
ಬೆಂಗಳೂರು (ಮೇ. 31): ಸರಣಿ ಜಾಗೃತಿ ಕಾರ್ಯಕ್ರಮ ಹಾಗೂ ಕಠಿಣ ಕಾನೂನು ಇದ್ದರೂ ದೇಶದಲ್ಲಿ ತಂಬಾಕು ವ್ಯಸನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ದೇಶದಲ್ಲಿ 10.4 ಕೋಟಿ ತಂಬಾಕು ಉತ್ಪನ್ನಗಳ ವ್ಯಸನಿಗಳಿದ್ದು, ಈ ಪೈಕಿ ಶೇ.68 ರಷ್ಟು ಜನ ತಂಬಾಕು ದುಷ್ಪರಿಣಾಮಗಳ ಅರಿವಿದ್ದರೂ, ಪ್ರಜ್ಞಾಪೂರ್ವಕವಾಗಿಯೇ ವ್ಯಸನಿಗಳಾಗಿದ್ದಾರೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ.
‘ಸ್ಟ್ರೋಕ್ ಫ್ರೀ ವರ್ಲ್ಡ್ ಪ್ರತಿಷ್ಠಾನ’ ನಡೆಸಿರುವ ತನ್ನ ಅಧ್ಯಯನ ವರದಿಯಲ್ಲಿ, ವಿಶ್ವ ತಂಬಾಕು ನಿಯಂತ್ರಣ ದಿನಾಚಣೆ ಅಂಗವಾಗಿ ಗುರುವಾರ ತಂಬಾಕು ಉತ್ಪನ್ನಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಹಾಗೂ ಖಾಸಗಿ ಸಂಸ್ಥೆಗಳು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಇದೇ ರೀತಿ ಪ್ರತಿ ವರ್ಷ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರೂ, ತಂಬಾಕು ವ್ಯಸನಿಗಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ತಂಬಾಕು ವ್ಯಸನಿಗಳ ಪೈಕಿ, ಶೇ.68 ಮಂದಿ ವ್ಯಸನದಿಂದಾಗುವ ಎಲ್ಲ ದುಷ್ಪರಿಣಾಮಗಳ ಮಾಹಿತಿ ಇದ್ದರೂ ಮುಂದುವರೆಸಿದ್ದಾರೆ.
ಇವರಲ್ಲಿ ಶೇ.51 ಜನರಿಗೆ ವ್ಯಸನ ತ್ಯಜಿಸಬೇಕೆಂಬ ಇರಾದೆ ಇದ್ದರೂ ಸಾಧ್ಯವಾಗುತ್ತಿಲ್ಲ. ಶೇ.41 ರಷ್ಟು ಮಂದಿ ವ್ಯಸನ ತ್ಯಜಿಸಲು ಯಾವುದಾದರೂ ಸಹಾಯ ಬೇಕು ಎನ್ನುತ್ತಾರೆ. ಶೇ.೨೫ ಮಂದಿ ಇ-ಸೀಗರೇಟ್, ವೇಪಿಂಗ್ ಸಾಧನ ಸೇರಿ ಇತರೆ ಮಾರ್ಗಗಳಿಂದ ಧೂಮಪಾನ ಹಾಗೂ ತಂಬಾಕು ಉತ್ಪನ್ನಗಳ ಸೇವನೆ ತ್ಯಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದೆ.
ವರ್ಷಕ್ಕೆ 70 ಲಕ್ಷ ಮಂದಿ ಸಾವು: ವಿಶ್ವದಾದ್ಯಂತ ಪ್ರತಿ ವರ್ಷ 70 ಲಕ್ಷ ಮಂದಿ ತಂಬಾಕು ಉತ್ಪನ್ನಗಳಿಂದ ಉಂಟಾದ ಅನಾರೋಗ್ಯ ಸಮಸ್ಯೆಯಿಂದ ಮೃತಪಡುತ್ತಾರೆ. ಇದರಲ್ಲಿ ಶೇ.12 ರಷ್ಟು ಮಂದಿ ಪರೋಕ್ಷ ಧೂಮಪಾನ (ಪ್ಯಾಸಿವ್ ಸ್ಮೋಕಿಂಗ್) ಸಮಸ್ಯೆಯಿಂದ ಸಾವನ್ನಪ್ಪುತ್ತಿದ್ದರೆ, ತಂಬಾಕು ಉತ್ಪನ್ನಗಳ ಸೇವನೆಯಿಂದ ಪ್ರತಿ ವರ್ಷ ಹೃದಯ ಸಂಬಂಧಿ ಕಾಯಿಲೆ ಏರಿಕೆಯಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ನೀಡಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.