
ನವದೆಹಲಿ: ಏರುತ್ತಿರುವ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಿಂದಾಗಿ ಈ ಬಾರಿ ದೇಶದ ಅಭಿವೃದ್ಧಿ ದರ ಕೂಡ ಇಳಿಕೆಯಾಗುವ ಸಾಧ್ಯತೆಯಿದೆ. ಈ ಹಿಂದೆ 2018ರಲ್ಲಿ ಭಾರತದ ಸಮಗ್ರ ರಾಷ್ಟ್ರೀಯ ಉತ್ಪನ್ನ (ಜಿಡಿಪಿ)ದ ಬೆಳವಣಿಗೆ ದರ ಶೇ.7.5 ಇರಲಿದೆ ಎಂದು ಹೇಳಿದ್ದ ಜಾಗತಿಕ ರೇಟಿಂಗ್ ಏಜೆನ್ಸಿ ಮೂಡಿ, ಇದೀಗ ಅದನ್ನು ಶೇ.7.3ಕ್ಕೆ ಇಳಿಕೆ ಮಾಡಿದೆ.
ಈ ಇಳಿಕೆಗೆ ತೈಲ ಬೆಲೆಗಳೇ ಕಾರಣ ಎಂದು ಹೇಳಲಾಗುತ್ತಿದ್ದು, ಆದರೆ ಮೂಡಿಯು ಅಧಿಕೃತವಾಗಿ ವಿತ್ತೀಯ ಕೊರತೆಯ ಕಾರಣ ನೀಡಿದೆ. ಇನ್ನು, 2019ರಲ್ಲಿ ದೇಶದ ಜಿಡಿಪಿ ಅಭಿವೃದ್ಧಿ ಶೇ.7.5ರಷ್ಟಾಗಲಿದೆ ಎಂಬ ಈ ಹಿಂದಿನ ಮುನ್ಸೂಚನೆಯನ್ನು ಹಾಗೇ ಉಳಿಸಿಕೊಂಡಿದೆ.
ಕಳೆದ ನವೆಂಬರ್‌ನಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ಬಗ್ಗೆ ಆಶಾಭಾವನೆ ವ್ಯಕ್ತಪಡಿಸಿದ್ದ ಅಮೆರಿಕ ಮೂಲದ ಮೂಡಿ ಏಜೆನ್ಸಿ, ಭಾರತದ ರೇಟಿಂಗ್ ಅನ್ನು ಬಿಎಎ3 ದಿಂದ ಬಿಎಎ2ಗೆ ಹೆಚ್ಚಿಸಿತ್ತು. ಹಾಗೆಯೇ, ದೇಶದ ಆರ್ಥಿಕತೆ ಸ್ಥಿರವಾಗಿದೆ ಎಂಬುದರ ಬದಲು ಧನಾತ್ಮಕವಾಗಿದೆ ಎಂದೂ ಮುನ್ಸೂಚನೆ ನೀಡಿತ್ತು. ಅದರಿಂದಾಗಿ ಕೇಂದ್ರ ಸರ್ಕಾರದ ಸುಧಾರಣಾ ಕ್ರಮಗಳಿಗೆ ಬಹುದೊಡ್ಡ ಪ್ರೋತ್ಸಾಹ ದೊರಕಿತ್ತು. ಆದರೆ, ಈಗ ಅದೇ ಏಜೆನ್ಸಿ ತನ್ನ ರೇಟಿಂಗ್ ಇಳಿಸಿರುವುದು ಬಹುದೊಡ್ಡ ಹಿನ್ನಡೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಇನ್ನೊಂದು ಅಂತಾರಾಷ್ಟ್ರೀಯ ರೇಟಿಂಗ್ ಏಜೆನ್ಸಿಯಾಗಿರುವ ಫಿಚ್ ಕೂಡ ದೇಶದ ಜಿಡಿಪಿ ಅಭಿವೃದ್ಧಿ ದರದ ಮುನ್ಸೂಚನೆಯನ್ನು ಏರಿಕೆ ಮಾಡಿಲ್ಲ. 2019ರಲ್ಲಿ ಶೇ.7.3ರಷ್ಟುಹಾಗೂ 2020ರಲ್ಲಿ ಶೇ.7.5ರಷ್ಟುಭಾರತದ ಜಿಡಿಪಿ ಅಭಿವೃದ್ಧಿಯಾಗಲಿದೆ ಎಂದು ಅದು ಭವಿಷ್ಯ ನುಡಿದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.