
ಬೆಂಗಳೂರು : ನಮ್ಮ ಮೆಟ್ರೋ ರೈಲು ಚಾಲಕನ ಅಜಾಗರೂಕತೆಯಿಂದ ಸಂಭವಿಸಬಹುದಾದ ಭಾರಿ ಅಪಘಾತ ವೊಂದು ಸ್ವಲ್ಪದರಲ್ಲೇ ತಪ್ಪಿದೆ. ಮೆಟ್ರೋ ರೈಲು ಚಾಲಕನ ನಿರ್ಲಕ್ಷ್ಯದ ಚಾಲನೆ ಯಿಂದ ಭಾನುವಾರ ಏಕಾಏಕಿ ರೈಲಿನ ಬ್ರೇಕ್ ಜಾಮ್ ಆಗಿದ್ದು, ರೈಲಿನಲ್ಲಿದ್ದ ಪ್ರಯಾಣಿಕರಿಗೆ ರೈಲು ವಾಲಿದ ಅನುಭವ ಆಗಿದೆ ಎಂದು ತಿಳಿದು ಬಂದಿದೆ.
ಈ ಘಟನೆ ಭಾನುವಾರ ಬೆಳಗ್ಗೆ 11.20ರ ಸುಮಾರಿಗೆ ರಾಜಾಜಿ ನಗರದಿಂದ ಕುವೆಂಪು ರಸ್ತೆ ಮೆಟ್ರೋ ನಿಲ್ದಾಣದ ನಡುವಿನ ತಿರುವಿನಲ್ಲಿ ಸಂಭವಿಸಿದ್ದು, ಮೆಟ್ರೋ ನಿಗಮ ಈ ಘಟನೆಯನ್ನು ಅಧಿಕೃತವಾಗಿ ದೃಢಪಡಿಸಿಲ್ಲ. ರಾಜಾಜಿನಗರದಿಂದ ಮೆಟ್ರೋ ರೈಲಿನ ಚಾಲಕ (ಲೋಕೊಪೈಲಟ್) ವೇಗವಾಗಿ ರೈಲು ಚಾಲನೆ ಮಾಡಿ ಕೊಂಡು ಬಂದಿದ್ದಾನೆ. ರಾಜಾಜಿನಗರದಿಂದ ಕುವೆಂಪು ರಸ್ತೆ ಮೆಟ್ರೋ ನಿಲ್ದಾಣದ ನಡುವೆ ತಿರುವು ಇರುವುದು ಗಮನಕ್ಕೆ ಬರುತ್ತಲೇ ಬ್ರೇಕ್ ಹಾಕಿದ್ದಾನೆ. ಕೂಡಲೇ ರೈಲು ನಿಂತಿದ್ದಲ್ಲದೇ ಬ್ರೇಕ್ ಜಾಮ್ ಆಗಿದೆ. ಈ ಸಂದರ್ಭದಲ್ಲಿ ಬೋಗಿಗಳು ಸ್ವಲ್ಪ ಬಾಗಿದ ಅನುಭವ ಮೆಟ್ರೋ ಪ್ರಯಾಣಿಕರಿಗೆ ಆಗಿದೆ. ಏನಾಯ್ತು ಎಂದು ಪರಿಶೀಲಿಸಲು ಲೋಕೊಪೈಲಟ್ ಕ್ಯಾಬಿನ್‌ನಿಂದ ಹೊರ ಬಂದಿದ್ದಾನೆ.
