ಹುತಾತ್ಮ ಯೋಧರು, ಪೊಲೀಸರ ಕುಟುಂಬಕ್ಕೆ ಕೇಂದ್ರ ಸರ್ಕಾರ ಗುಡ್ ನ್ಯೂಸ್

By Web DeskFirst Published Jun 1, 2019, 9:39 AM IST
Highlights

ಹುತಾತ್ಮರಾಗುವ ಯೋಧರ ಮಕ್ಕಳಿಗೆ ನೀಡುವ ವಿದ್ಯಾರ್ಥಿ ವೇತನವನ್ನು ಹೆಚ್ಚಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಇದರೊಂದಿಗೆ ರಾಜ್ಯ ಪೊಲೀಸ್ ಕುಟುಂಬಗಳಿಗೆ ಈ ಯೋಜನೆ ವಿಸ್ತರಿಸುತ್ತಿದೆ. 

ನವದೆಹಲಿ: ದೇಶ ಸೇವೆ ವೇಳೆ ಹುತಾತ್ಮರಾಗುವ ಯೋಧರ ಮಕ್ಕಳಿಗೆ ನೀಡುವ ವಿದ್ಯಾರ್ಥಿ ವೇತನವನ್ನು ಹೆಚ್ಚಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಜೊತೆಗೆ ಇದುವರೆಗೆ ಸೇನೆ, ಅರೆ ಸೇನಾ ಪಡೆ ಸಿಬ್ಬಂದಿಗೆ ಮಾತ್ರವೇ ಲಭ್ಯವಿದ್ದ ಯೋಜನೆಯನ್ನು ಇನ್ನು ಮುಂದೆ ರಾಜ್ಯಗಳ ಪೊಲೀಸರ ಕುಟುಂಬಕ್ಕೂ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ. ಗುರುವಾರಷ್ಟೇ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಶುಕ್ರವಾರ ತನ್ನ ಮೊದಲ ಸಂಪುಟ ಸಭೆ ನಡೆಸಿದ್ದು, ಅದರಲ್ಲಿ ಮೊದಲ ಯೋಜನೆಯಾಗಿ ಇದನ್ನು ಅನುಮೋದಿಸಿದೆ.

ದೇಶ ಸೇವೆ ವೇಳೆ ಉಗ್ರರು ಅಥವಾ ನಕ್ಸಲರ ವಿರುದ್ಧ ಹೋರಾಡುವ ವೇಳೆ ಪ್ರಾಣ ಸಮರ್ಪಣೆ ಮಾಡುವ ಯೋಧರ ಮಕ್ಕಳಿಗೆ ರಾಷ್ಟ್ರೀಯ ರಕ್ಷಣಾ ನಿಧಿಯಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಗಂಡು ಮಕ್ಕಳಿಗೆ ಈ ವಿದ್ಯಾರ್ಥಿ ವೇತನ ಪ್ರಮಾಣವು ಮಾಸಿಕ 2000 ರು. ಇದ್ದು, ಅದನ್ನೀಗ 2500 ರು.ಗೆ ಹೆಚ್ಚಿಸಲಾಗಿದೆ. ಅದೇ ರೀತಿ ಹೆಣ್ಣು ಮಕ್ಕಳಿಗೆ ಇದ್ದ ವಿದ್ಯಾರ್ಥಿ ವೇತನ ಪ್ರಮಾಣವನ್ನು 2250ರು.ನಿಂದ 3000 ರು.ಗೆ ಹೆಚ್ಚಿಸಲಾಗಿದೆ.

ಪ್ರತಿ ವರ್ಷ ಸುಮಾರು 7750 ಮಕ್ಕಳಿಗೆ ಈ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ.

ಪೊಲೀಸರಿಗೂ ವಿಸ್ತರಣೆ:  ಇದುವರೆಗೆ ಕೇಂದ್ರೀಯ ಪಡೆಗಳ ಯೋಧರಿಗೆ ಮಾತ್ರ ಲಭ್ಯವಿದ್ದ ಯೋಜನೆಯನ್ನು ಇದೀಗ ರಾಜ್ಯ ಪೊಲೀಸರ ಕುಟುಂಬಕ್ಕೂ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೆ ವಾರ್ಷಿಕ 500 ಕುಟುಂಬಗಳಿಗೆ ಈ ಯೋಜನೆ ಜಾರಿ ಮಿತಿಯನ್ನು ಸರ್ಕಾರ ಹಾಕಿಕೊಂಡಿದೆ.

click me!