ಮಸೂದ್‌ ಜಾಗತಿಕ ಉಗ್ರ ಎಂದು ಘೋಷಿಸಲು ಚೀನಾ ತಡೆ!

By Web Desk  |  First Published Mar 14, 2019, 10:33 AM IST

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ಇಂದು ನಿರ್ಧಾರ| ಎಲ್ಲರಿಗೂ ಒಪ್ಪಿಗೆಯಾಗುವ ನಿರ್ಧಾರ ಬೇಕು ಎಂದ ಚೀನಾ| 


ವಿಶ್ವಸಂಸ್ಥೆ[ಮಾ.14]: ಪಾಕಿಸ್ತಾನದ ಜೈಷ್‌-ಎ-ಮೊಹಮ್ಮದ್‌ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ, ಇತ್ತೀಚೆಗೆ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತದ 40 ಯೋಧರನ್ನು ಬಲಿ ಪಡೆದ ದಾಳಿಯ ಸೂತ್ರಧಾರ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸುವುದಕ್ಕೆ ಈ ಬಾರಿಯೂ ಚೀನಾ ಅಡ್ಡಿಪಡಿಸುವ ಸಾಧ್ಯತೆಗಳು ಕಂಡುಬಂದಿವೆ.

ಭಾರತೀಯ ಕಾಲಮಾನದಲ್ಲಿ ಗುರುವಾರ ಬೆಳಗಿನ ಜಾವದ ವೇಳೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಈ ಕುರಿತು ಮತದಾನ ನಡೆಯಲಿದೆ. ಅದರಲ್ಲಿ ಮಸೂದ್‌ ಅಜರ್‌ನ ಹಣೆಬರಹ ನಿರ್ಧಾರವಾಗಲಿದೆ. ಇತ್ತೀಚೆಗೆ ಪುಲ್ವಾಮಾ ದಾಳಿಯ ನಂತರ ಭಾರತದ ಒತ್ತಾಸೆಯ ಮೇರೆಗೆ ಅಮೆರಿಕ, ಬ್ರಿಟನ್‌ ಮತ್ತು ಫ್ರಾನ್ಸ್‌ ದೇಶಗಳು ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸುವಂತೆ ಮನವಿ ಸಲ್ಲಿಸಿದ್ದವು. ಆದರೆ, ಅವನನ್ನು ಜಾಗತಿಕ ಉಗ್ರನೆಂದು ಘೋಷಿಸುವುದಕ್ಕೆ 2009ರಿಂದಲೂ ಅಡ್ಡಿಪಡಿಸುತ್ತಾ ಬಂದಿರುವ ಪಾಕಿಸ್ತಾನದ ಸ್ನೇಹಿತ ರಾಷ್ಟ್ರ ಚೀನಾ ಈ ಬಾರಿಯೂ ಅಡ್ಡಗಾಲು ಹಾಕುವ ಸುಳಿವು ನೀಡಿದೆ.

Tap to resize

Latest Videos

ಈ ಕುರಿತು ಬುಧವಾರ ಬೀಜಿಂಗ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್‌ ‘ಎಲ್ಲ ಪಕ್ಷಗಾರರಿಗೂ ಒಪ್ಪಿಗೆಯಾಗುವಂತಹ ಪರಿಹಾರದಿಂದ ಮಾತ್ರ ಸಮಸ್ಯೆ ಬಗೆಹರಿಯುತ್ತದೆ. ಭದ್ರತಾ ಮಂಡಳಿಯ ಸಭೆಯಲ್ಲಿ ನಾವು ಭಾಗವಹಿಸಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತೇವೆ’ ಎಂದು ಹೇಳಿದರು.

ಆದರೆ, ಈ ಕುರಿತು ಅಮೆರಿಕ ಕಠಿಣ ನಿಲುವು ತಾಳಿದ್ದು, ‘ಮಸೂದ್‌ ಅಜರ್‌ನನ್ನು ಈ ಬಾರಿಯೂ ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆಯು ಘೋಷಿಸುವಲ್ಲಿ ವಿಫಲವಾದರೆ ಶಾಂತಿ ಹಾಗೂ ಸ್ಥಿರತೆಯನ್ನು ಕಾಪಾಡುವ ಅಮೆರಿಕ ಮತ್ತು ಚೀನಾದ ಉದ್ದೇಶಕ್ಕೆ ಧಕ್ಕೆಯಾಗಲಿದೆ. ಮಸೂದ್‌ ಅಜರ್‌ ಜೈಷ್‌-ಎ-ಮೊಹಮ್ಮದ್‌ ಭಯೋತ್ಪಾದಕ ಸಂಘಟನೆಯ ಸಂಸ್ಥಾಪಕ. ಅವನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ವಿಶ್ವಸಂಸ್ಥೆಯ ಎಲ್ಲ ಮಾನದಂಡಗಳೂ ಪೂರಕವಾಗಿವೆ’ ಎಂದು ಹೇಳಿದೆ.

click me!