ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಅಂತಿಮ

By Web DeskFirst Published Sep 22, 2018, 7:37 AM IST
Highlights

ಚುನಾವಣೆಗೆ ಕಾಂಗ್ರೆಸ್‌ ಪಕ್ಷ ನಾಲ್ಕು ಅಭ್ಯರ್ಥಿಗಳ ಹೆಸರನ್ನು ಆಖೈರುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ಕುತೂಹಲಕಾರಿ ಸಂಗತಿಯೆಂದರೆ, ಈ ಬಾರಿ ಪರಿಷತ್‌ ನೇಮಕದಲ್ಲಿ ಕಾಂಗ್ರೆಸ್‌ ಅಹಿಂದ ಸಮುದಾಯಗಳಿಗೆ ಸಂಪೂರ್ಣವಾಗಿ ಮಣೆಹಾಕಿದೆ.

ಬೆಂಗಳೂರು :  ವಿಧಾನಪರಿಷತ್‌ ನಾಮಕರಣ ಹಾಗೂ ವಿಧಾನಸಭೆಯಿಂದ ನಡೆಯುವ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ನಾಲ್ಕು ಅಭ್ಯರ್ಥಿಗಳ ಹೆಸರನ್ನು ಆಖೈರುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ಕುತೂಹಲಕಾರಿ ಸಂಗತಿಯೆಂದರೆ, ಈ ಬಾರಿ ಪರಿಷತ್‌ ನೇಮಕದಲ್ಲಿ ಕಾಂಗ್ರೆಸ್‌ ಅಹಿಂದ ಸಮುದಾಯಗಳಿಗೆ ಸಂಪೂರ್ಣವಾಗಿ ಮಣೆಹಾಕಿದೆ.

ನಂಬಲರ್ಹ ಮೂಲಗಳ ಪ್ರಕಾರ ಪರಿಷತ್ತಿಗೆ ವಿಧಾನಸಭೆಯಿಂದ ನಡೆಯುವ ಚುನಾವಣೆಗೆ ಮುಸ್ಲಿಂ ಕೋಟಾದಿಂದ ನಜೀರ್‌ ಅಹ್ಮದ್‌ ಹಾಗೂ ಸವಿತಾ ಸಮಾಜ ಪ್ರತಿನಿಧಿಸುವ ಎಂ.ಸಿ. ವೇಣುಗೋಪಾಲ್‌ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಇನ್ನು ನಾಮಕರಣಕ್ಕೆ ಸಾದರ ಸಮಾಜಕ್ಕೆ ಸೇರಿದ ಮುಖ್ಯಮಂತ್ರಿ ಚಂದ್ರು ಹಾಗೂ ಲಂಬಾಣಿ ಜನಾಂಗದ ಪ್ರಕಾಶ್‌ ರಾಥೋಡ್‌ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತನ್ಮೂಲಕ ಈ ಬಾರಿ ಪರಿಷತ್‌ ನೇಮಕದಲ್ಲಿ ಕಾಂಗ್ರೆಸ್‌ ಸಂಪೂರ್ಣವಾಗಿ ಅಹಿಂದ ವರ್ಗಕ್ಕೆ ಮಣೆ ಹಾಕಿದಂತೆ ಆಗಿದೆ. ಈ ನಾಲ್ಕು ಮಂದಿಯ ಪೈಕಿ ಎಂ.ಸಿ. ವೇಣುಗೋಪಾಲ್‌ ಅವರ ಪರವಾಗಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಲಾಬಿ ನಡೆಸಿದ್ದರೆ, ನಜೀರ್‌ ಅಹಮದ್‌ ಹಾಗೂ ಮುಖ್ಯಮಂತ್ರಿ ಚಂದ್ರು ಪರವಾಗಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಲಾಬಿ ನಡೆಸಿದ್ದರು. ಇನ್ನು ಪ್ರಕಾಶ್‌ ರಾಥೋಡ್‌ ಪರವಾಗಿ ಸಿದ್ದರಾಮಯ್ಯ ಹಾಗೂ ಹೈಕಮಾಂಡ್‌ನ ಕೆಲ ಮುಖಂಡರು ಲಾಬಿ ನಡೆಸಿದ್ದರು ಎನ್ನಲಾಗಿದೆ.

