IPS ನೀಲಮಣಿ ನೇಮಕ ವಿರುದ್ಧ ರೆಡ್ಡಿ ಅರ್ಜಿ

By Web DeskFirst Published Jun 18, 2019, 8:51 AM IST
Highlights

ನೀಲಮಣಿ ರಾಜು ಅವರನ್ನು ಡಿಜಿ ಐಜಿಪಿ ಹುದ್ದೆಗೆ ಪರಿಗಣಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ ಅಗ್ನಿಶಾಮಕ ಹಾಗೂ ತುರ್ತು ಸೇವಾ ಇಲಾಖೆ ಡಿಜಿಪಿ ಎಂ.ಎನ್‌.ರೆಡ್ಡಿ ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ.

ಬೆಂಗಳೂರು [ಜೂ.18] :  ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ಹುದ್ದೆಗೆ (ಡಿಜಿ-ಐಜಿಪಿ) ಹಿರಿಯ ಐಪಿಎಸ್‌ ಅಧಿಕಾರಿ ನೀಲಮಣಿ ಎನ್‌.ರಾಜು ಅವರನ್ನು ಪರಿಗಣಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ ಅಗ್ನಿಶಾಮಕ ಹಾಗೂ ತುರ್ತು ಸೇವಾ ಇಲಾಖೆ ಡಿಜಿಪಿ ಎಂ.ಎನ್‌.ರೆಡ್ಡಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಎಂ.ಎನ್‌.ರೆಡ್ಡಿ ಅವರ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಲ್‌.ನಾರಾಯಣ ಸ್ವಾಮಿ ಮತ್ತು ಆರ್‌.ದೇವದಾಸ್‌ ಅವರಿದ್ದ ವಿಭಾಗೀಯ ನ್ಯಾಯಪೀಠ, ರಾಜ್ಯ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿ, ಯುಪಿಎಸ್‌ಸಿ ಕಾರ್ಯದರ್ಶಿ ಮತ್ತು ರಾಜ್ಯ ಪೊಲೀಸ್‌ ಮಹಾನಿರ್ದೇಶಕರಾದ ನೀಲಮಣಿ ಎನ್‌.ರಾಜು ಅವರಿಗೆ ನೋಟಿಸ್‌ ಜಾರಿಗೊಳಿಸಿದೆ.

ಸುಪ್ರೀಂ ಕೋರ್ಟ್‌ 2019ರ ಮಾರ್ಚ್ ಹೊರಡಿಸಿರುವ ತೀರ್ಪು ಪ್ರಕಾರ ಸೇವಾ ನಿವೃತ್ತಿಗೆ ಆರು ತಿಂಗಳಿಗೆ ಬಾಕಿಯಿರುವ ಹಿರಿಯ ಐಪಿಎಸ್‌ ಅಧಿಕಾರಿಯನ್ನು ಡಿಜಿ-ಐಜಿಪಿ ಹುದ್ದೆಗೆ ಪರಿಗಣಿಸಬೇಕು. ಆದರೆ, ನೀಲಮಣಿ ರಾಜು ಅವರ ನಿವೃತ್ತಿಗೆ ಹೆಚ್ಚಿನ ಸಮಯವಿದ್ದರೂ, ಅವರನ್ನು ಡಿಜಿ-ಐಜಿಪಿ ಹುದ್ದೆಗೆ ನೇಮಕ ಮಾಡಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ ಆದೇಶವನ್ನು ಉಲ್ಲಂಘಿಸಿದೆ. ಆದ್ದರಿಂದ, ನೀಲಮಣಿ ರಾಜು ಅವರನ್ನು ಡಿಜಿ-ಐಜಿಪಿ ಹುದ್ದೆಗೆ ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದಾರೆ.

click me!