
ಬೆಂಗಳೂರು[ಜೂ.24]: ಜನಸಾಮಾನ್ಯರಿಗೆ ಅತಿ ಕಡಿಮೆ ದರದಲ್ಲಿ ಉತ್ತಮ ದರ್ಜೆಯ ಔಷಧಿಗಳು ಸಕಾಲಕ್ಕೆ ಸಿಗುವ ಹಾಗೆ ರಾಜ್ಯದಲ್ಲಿ ಶೀಘ್ರದಲ್ಲೇ ಮುನ್ನೂರಕ್ಕೂ ಹೆಚ್ಚು ಜನೌಷಧಿ ಕೇಂದ್ರ ಹಾಗೂ ಪ್ರತ್ಯೇಕ ಔಷಧ ಉಗ್ರಾಣ ತೆರೆಯಲು ನಿರ್ಧರಿಸಲಾಗಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ನಗರದ ಬಾಗಲಗುಂಟೆಯಲ್ಲಿ ಭಾನುವಾರ ‘ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ’ ಉದ್ಘಾಟಿಸಿ ಮಾತನಾಡಿದ ಅವರು, ಅತಿ ಹಿಂದುಳಿದ ಪ್ರದೇಶಗಳಲ್ಲಿ ಹೆಚ್ಚು ಜನೌಷಧಿ ಕೇಂದ್ರ ತೆರೆಯಲು ಉದ್ದೇಶಿಸಲಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧೆಡೆ ಮುನ್ನೂರಕ್ಕೂ ಹೆಚ್ಚು ಜನೌಷಧಿ ಕೇಂದ್ರ ತೆರೆಯಲು ಯೋಜಿಸಲಾಗಿದೆ. ಈಗಾಗಲೇ ರಾಜ್ಯದ ಹಲವೆಡೆ ಜನೌಷಧಿ ಕೇಂದ್ರ ತೆರೆದಿದ್ದು, ಸಾಕಷ್ಟುಬಡ ರೋಗಿಗಳಿಗೆ ಅನುಕೂಲವಾಗಿದೆ ಎಂದರು.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಮಧ್ಯಂತರ ಚುನಾವಣೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಧ್ಯಂತರ ಚುನಾವಣೆ ನಡೆದರೆ ಜನರ ಮೇಲೆ ಹೊರೆ ಹೆಚ್ಚಾಗಲಿದೆ. ಹಾಗಾಗಿ ಜನರಿಗೆ ತೊಂದರೆ ಕೊಡಲು ನಾವು ಸಿದ್ಧರಿಲ್ಲ. ಮೈತ್ರಿ ಸರ್ಕಾರ ಪತನವಾದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುತ್ತೇವೆ. ಸಮ್ಮಿಶ್ರ ಸರ್ಕಾರದಲ್ಲಿ ಇದುವರೆಗೂ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ ಎಂದರು.
ಮೈತ್ರಿ ಸರ್ಕಾರದ ‘ಮೈತ್ರಿ ಪರ್ವ ಸಾಧನಾ ಪುಸ್ತಕ’ದ ಬಗ್ಗೆ ಮಾತನಾಡಿದ ಅವರು, ಇದು ಬೂಟಾಟಿಕೆಯ ಪುಸ್ತಕ. ಕುರ್ಚಿ ಉಳಿಸುವ ಬಗ್ಗೆ ಬರೆಯುವುದನ್ನು ಬಿಟ್ಟು ಬೇರೆಲ್ಲಾ ಬರೆದಿದ್ದಾರೆ ಎಂದು ವ್ಯಂಗ್ಯವಾಡಿದರು.
ಮಾಜಿ ಶಾಸಕ ಎಸ್.ಮುನಿರಾಜು, ಮುಖಂಡರಾದ ಉಮಾದೇವಿ, ನಾಗರಾಜು, ಲೋಕೇಶ್ ಸೇರಿದಂತೆ ಸ್ಥಳೀಯ ಮುಖಂಡರು, ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.