ಹಿಂದೂಗಳೇ ಒಂದಾಗಿ : ಭಾಗವತ್ ಕರೆ

By Web DeskFirst Published Sep 9, 2018, 11:43 AM IST
Highlights

ಷಿಕಾಗೊದಲ್ಲಿ 1983ರಲ್ಲಿ ನಡೆದಿದ್ದ ಸ್ವಾಮಿ ವಿವೇಕಾನಂದರ ಐತಿಹಾಸಿಕ ಧಾರ್ಮಿಕ ಭಾಷಣದ 125ನೇ ವರ್ಷಾಚರಣೆಯ ಸ್ಮರಣಾರ್ಥ ಆಯೋಜಿಸಲಾಗಿದ್ದ ಎರಡನೇ ವಿಶ್ವ ಹಿಂದೂ ಕಾಂಗ್ರೆಸ್‌ ನಲ್ಲಿ ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಮಾತನಾಡಿ ಒಂದು ಸಮಾಜವಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ಹಿಂದೂ ಸಮುದಾಯ ಸಮೃದ್ಧವಾಗಬಲ್ಲದು ಎಂದು ಹೇಳಿದ್ದಾರೆ. 

ಷಿಕಾಗೋ: ಹಿಂದೂಗಳಿಗೆ ಪ್ರಾಬಲ್ಯ ಮೆರೆಯುವ ಉದ್ದೇಶವಿಲ್ಲ, ಒಂದು ಸಮಾಜವಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ಹಿಂದೂ ಸಮುದಾಯ ಸಮೃದ್ಧವಾಗಬಲ್ಲದು ಎಂದು ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ. ಇಲ್ಲಿ ನಡೆದ ಎರಡನೇ ವಿಶ್ವ ಹಿಂದೂ ಕಾಂಗ್ರೆಸ್‌ನಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಷಿಕಾಗೊದಲ್ಲಿ 1983ರಲ್ಲಿ ನಡೆದಿದ್ದ ಸ್ವಾಮಿ ವಿವೇಕಾನಂದರ ಐತಿಹಾಸಿಕ ಧಾರ್ಮಿಕ ಭಾಷಣದ 125ನೇ ವರ್ಷಾಚರಣೆಯ ಸ್ಮರಣಾರ್ಥ ಎರಡನೇ ವಿಶ್ವ ಹಿಂದೂ ಕಾಂಗ್ರೆಸ್‌ ಆಯೋಜಿಸಲಾಗಿದೆ.

ಮಾನವ ಜನಾಂಗದ ಒಳಿತಿಗಾಗಿ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸುವಂತೆ ಅವರು ಸಮುದಾಯದ ನಾಯಕರನ್ನು ಒತ್ತಾಯಿಸಿದರು. ಇಡೀ ಜಗತ್ತನ್ನೇ ಒಂದು ತಂಡವಾಗಿ ಒಗ್ಗೂಡಿಸುವುದಕ್ಕೆ ಅಹಂ ನಿಯಂತ್ರಣದಲ್ಲಿರಬೇಕು ಮತ್ತು ಸಹಮತವನ್ನು ಸ್ವೀಕರಿಸಲು ಕಲಿಯಬೇಕು. ಉದಾಹರಣೆಗೆ, ಶ್ರೀಕೃಷ್ಣ ಮತ್ತು ಯುಧಿಷ್ಟಿರರ ನಡುವೆ ಯಾವತ್ತೂ ಪರಸ್ಪರ ಭಿನ್ನಾಭಿಪ್ರಾಯ ಸೃಷ್ಟಿಯಾಗಲಿಲ್ಲ ಎಂದು ಭಾಗವತ್‌ ಸ್ಮರಿಸಿದರು.

ಹಿಂದೂ ಸಮಾಜ ದೊಡ್ಡ ಸಂಖ್ಯೆಯ ಪ್ರತಿಭಾನ್ವಿತರನ್ನು ಹೊಂದಿದೆ. ಆದರೆ, ಅವರು ಯಾವತ್ತೂ ಒಂದುಗೂಡಲಿಲ್ಲ. ಹಿಂದೂಗಳು ಒಗ್ಗೂಡುವುದೇ ದೊಡ್ಡ ಕಷ್ಟದ ವಿಷಯ ಎಂದು ಅವರು ತಿಳಿಸಿದರು. ಹಿಂದೂಗಳು ಯಾರನ್ನೂ ವಿರೋಧಿಸುವುದಿಲ್ಲ. ನಾವು ಕ್ರಿಮಿಗಳಿಗೂ ಬದುಕಲು ಬಿಡುತ್ತೇವೆ. ಕೆಲವರು ವಿರೋಧಿಸುವವರು ಇರಬಹುದು. ಅವರಿಗೆ ಯಾವುದೇ ಹಾನಿಯಾಗದಂತೆ ಅವರನ್ನು ನಿರ್ವಹಿಸಬೇಕು ಎಂದು ಭಾಗವತ್‌ ಹೇಳಿದರು.

ಹಿಂದುತ್ವ ಎಂದರೆ ಒಂದು ಜೀವನ ವಿಧಾನ, ಆ ರೀತಿ ಬದುಕುವುದರಿಂದ ಒಬ್ಬ ಹಿಂದೂ ಆಗಬಹುದು ಎಂದು ಇದೇ ವೇಳೆ ಮಾತನಾಡಿದ ನಟ ಅನುಪಮ್‌ ಖೇರ್‌ ಹೇಳಿದ್ದಾರೆ. ವಿಶ್ವ ಹಿಂದೂ ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಪಿ. ಕೊಠಾರಿ ಮತ್ತು ರಿಪಬ್ಲಿಕ್‌ ಆಫ್‌ ಸುರಿನಾಮೆಯ ಉಪಾಧ್ಯಕ್ಷ ಅಶ್ವಿನ್‌ ಅಧೀನ್‌ ಈ ವೇಳೆ ಮಾತನಾಡಿದರು.

ಸಿಂಹ ಏಕಾಂಗಿಯಾಗಿದ್ದರೆ, ಕಾಡುನಾಯಿ ದಾಳಿ

ಸಿಂಹ ಒಂದೇ ಆಗಿದ್ದರೆ, ಕಾಡು ನಾಯಿಗಳು ದಾಳಿ ನಡೆಸಿ, ಸಿಂಹವನ್ನು ನಾಶಪಡಿಸಬಲ್ಲವು. ನಾವು ಅದನ್ನು ಮರೆಯಕೂಡದು ಎಂದೂ ಭಾಗವತ್‌ ಇದೇ ವೇಳೆ ತಿಳಿಸಿದರು. ಅವರ ಈ ಹೇಳಿಕೆ ದೇಶದಲ್ಲಿ ಪ್ರತಿಪಕ್ಷಗಳಲ್ಲಿ ಆಕ್ರೋಶವನ್ನುಂಟು ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರಿಪ ಬಹುಜನ ಮಹಾಸಂಘದ ನಾಯಕ ಪ್ರಕಾಶ್‌ ಅಂಬೇಡ್ಕರ್‌, ದೇಶದ ಪ್ರತಿಪಕ್ಷಗಳನ್ನು ನಾಯಿಗಳೆಂದು ಪ್ರಸ್ತಾಪಿಸಿರುವ ಭಾಗವತರ ಈ ಮಾನಸಿಕತೆಯನ್ನು ಖಂಡಿಸುತ್ತೇನೆ ಎಂದಿದ್ದಾರೆ.

click me!