ಈ ಮೂಲಕ ಪರಿಷತ್‌ ನೇಮಕದಲ್ಲಿ ಸಿದ್ದರಾಮಯ್ಯ ಅವರ ಮಾತಿಗೆ ಹೈಕಮಾಂಡ್‌ ಹೆಚ್ಚಿನ ಮಾನ್ಯತೆ ನೀಡಿದಂತಾಗಿದೆ ಎನ್ನಲಾಗಿದೆ. ಆದರೆ, ಪಟ್ಟಿಯನ್ನು ಹೈಕಮಾಂಡ್‌ ಆಖೈರುಗೊಳಿಸಿದ್ದರೂ ಅಂತಿಮ ಹಂತದವರೆಗೂ ಪ್ರಕಟಿಸದಿರಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಡ್ಡ ಮತದಾನದ ಭೀತಿ :  ವಿಧಾನಪರಿಷತ್‌ ಚುನಾವಣೆಗೆ ಅರ್ಹರ ಹೆಸರನ್ನು ಕಾಂಗ್ರೆಸ್‌ ಆಖೈರುಗೊಳಿಸಿದ್ದರೂ ಅಂತಿಮ ಹಂತದವರೆಗೂ ಪ್ರಕಟಿಸದಿರಲು ಇತರೆ ಆಕಾಂಕ್ಷಿಗಳು ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಕೆಲಸ ಮಾಡಬಹುದು ಎಂಬ ಆತಂಕ ಕಾರಣ ಎನ್ನಲಾಗಿದೆ. ವಿಧಾನಪರಿಷತ್ತಿನ ಚುನಾವಣೆಗೆ ಪಕ್ಷದಲ್ಲಿ ಆಕಾಂಕ್ಷಿಗಳ ಸಂಖ್ಯೆ ವಿಪರೀತ ಎನಿಸುವಷ್ಟಿತ್ತು ಮತ್ತು ಆಕಾಂಕ್ಷಿಗಳ ಪರವಾಗಿ ಹಲವು ಪ್ರಭಾವಿಗಳು ತಮ್ಮೆಲ್ಲ ಸಾಮರ್ಥ್ಯ ಮೀರಿ ಪ್ರಯತ್ನ ನಡೆಸಿದ್ದರು. ಪಟ್ಟಿಯನ್ನು ಈ ಹಂತದಲ್ಲಿ ಪ್ರಕಟಿಸಿದರೆ, ಪ್ರಭಾವಿಗಳು ಅಸಮಾಧಾನಗೊಂಡು ಪಕ್ಷದ ಅಧಿಕೃತ ಅಭ್ಯರ್ಥಿಯ ಸೋಲಿಗೆ ಪರೋಕ್ಷ ಪ್ರಯತ್ನ ನಡೆಸಬಹುದು ಎಂಬ ಭೀತಿಯಿದೆ.

ಇದಲ್ಲದೆ, ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಈ ಚುನಾವಣೆಯಲ್ಲಿ ಅಡ್ಡ ಮತದಾನ ನಡೆಯುವ ಭೀತಿಯೂ ಕಾಂಗ್ರೆಸ್‌ಗೆ ಇದೆ. ಕಾಂಗ್ರೆಸ್‌ನ ಕೆಲ ಶಾಸಕರು ಈಗಾಗಲೇ ಬಿಜೆಪಿಯ ಸಂಪರ್ಕದಲ್ಲಿದ್ದಾರೆ. ಈ ಶಾಸಕರು ಆಪರೇಷನ್‌ ಕಮಲಕ್ಕೆ ಒಳಗಾಗಬಹುದು ಎಂಬ ಭೀತಿಯೂ ಇದೆ. ಇಂತಹ ಶಾಸಕರು ಚುನಾವಣೆಯಲ್ಲಿ ಅಡ್ಡ ಮತದಾನ ಮಾಡುವ ಆತಂಕವೂ ಕಾಂಗ್ರೆಸ್‌ಗೆ ಇದೆ ಎಂದು ಮೂಲಗಳು ಹೇಳುತ್ತವೆ.

click me!