ಕೀ ಬಿಟ್ಟು ಹೋದ ಪೈಲಟ್!: ಗಾಬರಿಯಿಂದ ಕೆಳಗೆ ಇಳಿಯುವ ವೇಳೆ ಕ್ಯಾಬೀನ್ ಬಾಗಿಲಿನ ಬೀಗದ ಕೀ ತೆಗೆದುಕೊಳ್ಳುವುದನ್ನು ಮರೆತಿದ್ದಾನೆ. ಸ್ವಯಂ ಚಾಲಿತ ಬಾಗಿಲು ಇದಾಗಿದ್ದು, ಪುನಃ ಮುಚ್ಚಿಕೊಂಡಿದ್ದರಿಂದ ವಾಪಸ್ ಒಳಗೆ ಹೋಗಲು ಸಾಧ್ಯವಾಗಿಲ್ಲ. ಜತೆಗೆ ಈ ಕೀ ಇಲ್ಲದೇ ಚಾಲಕನ ಕ್ಯಾಬೀನ್ ಸೇರಿದಂತೆ ಮೆಟ್ರೋ ರೈಲಿನ ಯಾವುದೇ ಬೋಗಿಯ ಬಾಗಿಲುಗಳು ತೆಗೆದುಕೊಳ್ಳುವುದಿಲ್ಲ. ಚಾಲಕ ಕೀಯನ್ನು ಕ್ಯಾಬಿನ್ ನಲ್ಲಿಯೇ ಇಟ್ಟು ಹೊರಬಂದಿದ್ದಾನೆ ಎನ್ನಲಾಗಿದೆ.
ಬಳಿಕ ನಡೆದುಕೊಂಡು ಹೋಗಿ ರಾಜಾಜಿನಗರದ ಮೆಟ್ರೋ ರೈಲು ನಿಯಂತ್ರಕರಿಂದ ನಕಲಿ ಕೀ ತೆಗೆದು ಕೊಂಡು ಬಂದು ಲೋಕೊ ಪೈಲಟ್ ಕ್ಯಾಬಿನ್ ತೆರೆದಿ ದ್ದಾನೆ. ಈ ಎಲ್ಲ ಪ್ರಕ್ರಿಯೆ ನಡೆಯುವಾಗ ಸುಮಾರು 15ರಿಂದ 18 ನಿಮಿಷ ಮೆಟ್ರೋ ಪ್ರಯಾಣಿಕರು ಒಳಗೆ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಹಲವರು ಅಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಈ ನಡುವೆ ಹಸಿರು ಮಾರ್ಗ ಹಲವು ರೈಲುಗಳನ್ನು ಆಯಾ ನಿಲ್ದಾಣದಲ್ಲಿಯೇ 20 ನಿಮಿಷ ನಿಲ್ಲಬೇಕಾಯ್ತು
ಅಧಿಕೃತ ಚಾಲಕನಲ್ಲ?: ಈ ಮೆಟ್ರೋ ರೈಲು ಚಾಲಕ ಅಧಿಕೃತವಾಗಿ ಪರವಾನಗಿ ಪಡೆದವನಲ್ಲ ಎಂದು ನಿಗಮದ ಮೂಲಗಳು ತಿಳಿಸಿವೆ. ಮೆಟ್ರೋ ನಿಗಮದ ನೌಕರರು ಏಕಾಏಕಿ ಮುಷ್ಕರಕ್ಕೆ ಕರೆ ನೀಡಿದ ಸಂದರ್ಭದಲ್ಲಿ ಸಾರ್ವಜನಿಕ ಮೆಟ್ರೋ ಸೇವೆ ನಿಲ್ಲಬಾರದು ಎಂಬ ಕಾರಣಕ್ಕೆಂದು ನಿಗಮ ರಚಿಸಿರುವ ತುರ್ತು ಸ್ಪಂದನಾ ತಂಡ (ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್-ಇಆರ್‌ಟಿ) ಸದಸ್ಯ ಈತನು. ಭಾನುವಾರ ಪ್ರಯೋಗಾರ್ಥವಾಗಿ ಈತನಿಂದ ಮೆಟ್ರೋ ರೈಲು ಚಾಲನೆ ಮಾಡಿಸಲಾಗಿದೆ ಎನ್ನಲಾಗಿದ್ದು, ಸುಮಾರು 350ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಈ ರೈಲಿನಲ್ಲಿದ್ದರು ಎಂದು ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.