IMA ಯಿಂದ 5 ಕೋಟಿ ಹಣ ಪಡೆದಿರುವ ಕೈ ಸಚಿವ

By Web DeskFirst Published Jun 12, 2019, 7:18 AM IST
Highlights

ಮಹಾ ವಂಚನೆ ಮಾಡಿ ಪರಾರಿಯಾಗಿರುವ ಐಎಂಎಯೊಂದಿಗೆ ರಾಜ್ಯದ ಕಾಂಗ್ರೆಸ್ ಸಚಿವರೋರ್ವರಿಗೆ ನಂಟು  ಇರುವುದು ಬೆಳಕಿಗೆ ಬಂದಿದೆ. 

ಬೆಂಗಳೂರು :  ಬಹುಕೋಟಿ ಹಗರಣದ ಆರೋಪ ಹೊತ್ತಿರುವ ಐಎಂಎ ಕಂಪನಿ ಜತೆ ರಾಜ್ಯ ಸಮ್ಮಿಶ್ರ ಸರ್ಕಾರದ ಸಚಿವ ಜಮೀರ್‌ ಅಹಮದ್‌ ಖಾನ್‌ ಹಣಕಾಸು ವ್ಯವಹಾರ ಹೊಂದಿರುವುದು ಬಹಿರಂಗಗೊಂಡಿದೆ. ಕುತೂಹಲಕಾರಿ ಸಂಗತಿಯೆಂದರೆ, ವಿಧಾನಸಭೆ ಚುನಾವಣೆ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಸ್ವತಃ ಜಮೀರ್‌ ಅವರೇ ಈ ಸಂಗತಿ ದಾಖಲಿಸಿದ್ದಾರೆ.

ಸಾರ್ವಜನಿಕರ ಸಾವಿರಾರು ಕೋಟಿ ರು. ಹಣ ಲೂಟಿ ಹೊಡೆದು ಐಎಂಎ ಮಾಲೀಕ ಪರಾರಿಯಾದ ಬೆನ್ನಲ್ಲೇ ಹಣ ಕಳೆದುಕೊಂಡವರ ಪರ ನಿಂತ ಜಮೀರ್‌ ಅಹಮದ್‌ ಖಾನ್‌ ಅವರು ಮುಸ್ಲಿಂ ನಿಯೋಗದೊಂದಿಗೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಮಂಗಳವಾರ ಭೇಟಿಮಾಡಿ ಈ ಪ್ರಕರಣದ ಬಗ್ಗೆ ಎಸ್‌ಐಟಿ ತನಿಖೆಗೆ ಆಗ್ರಹಿಸಿದ್ದರು. ಅಲ್ಲದೆ, ಪ್ರಕರಣದ ಹಿಂದಿರುವ ಎಲ್ಲಾ ತಪ್ಪಿತಸ್ಥರಿಗೂ ಶಿಕ್ಷೆ ಆಗಬೇಕು. ಹೀಗಾಗಿ ಪ್ರಕರಣವನ್ನು ಎಸ್‌ಐಟಿ ಅಥವಾ ನ್ಯಾಯಮೂರ್ತಿಗಳ ತನಿಖೆಗೆ ವಹಿಸಬೇಕು ಆಗ್ರಹಿಸಿದ್ದರು.

ಇದರ ಬೆನ್ನಲ್ಲೇ ಜಮೀರ್‌ ಅಹಮದ್‌ ಖಾನ್‌ ಅವರೂ ಪರಾರಿಯಾಗಿರುವ ಆರೋಪಿ ಮನ್ಸೂರ್‌ ಅಹಮದ್‌ ಖಾನ್‌ ಜತೆ ವ್ಯಾವಹಾರಿಕ ನಂಟು ಹೊಂದಿರುವ ಬಗ್ಗೆ ಖುದ್ದು ಅವರೇ 2018ರ ವಿಧಾನಸಭಾ ಚುನಾವಣೆ ವೇಳೆ ಚುನಾವಣೆ ಆಯೋಗಕ್ಕೆ ಸಲ್ಲಿಸಿದ್ದ ಅಫಿಡವಿಟ್‌ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿತು.

