
ಬೆಂಗಳೂರು : ಎಲ್.ಬಿ.ಶಾಸ್ತ್ರಿ ನಗರದ ಎಚ್‌ಎಎಲ್ ಆವರಣದಲ್ಲಿ ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡು ಸ್ಥಳೀಯರಲ್ಲಿ ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಟ್ಟಡ ನಿರ್ಮಾಣಕ್ಕೆ ಬಂಡೆ ಒಡೆಯಲು ಬಳಸಲಾಗಿದ್ದ ಉಳಿದ ಜಿಲೆಟಿನ್ ವಸ್ತು ಕಸದ ತೊಟ್ಟಿಯಲ್ಲಿ ಸ್ಫೋಟಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಘಟನೆಯಲ್ಲಿ ಕಟ್ಟಡ ನಿರ್ಮಾಣದ ಗುತ್ತಿಗೆದಾರನ ವಿರುದ್ಧ ನಿರ್ಲಕ್ಷ್ಯ, ಸ್ಫೋಟಕ ವಸ್ತುಗಳ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ಹೇಳಿದ್ದಾರೆ.
ಎಚ್‌ಎಎಲ್ ಠಾಣಾ ವ್ಯಾಪ್ತಿಯಲ್ಲಿನ ಎಲ್.ಎನ್.ಶಾಸ್ತ್ರಿ ನಗರದಲ್ಲಿ ಸುಮಾರು ಎಂಟೂವರೆ ಎಕರೆಯ ವಿಸ್ತಾರವಾದ ಖಾಲಿ ಸ್ಥಳವಿದೆ. ಸುತ್ತಲೂ ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ. ಕಳೆದ ಹಲವು ವರ್ಷಗಳಿಂದ ಆವರಣದಲ್ಲಿನ ಖಾಲಿ ಜಾಗವೊಂದರಲ್ಲಿ ಕಸ ಹಾಕುವ ಪ್ರದೇಶವನ್ನಾಗಿ ಮಾಡಿಕೊಂಡಿದ್ದರು. ಮೂರು ತಿಂಗಳ ಆವರಣದಲ್ಲಿ ಸಿಬ್ಬಂದಿಗೆಂದು ವಸತಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಕಟ್ಟಡ ನಿರ್ಮಾಣಕ್ಕೂ ಮುನ್ನ ಜಿಲೆಟಿನ್ ವಸ್ತು ಬಳಸಿ ಸ್ಥಳದಲ್ಲಿದ್ದ ಬಂಡೆಗಳನ್ನು ಒಡೆಯಲಾಗಿದೆ.
ಹತ್ತಾರು ಕಾರ್ಮಿಕರಿಗೆ ಕಟ್ಟಡ ಕಾಮಗಾರಿ ಸ್ಥಳದಲ್ಲಿಯೇ ಶೆಡ್ ನಿರ್ಮಿಸಲಾಗಿದ್ದು, ಕಾರ್ಮಿರು ಶೆಡ್‌ನಲ್ಲಿ ಉಳಿದುಕೊಂಡಿದ್ದಾರೆ. ಕಾಮಗಾರಿ ತ್ಯಾಜ್ಯವನ್ನೆಲ್ಲ ಅಲ್ಲಿಯೇ ಸಮೀಪದಲ್ಲಿದ್ದ ಸ್ಥಳದಲ್ಲಿ ಸುರಿಯಲಾಗುತ್ತಿತ್ತು. ಇದೇ ಸ್ಥಳದಲ್ಲಿ ತ್ಯಾಜ್ಯವನ್ನು ಭೂಮಿಯೊಳಗೆ ಹೂಳುತ್ತಿದ್ದರು. ಮಂಗಳವಾರ ಸಂಜೆ 4.30ರ ಸುಮಾರಿಗೆ ಈ ಕಸದ ತೊಟ್ಟಿಬಳಿ ಕಟ್ಟಡ ಕಾರ್ಮಿಕರು ತ್ಯಾಜ್ಯ ಸುರಿದು ಬೆಂಕಿ ಹಚ್ಚಿದ್ದಾರೆ.
ಏಕಾಏಕಿ ಭಾರೀ ಸದ್ದಿನೊಂದಿಗೆ ಸ್ಫೋಟ ಸಂಭವಿಸಿದೆ. ಅರ್ಧ ಕಿ.ಮೀ. ದೂರ ಸ್ಫೋಟದ ಶಬ್ದ ಕೇಳಿದ್ದು, ಸ್ಥಳೀಯರು ಕೆಲಕಾಲ ಆತಂಕಗೊಂಡಿದ್ದಾರೆ. ಸ್ಫೋಟದ ಪರಿಣಾಮ ಘಟನೆ ನಡೆದ 150 ಮೀ.ದೂರದಲ್ಲಿದ್ದ ನೀರಿನ ಸಿಂಥೆಟಿಕ್ ಟ್ಯಾಂಕರ್ ಒಡೆದು ಛಿದ್ರಗೊಂಡಿದೆ. ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಸ್ಥಳಕ್ಕೆ ಬಾಂಬ್ ನಿಷ್ಕಿ್ರಯದಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ. ಉಪಯೋಗಿಸಿ ಉಳಿದ ಜಿಲೆಟಿನ್ ವಸ್ತುವನ್ನು ಸೂಕ್ತವಾಗಿ ವಿಲೇವಾರಿ ಮಾಡದೆ ಕಸದಲ್ಲಿ ಹಾಕಿದ್ದಾರೆ. ಕಾರ್ಮಿಕರು ಬೆಂಕಿ ಹಚ್ಚಿದಾಗ ಸ್ಫೋಟ ಸಂಭವಿಸಿದೆ. ಯಾವುದೇ ಆತಂಕಪಡುವ ಅಗತ್ಯವಿಲ್ಲ. ಈ ಸಂಬಂಧ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ನಿರ್ಲಕ್ಷ್ಯ ಪ್ರಕರಣ ದೂರು ದಾಖಲಾಗಿದೆ ಎಂದು ಡಿಸಿಪಿ ಮಾಹಿತಿ ನೀಡಿದರು.
ಘಟನೆ ಸ್ಥಳದಲ್ಲಿನ ವಸ್ತುಗಳನ್ನು ಎಫ್‌ಎಸ್‌ಎಲ್‌ಗೆ (ವಿಧಿ ವಿಜ್ಞಾನ ಪ್ರಯೋಗಾಲಯ) ಕಳುಹಿಸಲಾಗಿದೆ. ವರದಿ ಬಂದ ಬಳಿಕ ಯಾವ ವಸ್ತುವಿನಿಂದ ಸ್ಫೋಟಗೊಂಡಿದೆ ಎಂದು ಖಚಿತವಾಗಿ ತಿಳಿಯಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.
ಜಿಲೆಟಿನ್ ಸ್ಫೋಟಗೊಂಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
- ಅಬ್ದುಲ್ ಅಹದ್, ವೈಟ್‌ಫೀಲ್ಡ್ ಡಿಸಿಪಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.