
ಶ್ರೀನಗರ: ಸರ್ಜಿಕಲ್ ದಾಳಿ ನಡೆದು ಎರಡು ವರ್ಷ ಕಳೆಯುವಷ್ಟರಲ್ಲೇ, ದಾಳಿ ನಡೆಸಲಾಗಿದ್ದ ಪಾಕಿಸ್ತಾನದ ಗಡಿ ತಾಣದಲ್ಲಿ ಉಗ್ರ ಸಂಘಟನೆಗಳು ಮತ್ತೆ ಸಕ್ರಿಯಗೊಂಡಿವೆ ಎಂಬ ವಿಷಯ ಬೆಳಕಿಗೆ ಬಂದಿದೆ. ಇದು ಇತ್ತೀಚೆಗಷ್ಟೇ ಭಾರತದೊಂದಿಗೆ ಶಾಂತಿ ಮಾತುಕತೆ ಪುನಾರಂಭಕ್ಕೆ ಆಹ್ವಾನಿಸಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ವಿಶ್ವಾಸಾರ್ಹತೆಯನ್ನು ಗಂಭೀರವಾಗಿ ಪ್ರಶ್ನಿಸುವಂತೆ ಮಾಡಿದೆ.
ಪಾಕಿಸ್ತಾನ ಸೇನೆ ಬೆಂಬಲಿತ ಉಗ್ರ ಸಂಘಟನೆಗಳು ಗಡಿ ನಿಯಂತ್ರಣ ರೇಖೆಯ ಬಳಿ ಹೊಸದಾಗಿ 8 ಲಾಂಚ್‌ಪ್ಯಾಡ್ (ನೆಲೆ) ಸ್ಥಾಪಿಸಿಕೊಂಡಿವೆ. ಸುಮಾರು 250 ಉಗ್ರರು 27 ಲಾಂಚ್ ಪ್ಯಾಡ್‌ಗಳ ಮೂಲಕ ಜಮ್ಮು ಕಾಶ್ಮೀರದ ಒಳಕ್ಕೆ ನುಸುಳಲು ಸಜ್ಜಾಗಿದ್ದಾರೆ ಎಂದು ಗುಪ್ತಚರ ಮೂಲಗಳು ಎಚ್ಚರಿಕೆ ನೀಡಿವೆ.
2016 ರ ಸೆ. 29ರಂದು ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ದಾಳಿಯ ವೇಳೆ ನಾಶ ಪಡಿಸಲಾದ ಎರಡು ಸ್ಥಳಗಳ ಪೈಕಿ ಒಂದಾದ ಲಿಪಾ ಕಣಿವೆಯಲ್ಲಿ ಉಗ್ರರು ಹೊಸದಾಗಿ 8 ಲಾಂಚ್ ಪ್ಯಾಡ್ ಸ್ಥಾಪಿಸಿಕೊಂಡಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿಯನ್ನು ಭಾರತೀಯ ಯೋಧರು ಹತ್ಯೆ ಮಾಡುವುದಕ್ಕೂ ಮುನ್ನ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ೧೪ ಲಾಂಚ್‌ಪ್ಯಾಡ್ ಗಳಲ್ಲಿ 160 ಉಗ್ರರು ಅಡಗಿಕೊಂಡಿದ್ದರು.
ಆದರೆ, ಬುಹ್ರಾನ್ ವಾನಿ ಬಳಿಕ ಗಡಿಯಾಚೆಗೆ ಉಗ್ರರ ಚಟುವಟಿಕೆ ದಿಢೀರನೆ ಏರಿಕೆ ಕಂಡಿದ್ದು, ದಾಳಿಗೆ ಸಜ್ಜಾಗಿ ನಿಂತಿರುವ ಸಂಖ್ಯೆ 230 ಕ್ಕೆ ಏರಿಕೆಯಾಗಿದೆ. ಅದರಲ್ಲೂ ಇಮ್ರಾನ್ ಖಾನ್ ಪ್ರಧಾನಿ ಆದ ಬಳಿಕ 8 ಉಗ್ರರ ಶಿಬಿರಗಳು ಹೊಸದಾಗಿ ತಲೆ ಎತ್ತಿವೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.