'ಕೈ'ನಿಂದ 5 ಬಾರಿ ಸಿಎಂ: 2 ಕ್ಷೇತ್ರದಲ್ಲೂ ಸೋಲಿಸಿದ ಮತದಾರ!

By Web DeskFirst Published Dec 11, 2018, 4:31 PM IST
Highlights

ಮಿಜೋರಾಂನಲ್ಲಿ ಕಳೆದ ಎರಡು ಅವಧಿಯಲ್ಲೂ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್‌, ಈ ಬಾರಿ ಮಕಾಡೆ ಮಲಗಿದ್ದು, ಮುಖ್ಯಮಂತ್ರಿ ಲಾಲ್ ಥನ್ಹಾವ್ಲಾ ಅವರು ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿಯೂ ಪರಾಭವಗೊಂಡಿದ್ದಾರೆ.

ಐಜಾಲ್, (ಡಿ.11): ಮುಂಬರುವ ಲೋಕಸಭಾ ಚುನಾವಣೆಯ ದಿಕ್ಸೂಚಿ ಎನ್ನಲಾದ ಪಂಚ ರಾಜ್ಯ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್‌ ಎರಡು ರಾಜ್ಯಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಹಾವು ಏಣಿ ಆಟ ನಡೆದಿದೆ.

ಇನ್ನು ಮಿಜೋರಾಂನಲ್ಲಿ ಕಳೆದ ಎರಡು ಅವಧಿಯಲ್ಲೂ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್‌, ಈ ಬಾರಿ ಮಕಾಡೆ ಮಲಗಿದ್ದು, ಮುಖ್ಯಮಂತ್ರಿ ಲಾಲ್ ಥನ್ಹಾವ್ಲಾ ಅವರು ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿಯೂ ಪರಾಭವಗೊಂಡಿದ್ದಾರೆ.

ಪಂಚ ರಾಜ್ಯ ಚುನಾವಣೆ ಫಲಿತಾಂಶ

ಸ್ವಕ್ಷೇತ್ರ ದಕ್ಷಿಣ ಚಾಂಪೈ ಹಾಗೂ ಸೇರ್ಫಿಪ್ ಕ್ಷೇತ್ರದಿಂದಲೂ ಸ್ಪರ್ಧಿಸಿದ್ದರು. ಆದರೆ ಗೆಲುವು ಸಾಧಿಸುವಲ್ಲಿ ಲಾಲ್ ಥವ್ಹಾವ್ಲಾ ವಿಫಲರಾಗಿದ್ದಾರೆ.

ದಕ್ಷಿಣ ಚಾಂಪೈ ಕ್ಷೇತ್ರದಲ್ಲಿ ಲಾಲ್ ಥವ್ಹಾವ್ಲಾ ಅವರು ಮಿಜೋ ನ್ಯಾಷನಲ್ ಫ್ರಂಟ್ ಅಭ್ಯರ್ಥಿ ಟಿಟಿ ಲಾಲ್ನುಂಟ್ಲುಂಗಾ ವಿರುದ್ಧ 1,049 ಮತಗಳ ಅಂತರದಲ್ಲಿ ಸೋಲುಕಂಡಿದ್ದಾರೆ.

ಹಾಲಿ ಮುಖ್ಯಮಂತ್ರಿ ಸೋಲಿನೊಂದಿಗೆ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭಾರಿ ಹಿನ್ನಡೆಯಾಗಿದ್ದು, ಮತ್ತೊಮ್ಮೆ ಸರ್ಕಾರ ರಚಿಸಿ ಹ್ಯಾಟ್ರಿಕ್​ ಕನಸಿಗೆ ತಣ್ಣೀರೆರೆಚಿದಂತಾಗಿದೆ.

ಸತತ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಲಾಲ್‌ ಅವರು ಸತತ ಮೂರು ಅವಧಿಗೆ ಯಾರೂ ರಾಜ್ಯದಲ್ಲಿ ಸರ್ಕಾರ ರಚಿಸಲಾರರು ಎಂಬ ನಂಬಿಕೆಯನ್ನು ಮುರಿಯುತ್ತೇನೆ ಎಂದು ಹೇಳಿದ್ದರು.

ಆದರೆ ಮತದಾರರು ಈ ಮೂರನೇ ಬಾರಿಗೆ ಥವ್ಹಾವ್ಲಾ ಅವರಿಗೆ ಕೈಕೊಟ್ಟಿದ್ದಾರೆ. 2008ರಿಂದಲೂ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದ್ದ 76 ವರ್ಷದ ಲಾಲ್‌, 2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಐದನೇ ಬಾರಿಗೆ ಮುಖ್ಯಮಂತ್ರಿಯಾಗಿ ಮಿಜೋರಾಂನಲ್ಲಿ ದಾಖಲೆ ನಿರ್ಮಿಸಿದ್ದರು.

9 ಬಾರಿ ಶಾಸಕರಾಗಿ ಜಯಭೇರಿ ಭಾರಿಸಿದ್ದ ಲಾರ್ಳ, ಇದೀಗ ತಾವು ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲು ಸೋಲು ಕಾಣುವ ಮೂಲಕ ಆರನೇ ಬಾರಿಗೆ ಮುಖ್ಯಮಂತ್ರಿಯಾಗುವ ಅವಕಾಶದಿಂದ ವಂಚಿತರಾಗಿದ್ದಾರೆ.

click me!