
ಶ್ರೀನಗರ(ಜು.22): ಕಾಶ್ಮೀರ ಸಮಸ್ಯೆಯನ್ನು ಇತ್ಯರ್ಥಪಡಿಸಲು ಅಮೆರಿಕಾ ಹಾಗೂ ಚೀನಾ ಮಧ್ಯಪ್ರವೇಶಿಸಿದರೆ ಕಾಶ್ಮೀರ ಇರಾಕ್,ಸಿರಿಯಾ ಹಾಗೂ ಅಘ್ಘಾನಿಸ್ತಾನ ದೇಶಗಳ ರೀತಿಯಲ್ಲಿ ಸಮಸ್ಯೆ ಉದ್ಭವಿಸಲಿದೆ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಎಚ್ಚರಿಸಿದ್ದಾರೆ.
ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ, ಭಾರತ ಸರ್ಕಾರ ಕಾಶ್ಮೀರ ಸಮಸ್ಯೆಗೆ ಅಮೆರಿಕಾ ಹಾಗೂ ಚೀನಾ ದೇಶಗಳನ್ನು ಆಹ್ವಾನಿಸಬೇಕು ಎಂಬ ಹೇಳಿಕೆಯ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕಣಿವೆಯ ರಾಜ್ಯ ಸಮಸ್ಯೆಗೆ ಭಾರತ ಹಾಗೂ ಪಾಕಿಸ್ತಾನಗಳ ಮಧ್ಯೆಯೇ ಮಾತುಕತೆ ನಡೆಯಬೇಕು. ಭೂಪ್ರದೇಶ ನಮ್ಮ ಬಳಿಯೇ ಇದೆ. ಯುದ್ಧದ ಹೊರತಾಗಿಯೂ ಭಾರತ ಮತ್ತು ಪಾಕಿಸ್ತಾನ ಮಾತುಕತೆಯಾಗಬೇಕು. ನಾವು ಈಗಾಗಲೇ ಲಾಹೋರ್ ಹಾಗೂ ಶಿಮ್ಲಾ ಒಪ್ಪಂದ ಮಾಡಿಕೊಂಡಿದ್ದೇವೆ. ಸಮಸ್ಯೆಯನ್ನು ಕುಳಿತು ನಾವೆ ಪರಿಹರಿಸಿಕೊಳ್ಳಬೇಕು' ಎಂದು ಅನಂತ್ ನಾಗ್ ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಶ್ಮೀರ ಸಮಸ್ಯೆಯು ಸ್ವಾತಂತ್ರ್ಯದ ನಂತರ ಎರಡು ಪರಮಾಣು ಶಕ್ತಿಗಳ ದೇಶಗಳ ನಡುವೆ ಉಲ್ಬಣಿಸಿದ ವಿವಾದವಾಗಿದೆ. ಉಗ್ರಗಾಮಿಗಳ ದಾಳಿ, ಗಲಭೆಗೆ ಪ್ರಚೋದನೆ ಮುಂತಾದ ಸಮಸ್ಯೆಗಳನ್ನು ಪಾಕಿಸ್ತಾನ ಸರ್ಕಾರದ ನೇರ ಕುಮ್ಮಕ್ಕು ಇದೆಯೆಂದು ಕೇಂದ್ರ ಸರ್ಕಾರ ದಾಖಲೆಗಳ ಸಮೇತ ತೋರಿಸುತ್ತಿದೆ. ಕಾಶ್ಮೀರ ಸಮಸ್ಯೆಗೆ ಇವೆರಡು ದೇಶಗಳು ಮಧ್ಯಪ್ರವೇಶಿಸಿದರೆ ಅದು ತನ್ನ ಸ್ವಹಿತಾಸಕ್ತಿಯೇ ಹೊರತು ಬೇರೆನಿಲ್ಲ. ಅಮೆರಿಕಾ ಮಧ್ಯಪ್ರವೇಶಿಸಿದ ನಂತರ ಇರಾಕ್,ಸಿರಿಯಾ ಹಾಗೂ ಅಘ್ಘಾನಿಸ್ತಾನದಲ್ಲಿ ಏನಾಯಿತು ಎಂಬುದು ಪ್ರತ್ಯಕ್ಷ ಸಾಕ್ಷಿಯೇ ನಮ್ಮ ಬಳಿಯಿದೆ. ಟೆಬಿಟ್ ಮೇಲೆ ಚೀನಾ ತಲೆಹಾಕಿದ ಮೇಲೆ ಅಲ್ಲಿ ಯಾವ ಪರಿಸ್ಥಿತಿಯಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ನಮಗೂ ಅದೇ ಪರಿಸ್ಥಿತಿ ಬರಬೇಕೆ ಫಾರೂಕ್ ಸಾಹೇಬರೆ ಎಂದು ಮಾಜಿ ಮುಖ್ಯಮಂತ್ರಿಯನ್ನು ಪ್ರಶ್ನಿಸಿದ್ದಾರೆ.
ಇಂದಿರಾ ಗಾಂಧಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರಂತಹ ಹಿರಿಯ ನಾಯಕರಿಂದ ಶಿಮ್ಲಾ ಹಾಗೂ ಲಾಹೋರ್ ಒಪ್ಪಂದವಾಗಿದೆ. ನಾವು ಆ ನಿಟ್ಟಿನಲ್ಲಿ ಹೆಜ್ಜೆಯಿಡಬೇಕಿದೆ. ಎರಡೂ ದೇಶಗಳ ಸಮಸ್ಯೆಯಿಂದ ನಮ್ಮ ಸೈನಿಕರು ಹಾಗೂ ನಾಗರಿಕರು ಮೃತಪಟ್ಟಿದ್ದಾರೆ. ನಾವಾಗಿಯೇ ನಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.