ಅಫಿಡವಿಟ್‌ನಲ್ಲೇನಿದೆ?:

ಜಮೀರ್‌ ಅವರು ಚುನಾವಣೆ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಐಎಂಎ ಕಂಪನಿ ಬಳಿ 5 ಕೋಟಿ ರು. ಹಣ ಪಡೆದಿರುವುದು ದಾಖಲಾಗಿದೆ. ಸಾಲದ ವಿವರಗಳ ಪಟ್ಟಿಯಲ್ಲಿ ‘ಐ ಮಾನಿಟರಿ ಅಡ್ವೈಸರಿ’ (ಐಎಂಎ) ಕಂಪನಿಯಿಂದ ಬೆಂಗಳೂರಿನ ರಿಚ್‌ಮಂಡ್‌ ಟೌನ್‌ನ ಸರ್ಪೆಂಟೈನ್‌ ಸ್ಟ್ರೀಟ್‌ನಲ್ಲಿರುವ ನಂ. 38 ಹಾಗೂ 39ನೇ ಕಟ್ಟಡದ ಮಾರಾಟದ ಸಂಬಂಧ 2017ರ ಡಿಸೆಂಬರ್‌ 11ರಂದು 5 ಕೋಟಿ ರು. ಮುಂಗಡ ಹಣ ಪಡೆದಿರುವುದಾಗಿ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

ಈ ದಾಖಲೆ ಮಾತ್ರವಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಮನ್ಸೂರ್‌ ಅಹಮದ್‌ ಖಾನ್‌ ಜತೆ ಬಿರಿಯಾನಿ ತಿನ್ನುತ್ತಿರುವ ಜಮೀರ್‌ ಅಹಮದ್‌ ಖಾನ್‌ ಫೋಟೋಗಳು ಸಹ ವೈರಲ್‌ ಆಗಿವೆ. ಪರಾರಿಯಾಗಿರುವ ಮನ್ಸೂರ್‌ ಅಹಮದ್‌ ಖಾನ್‌ ಅವರದ್ದು ಎನ್ನಲಾದ ಆಡಿಯೋದಲ್ಲಿ ಅಲ್ಪಸಂಖ್ಯಾತ ಮುಖಂಡರ ಮೇಲೆ ಮನ್ಸೂರ್‌ ಆರೋಪ ಮಾಡಿದ್ದಾರೆ. ಈ ವೇಳೆ ಶಿವಾಜಿನಗರದ ಶಾಸಕರು ಸೇರಿದಂತೆ ಹಲವರಿಂದ ತಮಗೆ ವಂಚನೆಯಾಗಿದೆ ಎಂದು ಆರೋಪಿಸಿದ್ದಾರೆ.

ಈ ಆಡಿಯೋದಲ್ಲಿ ಜಮೀರ್‌ ಅಹ್ಮದ್‌ಖಾನ್‌ ಹೆಸರು ಪ್ರಸ್ತಾಪವಾಗಿರಲಿಲ್ಲ. ಹೀಗಾಗಿ ಜಮೀರ್‌ ಅಹಮದ್‌ ಖಾನ್‌ಗೂ ಐಎಂಎಗೂ ಯಾವುದೇ ವ್ಯವಹಾರ ಇರಲಿಲ್ಲ ಎಂದೇ ಭಾವಿಸಲಾಗಿತ್ತು. ಇದೀಗ ಸ್ವತಃ ಜಮೀರ್‌ ಅಹಮದ್‌ಖಾನ್‌ ಅವರೇ ಹಣಕಾಸು ವ್ಯವಹಾರದ ಬಗ್ಗೆ ಪ್ರಮಾಣಪತ್ರವನ್ನು ಆಯೋಗಕ್ಕೆ ಸಲ್ಲಿಸಿರುವ ದಾಖಲೆ ಹೊರ ಬರುವ ಮೂಲಕ ಜಮೀರ್‌ ಸಹ ಈ ಸಂಸ್ಥೆಯೊಂದಿಗೆ ವ್ಯವಹಾರ ಹೊಂದಿದ್ದರು ಎಂದು ಆರೋಪಿಸಲಾಗುತ್ತಿದೆ.

click me!