ಕಾಂಗ್ರೆಸ್ ಗೆ ಕೈ ಕೊಟ್ಟ ಮಾಯಾವತಿ : ಯಾರೊಂದಿಗೆ ಮೈತ್ರಿ..?

By Web DeskFirst Published Oct 4, 2018, 8:16 AM IST
Highlights

ಇದೀಗ ಕಾಂಗ್ರೆಸ್ ಗೆ ಬಿಗ್ ಶಾಕ್ ದೊರೆತಂತಾಗಿದೆ. ಬಹುಜನ ಸಮಾಜವಾದಿ ಪಾರ್ಟಿ ಮುಖ್ಯಸ್ಥೆ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. 

ನವದೆಹಲಿ: ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ ವರ್ಷಾಂತ್ಯಕ್ಕೆ ನಡೆಯಲಿರುವ ವಿಧಾನಸಭೆ ಚುನಾವಣೆಗಳಲ್ಲಿ ಮಹಾಮೈತ್ರಿಕೂಟ ರೂಪಿಸಲು ಯತ್ನಿಸುತ್ತಿದ್ದ ಕಾಂಗ್ರೆಸ್ಸಿಗೆ ಭಾರಿ ಮುಖಭಂಗವಾಗಿದೆ. ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ ನಿರಾಕರಿಸಿದ್ದ ಬಿಎಸ್ಪಿ ಅಧಿನಾಯಕಿ ಮಾಯಾವತಿ, ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಜತೆ ಕೈಜೋಡಿಸುವುದಿಲ್ಲ ಎಂದು ಅಧಿಕೃತವಾಗಿ ಪ್ರಕಟಿಸಿದ್ದಾರೆ.

ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಏಕಾಂಗಿಯಾಗಿ ಅಥವಾ ಪ್ರಾದೇಶಿಕ ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡು ಸ್ಪರ್ಧೆ ಮಾಡುತ್ತೇವೆಯೇ ಹೊರತು ಕಾಂಗ್ರೆಸ್ಸಿನೊಂದಿಗೆ ಹೋಗುವುದಿಲ್ಲ ಎಂದು ದಲಿತ ನಾಯಕಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಪ್ರಕಟಿಸಿದರು.

ಬಿಎಸ್ಪಿಯನ್ನು ಮುಗಿಸಲು ಕಾಂಗ್ರೆಸ್‌ ಯತ್ನಿಸುತ್ತಿದೆ. ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವುದಕ್ಕಿಂತ ಮುಖ್ಯವಾಗಿ ಬಿಎಸ್ಪಿಯನ್ನು ನಾಶಪಡಿಸುವುದರ ಬಗ್ಗೆಯೇ ಕಾಂಗ್ರೆಸ್ಸಿಗೆ ಅತೀವ ಆಸಕ್ತಿ ಇದೆ. ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ (ಜೆಡಿಎಸ್‌) ಜತೆ ಮೈತ್ರಿ ಮಾಡಿಕೊಂಡಿದ್ದೆವು. ಛತ್ತೀಸ್‌ಗಢದಲ್ಲೂ ಅದೇ ರೀತಿ ಮಾಡಿದ್ದೇವೆ ಎಂದು ಮಾಯಾವತಿ ತಿಳಿಸಿದರು.

ಸಿಬಿಐ ತನಿಖೆ ಭೀತಿಯಿಂದ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಳ್ಳಲು ಮಾಯಾವತಿ ಹಿಂಜರಿಯುತ್ತಿದ್ದಾರೆ ಎಂಬ ದಿಗ್ವಿಜಯ ಸಿಂಗ್‌ರಂತಹ ಕಾಂಗ್ರೆಸ್‌ ನಾಯಕರ ವಿರುದ್ಧ ಮಾಯಾ ಕೆಂಡಕಾರಿದರು. ದಿಗ್ವಿಜಯ್‌ ಒಬ್ಬ ಬಿಜೆಪಿ ಏಜೆಂಟ್‌ ಎಂದು ಹರಿಹಾಯ್ದರು.

ಮಧ್ಯಪ್ರದೇಶದ 230 ಸ್ಥಾನಗಳ ಪೈಕಿ 50 ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಮಾಯಾವತಿ ಕೇಳಿದ್ದರು. ಆದರೆ ಕಾಂಗ್ರೆಸ್‌ ಈ ಬೇಡಿಕೆಯನ್ನು ಒಪ್ಪಿರಲಿಲ್ಲ. ಈ ಸಂಬಂಧ ಒತ್ತಡ ಹೇರಲು ಮಾಯಾವತಿ ಅವರು ಛತ್ತೀಸ್‌ಗಢದಲ್ಲಿ ಅಜಿತ್‌ ಜೋಗಿ ಪಕ್ಷದ ಜತೆ ಮೈತ್ರಿ ಮಾಡಿಕೊಂಡು, ಮಧ್ಯಪ್ರದೇಶದ 22 ಅಭ್ಯರ್ಥಿಗಳ ಪಟ್ಟಿಬಿಡುಗಡೆ ಮಾಡಿದ್ದರು. ಆದರೆ ಕಾಂಗ್ರೆಸ್‌ ಅದಕ್ಕೂ ಬಗ್ಗದ ಹಿನ್ನೆಲೆಯಲ್ಲಿ ದೂರ ಸರಿಯುವ ನಿರ್ಧಾರ ಪ್ರಕಟಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮಾಯಾ ಹೇಳಿಲ್ಲ. ಕಾಂಗ್ರೆಸ್ಸಿನ ಸೋನಿಯಾ ಹಾಗೂ ರಾಹುಲ್‌ ಗಾಂಧಿ ಅವರನ್ನು ಹೊಗಳಿರುವುದರಿಂದ ಆ ದೋಸ್ತಿ ಇನ್ನೂ ಜೀವಂತವಾಗಿರುವಂತಿದೆ.

click me!