ಗರ್ಭಿಣಿಯರಿಗೆ, ವೃದ್ಧರಿಗೆ ಮಾಸಾಶನ ನ. 01 ರಿಂದ ಜಾರಿ

By Web DeskFirst Published Oct 2, 2018, 10:09 AM IST
Highlights

ಗರ್ಭಿಣಿಯರಿಗೆ ₹2000, ವೃದ್ಧರಿಗೆ ₹1000 ಮಾಸಾಶನ ನ.1 ರಿಂದ ಜಾರಿ | ಪ್ರತಿ ವರ್ಷ ₹1000 ಏರಿಕೆ: ಸಿಎಂ | ಭರವಸೆಯಂತೆ ₹ 6000 ವೇತನ ಈ ವರ್ಷವಿಲ್ಲ

ಬೆಂಗಳೂರು (ಅ. 02): ಮುಂದಿನ ನವೆಂಬರ್‌ನಿಂದ ಹಿರಿಯ ನಾಗರಿಕರಿಗೆ ಮಾಸಿಕ 1 ಸಾವಿರ ರು. ಮಾಸಾಶನ ಹಾಗೂ ಗರ್ಭಿಣಿಯರಿಗೆ ಮಾಸಿಕ 2 ಸಾವಿರ ರು. ನೀಡುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯ ಸೋಮವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಹಿರಿಯ ನಾಗರಿಕರು ಬದುಕಿನ ಕೊನೆಗಾಲದಲ್ಲಿ ಯಾರ ಹಂಗಿಲ್ಲದೆ ಸ್ವಾಭಿಮಾನದಿಂದ ಬದುಕು ಸಾಗಿಸಬೇಕೆಂಬ ಉದ್ದೇಶದಿಂದ ಚುನಾವಣೆ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ಮಾಸಿಕ 5 ಸಾವಿರ ರು. ಮಾಸಾಶನ ಮತ್ತು ಗರ್ಭಿಣಿ ಮತ್ತು ಮಗುವಿನ ಆರೈಕೆಗಾಗಿ ಪ್ರಸವಕ್ಕೆ ಮೂರು ತಿಂಗಳು ಮುಂಚೆ ಮತ್ತು ನಂತರ ಮೂರು ತಿಂಗಳು ಸೇರಿದಂತೆ ಒಟ್ಟು ಆರು ತಿಂಗಳ ಕಾಲ ಮಾಸಿಕ 6 ಸಾವಿರ ರು. ನೀಡುವ ಯೋಜನೆ ಘೋಷಿಸಿದ್ದೆ.

ಈ ವರ್ಷವೇ ಎರಡೂ ಯೋಜನೆ ಅನುಷ್ಠಾನಗೊಳಿಸಲು ನಿರ್ಧರಿಸಿದ್ದೆ. ಆದರೆ, ಸಮ್ಮಿಶ್ರ ಸರ್ಕಾರ ಇರುವುದರಿಂದ ಹಲವು ಸವಾಲುಗಳಿವೆ. ಒಮ್ಮೆಗೆ ಎಲ್ಲ ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ. ಹಾಗಾಗಿ ಸರ್ಕಾರದ ಐದು ವರ್ಷದ ಅವಧಿಯಲ್ಲಿ ಈ ಎರಡೂ ಯೋಜನೆಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸುವುದಾಗಿ ಹೇಳಿದರು.

ಹಿರಿಯ ನಾಗರಿಕರಿಗೆ ಈ ಹಿಂದೆ ನೀಡುತ್ತಿದ್ದ 600 ರು. ಮಾಸಾಶನ ಮೊತ್ತವನ್ನು 1 ಸಾವಿರ ರು.ಗೆ ಹೆಚ್ಚಳ ಮಾಡಿದ್ದೇನೆ. ಇನ್ನು ಮುಂದೆ ಪ್ರತಿ ವರ್ಷ 1 ಸಾವಿರ ರು.ನಂತೆ ಐದು ವರ್ಷಗಳಲ್ಲಿ ಐದು ಸಾವಿರ ರು. ನೀಡಲಾಗುವುದು. ಮುಂದಿನ ನವೆಂಬರ್‌ನಿಂದಲೇ ಹಿರಿಯ ನಾಗರಿಕರಿಗೆ ಮಾಸಿಕ 1 ಸಾವಿರ ರು. ಮತ್ತು ಗರ್ಭಿಣಿಯರಿಗೆ ಮಾಸಿಕ 2 ಸಾವಿರ ರು. ನೀಡಲಾಗುವುದು ಎಂದರು.
 

click me!