೆಗಳಿಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.

225 ವಿಧಾನಸಭಾ ಸದಸ್ಯರ ಪೈಕಿ 31 ಶಾಸಕರು, 74 ವಿಧಾನ ಪರಿಷತ್‌ ಸದಸ್ಯರ ಪೈಕಿ 36 ಸದಸ್ಯರು ಇದುವರೆಗೆ ಯಾವೊಂದು ಯೋಜನೆಗೂ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ. ಅಷ್ಟೇ ಅಲ್ಲ, ಇನ್ನುಳಿದ ಶಾಸಕರ ಪೈಕಿ ಒಂಬತ್ತು ಶಾಸಕರನ್ನು ಹೊರತುಪಡಿಸಿ ಉಳಿದವರಾರೂ ತಮ್ಮ ಪ್ರದೇಶಾಭಿವೃದ್ಧಿಗೆ ಮೀಸಲಾದ ತಲಾ ಎರಡು ಕೋಟಿ ರು. ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡಿಲ್ಲ.

ಅಥಣಿ, ರಾಮದುರ್ಗ, ಚಿಕ್ಕಬಳ್ಳಾಪುರ, ಕೋಲಾರ, ನಂಜನಗೂಡು, ಚಾಮುಂಡೇಶ್ವರಿ, ಹುಣಸೂರು, ಶಿಕಾರಿಪುರ, ಗುರುಮಿಟ್ಕಲ್‌ ಕ್ಷೇತ್ರಗಳ ಶಾಸಕರು ಮಾತ್ರ ಪೂರ್ಣ ಅನುದಾನ ಬಳಸಿಕೊಂಡಿದ್ದಾರೆ. ಕೆಲ ಶಾಸಕರು ಒಂದಷ್ಟುಅನುದಾನ ಬಳಸಿಕೊಂಡಿದ್ದಾರಾದರೂ, ಮಿಕ್ಕ ಅನುದಾನಕ್ಕೆ ಯಾವುದೇ ಯೋಜನೆಯ ಪ್ರಸ್ತಾವನೆ ಸಲ್ಲಿಸಿಲ್ಲ. ಇದರಿಂದ ಪ್ರದೇಶಾಭಿವೃದ್ಧಿಗೆ ಮೀಸಲಾದ ಸಾಕಷ್ಟುಅನುದಾನ ಬಾಕಿ ಉಳಿದುಕೊಂಡಿದೆ.

ಈ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜೂ.13ರಂದು ಎಲ್ಲ ಶಾಸಕರು, ವಿಧಾನ ಪರಿಷತ್‌ ಸದಸ್ಯರಿಗೂ ಪತ್ರ ಬರೆದಿದ್ದಾರೆ. ಯಾವ್ಯಾವ ಶಾಸಕರು ಇದುವರೆಗೂ ಯಾವುದೇ ಯೋಜನೆಗೆ ಪ್ರಸ್ತಾವನೆ ಸಲ್ಲಿಸಿಲ್ಲ, ಯಾವ್ಯಾವ ಸದಸ್ಯರು ಎಷ್ಟುಪ್ರಸ್ತಾವನೆ ಸಲ್ಲಿಸಿದ್ದಾರೆ, ಅದಕ್ಕೆ ಬಳಕೆಯಾಗಿರುವ ಅನುದಾನ ಎಷ್ಟು, ಬಾಕಿ ಇರುವ ಅನುದಾನ ಎಷ್ಟುಎಂಬ ಅಂಕಿ ಅಂಶ ಸಮೇತ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ.

ಎಲ್ಲ ಶಾಸಕರೂ ಕೂಡಲೇ 2018-19ನೇ ಸಾಲಿನ ಉಳಿದ ಮೊತ್ತದ ಅನುದಾನಕ್ಕೆ ಮತ್ತು 2019-20ನೇ ಸಾಲಿನ ಪೂರ್ಣ ಪ್ರಮಾಣದ ಅನುದಾನ ಬಳಕೆಗೆ ಕಾಮಗಾರಿಗಳ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸುವಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪತ್ರದಲ್ಲಿ ಕೋರಿದ್ದಾರೆ.

click me!