
ನವದೆಹಲಿ(ಅ.18): ಉರಿ ಸೇನಾ ನೆಲೆ ಮೇಲೆ ಉಗ್ರರ ದಾಳಿ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಸರ್ಜಿಕಲ್ ದಾಳಿ ಮೂಲಕ ಉಗ್ರರ ನೆಲೆಗಳನ್ನು ಭಾರತದ ಸೇನೆ ಧ್ವಂಸ ಮಾಡಿದ ಬಳಿಕ ಇದೀಗ 68 ರಾಷ್ಟ್ರಗಳ ಭೇಟಿಗೆ ಮೋದಿ ಸರ್ಕಾರ ಮುಂದಾಗಿದೆ. ಅಕ್ಟೋಬರ್ ಮತ್ತು ನವೆಂಬರ್ ಅಂತ್ಯದೊಳಗೆ ಮೋದಿ ಸಚಿವಾಲಯದ ಸಚಿವರು 68 ದೇಶಗಳಿಗೆ ಭೇಟಿ ನೀಡಲಿದ್ದಾರೆ. ಅಲ್ಲದೆ, ಪ್ರಸ್ತುತ ವರ್ಷದಲ್ಲಿ ಮೋದಿ ಸರ್ಕಾರ ವಿಶ್ವಸಂಸ್ಥೆಯ 192 ರಾಷ್ಟ್ರಗಳನ್ನು ಭೇಟಿ ಮಾಡಲಿದೆ ಎಂದು ‘ದಿ ಎಕನಾಮಿಕ್ ಟೈಮ್ಸ್’ ವರದಿ ಮಾಡಿದೆ.
‘ಸಂಪರ್ಕ ಮತ್ತು ಸಂವಾದ’ ಎಂಬ ಧ್ಯೇಯ ವಾಕ್ಯದೊಂದಿಗೆ ಮೋದಿ ಸಚಿವಾಲಯ ಸಚಿವರು ಪ್ರವಾಸ ಕೈಗೊಳ್ಳಲಿದ್ದು, ಸಚಿವರು ಯಾವ ದೇಶದ ಪ್ರವಾಸ ಕೈಗೊಳ್ಳಬೇಕೆಂಬುದರ ಬಗ್ಗೆ ಭಾರತೀಯ ವಿದೇಶಾಂಗ ಸಚಿವಾಲಯ ಪಟ್ಟಿ ಸಿದ್ಧಪಡಿಸಿದೆ. ಕಳೆದ ಎರಡು ವರ್ಷಗಳಿಂದ ಭಾರತದ ಜತೆ ಉನ್ನತ ಮಟ್ಟದ ಸಂಬಂಧ ಹೊಂದಿಲ್ಲದಿರುವ ರಾಷ್ಟ್ರಗಳಿಗೆ ಸಚಿವರು ಭೇಟಿ ನೀಡಲಿದ್ದಾರೆ. ಈ ಕುರಿತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಆಯಾ ರಾಷ್ಟ್ರಗಳಿಗೆ ಪತ್ರ ಬರೆದಿದ್ದಾರೆ. ವಿದೇಶದಲ್ಲಿ ಸಚಿವರು ಯಾವ ಪ್ರದೇಶ ಮತ್ತು ನಿಯೋಗ ಭೇಟಿ ಕುರಿತು ರಾಯಭಾರಿಗಳೇ ಮಾಹಿತಿ ನೀಡಲಿದ್ದಾರೆ. ಅಲ್ಲದೆ, ಅಲ್ಲಿನ ಸ್ಥಳೀಯ ಸಂಪನ್ಮೂಲಗಳು ಮತ್ತು ಯಾವ ಕ್ಷೇತ್ರದಲ್ಲಿ ಸಹಕಾರ ನೀಡಲು ಸಾಧ್ಯ ಎಂಬುದರ ಬಗ್ಗೆಯೂ ಸಚಿವರುಗಳಿಗೆ ರಾಯಭಾರಿಗಳು ತಿಳಿಸಿಕೊಡಲಿದ್ದಾರೆ. ಎಲ್ಲ ಮಾಹಿತಿಗಳನ್ನು ಪಡೆದು ರಾಷ್ಟ್ರಕ್ಕೆ ಮರಳಲಿರುವ ಸಚಿವರು ಡಿಸೆಂಬರ್‌ನೊಳಗೆ ತಮ್ಮ ಪ್ರವಾಸದ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ.
ಹಲವು ವಿದೇಶ ಪ್ರವಾಸದ ವಿಚಾರಕ್ಕೆ ಸಂಬಂಸಿ ಎನ್‌ಡಿಎ ಸರ್ಕಾರವು ವಿಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಕೇವಲ ಒಂದು ವರ್ಷದ ವಿದೇಶಿ ಪ್ರವಾಸಕ್ಕಾಗಿ ಮೋದಿ ಸರ್ಕಾರ 317 ಕೋಟಿ ವ್ಯಯ ಮಾಡಿದೆ ಎಂದು ಸರ್ಕಾರದ ದಾಖಲೆಗಳೇ ಹೇಳುತ್ತಿವೆ.
ಸಚಿವರ ಹೆಸರು ನಿಯೋಜಿತ ರಾಷ್ಟ್ರ
ರಾಜನಾಥ್ ಸಿಂಗ್ - ಹಂಗೇರಿ
ವೆಂಕಯ್ಯ ನಾಯ್ಡು- ಡೆನ್ಮಾರ್ಕ್, ಐಲ್ಯಾಂಡ್
ನಿತಿನ್ ಗಡ್ಕರಿ- ಪನಾಮಾ, ನಿಕಾರಗ್ವಾ
ಅನಂತ್‌ಕುಮಾರ್- ಟೊಂಗೊ ರಿಪಬ್ಲಿಕನ್
ರವಿ ಶಂಕರ್ ಪ್ರಸಾದ್- ಇಸ್ಟೊನಿಯಾ, ಲಟ್ವಿಯಾ
ರಾಮ್ ವಿಲಾಸ್ ಪಾಸ್ವಾನ್- ಮಾರಿಷಸ್
ಚೌಧರಿ ಬೀರೆಂದರ್ ಸಿಂಗ್- ಜರ್ಮನಿ
ಮನೇಕಾ ಗಾಂಧಿ- ರೊಮಾನಿಯಾ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.