
ಹಾವೇರಿ [ಅ.03]: ರಾಷ್ಟ್ರಾದ್ಯಂತ ರಾಷ್ಟ್ರೀಯ ನಾಗರಿಕತ್ವ ನೋಂದಣಿ (ಎನ್‌ಆರ್‌ಸಿ) ಜಾರಿ ಮಾಡಿಯೇ ಸಿದ್ಧ ಎಂಬುದಾಗಿ ಬಿಜೆಪಿ ಅಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ ಖಡಕ್ ಆಗಿ ಹೇಳಿರುವ ಬೆನ್ನಿಗೇ, ರಾಜ್ಯದಲ್ಲಿ ಎನ್‌ಆರ್‌ಸಿ ಜಾರಿ ಸಾಧ್ಯತೆಯ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸುಳಿವು ನೀಡಿದ್ದಾರೆ. ಈ ಬಗ್ಗೆ ಅಧ್ಯಯನ ಮಾಡಲು ಈಗಾಗಲೇ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದು, ಕಾನೂನು ಜಾರಿ ಕುರಿತು ಇದೇ ವಾರದಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್‌ಆರ್‌ಸಿ ಕಾನೂನು ಜಾರಿ ವಿಚಾರ ಕುರಿತು ಈಗಾಗಲೇ ಎರಡು ಸಲ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ.
ಹಲವು ರಾಜ್ಯಗಳು ಎನ್‌ಆರ್‌ಸಿ ಕಾನೂನು ಒಪ್ಪಿಕೊಂಡಿವೆ. ನಮ್ಮ ಹಿರಿಯ ಅಧಿಕಾರಿಗಳಿಗೆ ಅಧ್ಯಯನ ಮಾಡಲು ಸೂಚಿಸಿದ್ದೇನೆ. ವಿಶೇಷವಾಗಿ ಬೆಂಗಳೂರು ಮತ್ತು ಇತರ ಮಹಾನಗರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ರಮವಾಗಿ ವಲಸಿಗರು ನೆಲೆಸಿದ್ದು, ಎನ್‌ಆರ್‌ಸಿ ಕಾನೂನು ಜಾರಿ ಕುರಿತು ಇದೇ ವಾರದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಏನಿದು ಎನ್‌ಆರ್‌ಸಿ?
ಇದು ಅರ್ಹ ಭಾರತೀಯ ನಾಗರಿಕರನ್ನು ಗುರುತಿಸುವ ಒಂದು ಪ್ರಕ್ರಿಯೆ. ಇಲ್ಲಿ ವ್ಯಕ್ತಿಯೊಬ್ಬನ ಹೆಸರು ಮತ್ತು ಆತನ ಕುರಿತ ಕೆಲ ದಾಖಲೆಗಳನ್ನು ನೋಂದಣಿ ಮಾಡಲಾಗುತ್ತದೆ. ಇಂಥ ಪಟ್ಟಿಯಲ್ಲಿ ಯಾರ ಹೆಸರು ಸೇರಿಕೊಂಡಿರುತ್ತದೆಯೋ ಅವರನ್ನು ಭಾರತೀಯ ಪೌರತ್ವ ಹೊಂದಿದ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ಅಕ್ರಮ ವಿದೇಶಿ ನಾಗರಿಕರನ್ನು ಹೊರಹಾಕಲು ಇದನ್ನು ನಡೆಸಲಾಗುತ್ತದೆ. ಇತ್ತೀಚೆಗೆ ಇದನ್ನು ಅಸ್ಸಾಂನಲ್ಲಿ ಜಾರಿಗೊಳಿಸಲಾಗಿತ್ತು.
ಯಾರಿಗೆ, ಏಕೆ ಆತಂಕ?
ಇತ್ತೀಚೆಗೆ ಅಸ್ಸಾಂನಲ್ಲಿ ಅಂತಿಮ ಎನ್‌ಆರ್‌ಸಿ ಪಟ್ಟಿಪ್ರಕಟಿಸಿದಾಗ 19 ಲಕ್ಷ ಜನರ ಪಟ್ಟಿಯಿಂದ ಹೊರಗೆ ಉಳಿದರು. ಹೊರಬಿದ್ದವರಲ್ಲಿ ಭಾರತೀಯ ಮೂಲದ ಸಾವಿರಾರು ಜನರೂ ಸೇರಿದ್ದಾರೆ. ನಾನಾ ಕಾರಣಗಳಿಂದಾಗಿ ದಾಖಲೆ ಒದಗಿಸಲಾಗಿಲ್ಲ ಎಂಬ ಒಂದೇ ಕಾರಣಕ್ಕೆ ಅರ್ಹರೂ ಭಾರತೀಯ ಪೌರತ್ವದಿಂದ ವಂಚಿತರಾಗಿದ್ದಾರೆ. ಹೀಗಾಗಿಯೇ ದೇಶಾದ್ಯಂತ ಎನ್‌ಆರ್‌ಸಿ ಜಾರಿಗೆ ಕೇಂದ್ರ ಸರ್ಕಾರ ವ್ಯಕ್ತಪಡಿಸಿರುವ ಒಲವು ಲಕ್ಷಾಂತರ ಜನರನ್ನು ಆತಂಕದ ಮಡುವಿಗೆ ತಳ್ಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.