NDAಗೆ ಶಾಕ್ ಕೊಟ್ಟ ಮತ್ತೊಂದು ಮೈತ್ರಿ ಪಕ್ಷ, ಮೈತ್ರಿಗೆ ಕಂಡೀಷನ್ಸ್ ಅಪ್ಲೈ

By Web DeskFirst Published Jan 25, 2019, 1:26 PM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಇದೇ ವೇಳೆ ಬಿಜೆಪಿಗೆ ಮತ್ತೊಂದು ಆಘಾತ ಎದುರಾಗುವ ಸಾಧ್ಯತೆ ಇದೆ. ಮತ್ತೊಂದು ಪಕ್ಷವು NDA ಮೈತ್ರಿಯಿಂದ ಹಿಂದೆ ಸರಿಯುವ ಸಾಧ್ಯತೆ ಇದೆ.  

ಮಿಜೋರಾಂ : ಕೇಂದ್ರ ಸರ್ಕಾರ ಪೌರತ್ವ [ತಿದ್ದುಪಡಿ ] ಕಾಯ್ದೆ ಹಿಂಪಡೆಯದೇ ಹೋದಲ್ಲಿ NDA ಜೊತೆಗಿನ ಮೈತ್ರಿಯಿಂದ ಹಿಂದೆ ಸರಿಯಲು ಯಾವುದೇ ಯೋಚನೆ ಮಾಡುವುದಿಲ್ಲ ಎಂದು ಮಿಜೋರಾಂ ಮುಖ್ಯಮಂತ್ರಿ ಹಾಗೂ MNF ಮುಖಂಡ ಜೊರಮತಂಗ ಅವರು ಹೇಳಿದ್ದಾರೆ.

ಐಕ್ವಾಲ್ ನಲ್ಲಿ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಜೊರಮತಾಂಗ್ ಈ ಕಾಯ್ದೆಯನ್ನು ಕೈ ಬಿಡಲು ಪಕ್ಷ ಎಲ್ಲಾ ರೀತಿಯ ಯತ್ನವನ್ನು ಮಾಡಲಿದೆ. NDA ಈ ಮಸೂದೆಯನ್ನು ಹಿಂಪಡೆಯದೇ ಹೋದಲ್ಲಿ ಮೈತ್ರಿಯನ್ನು ವಾಪಸ್ ಪಡೆಯಲು ಬದ್ಧರಾಗಿದ್ದೇವೆ ಎಂದರು. 

2014 ಡಿಸೆಂಬರ್ 31ಕ್ಕಿಂತ ಮೊದಲು  ಧಾರ್ಮಿಕ ಕಾರಣಗಳಿಂದ ಪಾಕ್, ಅಫ್ಘಾನಿಸ್ತಾನ, ಬಾಂಗ್ಲಾದೇಶದಿಂದ ಭಾರತಕ್ಕೆ  ವಲಸೆ ಬಂದ ಮುಸ್ಲೀಮೇತರರಿಗೆ ಭಾರತೀಯ ಪೌರತ್ವವನ್ನು ನೀಡುವ ಮಸೂದೆಯನ್ನು ಲೋಕಸಭೆ ಜನವರಿ 8ರಂದು ಪೌರತ್ವ [ ತಿದ್ದುಪಡಿ ] ಮಸೂದೆ ಅಂಗೀಕರಿಸಿತು. ಈ ಮಸೂದೆಗೆ ಇದೀಗ MNF ತೀವ್ರ ವಿರೋಧ ವ್ಯಕ್ತಪಡಿಸಿದೆ. 

ರಾಜ್ಯ ಈ ಮಸೂದೆಗೆ ಸದಾ ವಿರುದ್ಧವಾಗಿದ್ದು, ಈಗಾಗಲೇ ಇದೇ ವಿಚಾರದ ಚರ್ಚೆಗಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು  ಭೇಟಿ ಮಾಡಿ ಮಾತುಕತೆ ನಡೆಸಿದ್ದಾಗಿಯೂ ಅವರು ಹೇಳಿದ್ದಾರೆ. 

ಲೋಕಸಭಾ ಚುನಾವಣೆ ದೇಶದಲ್ಲಿ ಸಮೀಪಿಸುತ್ತಿದ್ದು, ಇದೇ ಬೆನ್ನಲ್ಲೇ ಮೈತ್ರಿಯಿಂದ ಹಿಂದೆ ಸರಿಯುವ ಬಗ್ಗೆ NDA ಒಕ್ಕೂಟಕ್ಕೆ MNF ಎಚ್ಚರಿಕೆ ನೀಡಿದೆ.

click me!