ಮುಂಗಾರು ಮಳೆ ಮುಕ್ತಾಯ

By Web DeskFirst Published Oct 1, 2018, 11:43 AM IST
Highlights

ಪ್ರಸಕ್ತ ಮುಂಗಾರು ಋುತುವಿನ ಅಂತ್ಯದ ಬಳಿಕ ಶೇ.9ರಷ್ಟುಮಳೆಯ ಕೊರತೆ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಅಂದರೆ 2018ರಲ್ಲಿ ಸಾಮಾನ್ಯಕ್ಕಿಂತಲೂ ಕಡಿಮೆ ಮಳೆ ಸುರಿದಿದೆ.

ನವದೆಹಲಿ: ನಾಲ್ಕು ತಿಂಗಳು ಭಾರತದ ಬಹುತೇಕ ಭಾಗಗಳಿಗೆ ಮಳೆ ಸುರಿಸುವ ನೈಋುತ್ಯ ಮುಂಗಾರು ಮುಕ್ತಾಯದ ಹಂತ ತಲುಪಿದ್ದು, ರಾಜಸ್ಥಾನ ಮತ್ತು ಕಛ್‌ ಪ್ರದೇಶಗಳಲ್ಲಿ ಹಿಂದೆ ಸರಿಯಲು ಆರಂಭಿಸಿದೆ. ಪ್ರಸಕ್ತ ಮುಂಗಾರು ಋುತುವಿನ ಅಂತ್ಯದ ಬಳಿಕ ಶೇ.9ರಷ್ಟುಮಳೆಯ ಕೊರತೆ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಅಂದರೆ 2018ರಲ್ಲಿ ಸಾಮಾನ್ಯಕ್ಕಿಂತಲೂ ಕಡಿಮೆ ಮಳೆ ಸುರಿದಿದೆ. 36 ಹವಾಮಾನ ಉಪವಿಭಾಗಗಳ ಪೈಕಿ 12 ವಿಭಾಗಗಳಲ್ಲಿ ಮಳೆಯ ಕೊರತೆ ಉಂಟಾಗಿದೆ. ಉಳಿದ ಕಡೆಗಳಲ್ಲಿ ಸಾಮಾನ್ಯದಿಂದ ಅಧಿಕ ಮಳೆ ಸುರಿದಿದೆ. ದೇಶದ 662 ಜಿಲ್ಲೆಗಳ ಶೇ.38ರಷ್ಟುಭಾಗಗಳಲ್ಲಿ ಸಾಮಾನ್ಯಕ್ಕಿಂತಲೂ ಕಡಿಮೆ ಮಳೆ ಆಗಿದೆ.

ರಾಜಸ್ಥಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂಗಾರು ಹಿಂದೆ ಸರಿಯಲು ಆರಂಭಿಸಿದ್ದು, ಪಶ್ಚಿಮ ರಾಜಸ್ಥಾನ, ಕಛ್‌ ಹಾಗೂ ಉತ್ತರ ಅರಬ್ಬೀ ಸಮುದ್ರಗಳಲ್ಲಿ ಒಣಹವೆ ಆವರಿಸಿಕೊಂಡಿದೆ. ಅದೇ ರೀತಿ, ಪಂಜಾಬ್‌, ಹರ್ಯಾಣ, ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ಗುಜರಾತ್‌ಗಳಿಗೆ ಮುಂದಿನ 2-3 ದಿನಗಳಲ್ಲಿ ಒಣಹವೆ ಆವರಿಸಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಶನಿವಾರ ತಿಳಿಸಿದೆ.

ಮುಂಗಾರು ಸಾಮಾನ್ಯವಾಗಿ ಸೆ.1ರಿಂದ ಹಿಂದೆ ಸರಿಯಲು ಆರಂಭಿಸುತ್ತದೆ ಆದರೆ, ಈ ವರ್ಷ ಸುಮಾರು ಒಂದು ತಿಂಗಳಿನಷ್ಟುವಿಳಂಬಗೊಂಡಿದೆ. ಒಟ್ಟಾರೆಯಾಗಿ ಸಾಮಾನ್ಯಕ್ಕಿಂತ ಶೇ.9ರಷ್ಟುಮಳೆಯ ಕೊರತೆ ಉಂಟಾಗಿದ್ದು, 2015ರ ಬಳಿಕ ಅತಿ ಕಡಿಮೆ ಮಳೆಯ ಪ್ರಮಾಣ ಎನಿಸಿದೆ.

ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಬರ: ಕರ್ನಾಟಕ ಹಾಗೂ ಆಂಧ್ರ ಪ್ರದೇಶದ ಕೆಲವು ಜಿಲ್ಲೆಗಳು ಬರಗಾಲ ಪರಿಸ್ಥಿತಿ ಇದ್ದು, ಒಂದು ವೇಳೆ ಚಳಿಗಾಲದಲ್ಲಿ ಹಿಂಗಾರು ಮಳೆ ಸುರಿಯದೇ ಇದ್ದರೆ ಗಂಭೀರ ನೀರಿನ ಸಮಸ್ಯೆ ಎದುರಿಸಲಿವೆ.

ಇದೇ ವೇಳೆ ದಕ್ಷಿಣ ಪ್ರಸ್ಥಭೂಮಿ (ತಮಿಳುನಾಡು, ಆಂಧ್ರ ಕರಾವಳಿ, ರಾಯಲ ಸೀಮೆ, ಕರ್ನಾಟಕ ದಕ್ಷಿಣ ಒಳನಾಡು)ಯಲ್ಲಿ ಸಾಮಾನ್ಯ ಮಳೆ ಆಗಿದ್ದು, ದೀರ್ಘ ಸರಾಸರಿಯಲ್ಲಿ ಶೇ.89​ರಿಂದ ಶೇ.111ರಷ್ಟುಮಳೆ ಸುರಿಯುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

click me!