ಬೆಂಗಳೂರಿಗೆ ಮತ್ತೊಂದು ಮಾಸ್ಟರ್ ಪ್ಲಾನ್; 2031ರ ಮಹಾನಕ್ಷೆ ಸಿದ್ಧ

Published : Jan 06, 2017, 05:40 AM ISTUpdated : Apr 11, 2018, 12:53 PM IST
ಬೆಂಗಳೂರಿಗೆ ಮತ್ತೊಂದು ಮಾಸ್ಟರ್ ಪ್ಲಾನ್; 2031ರ ಮಹಾನಕ್ಷೆ ಸಿದ್ಧ

ಸಾರಾಂಶ

ಮುಂದಿನ 15 ವರ್ಷಗಳಲ್ಲಿ ಉಂಟಾಗಬಹುದಾದ ವಾಹನ ದಟ್ಟಣೆ, ಮಾಲಿನ್ಯ, ನೀರಿನ ಅಭಾವ, ನಗರೀಕರಣದಿಂದ ಕಡಿತವಾಗುವ ಹಸಿರು ಪ್ರಮಾಣ, 2031ಕ್ಕೆ ಎದುರಾಗಬಹುದಾದ ಸವಾಲುಗಳು ಮತ್ತು ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡಿದ್ದು, ಆ ಸಮಯಕ್ಕೆ ಬೇಕಾಗಲಿರುವ ಅಗತ್ಯ ಸೇವೆಗಳು ಮತ್ತು ಸೌಲಭ್ಯಗಳ ಕುರಿತು ವಿಸ್ತೃತವಾದ 2031ರ ಮಾಸ್ಟರ್‌'ಪ್ಲಾನ್‌'ನ ನೀಲನಕ್ಷೆಯನ್ನು ಬಿಡಿಎ ರೂಪಿಸಿ ಬಿಡುಗಡೆ ಮಾಡಿದೆ.

ಬೆಂಗಳೂರು: ನಗರದ 2015ರ ಮಾಸ್ಟರ್‌ ಪ್ಲಾನ್‌ (ಪರಿಷ್ಕೃತ ಮಹಾನಕ್ಷೆ) ಅವಧಿ ಮುಗಿಯುತ್ತಿದ್ದಂತೆ, 2031ರ ಮಹಾನಕ್ಷೆಗೆ ಸಿದ್ಧತೆ ನಡೆಸುತ್ತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಯೋಜನೆಯ ನೀಲನಕ್ಷೆ ಬಿಡುಗಡೆಗೊಳಿಸಿದೆ. ವಸತಿ, ನೀರು ಸರಬರಾಜು, ಸಾರಿಗೆ ಮತ್ತು ಸಂಪರ್ಕ, ಘನತ್ಯಾಜ್ಯ ವಿಲೇವಾರಿ, ನೀರು ಮತ್ತು ಪರಿಸರ ಸಂರಕ್ಷಣೆಯ ಐದು ಅಂಶಗಳನ್ನು ಪ್ರಮುಖ​ವಾಗಿ ಪರಿಗಣಿಸಿ ಪರಿಷ್ಕೃತ ಮಹಾಯೋಜನೆ-2013ರ ಕರಡು ಪ್ರತಿ ಸಿದ್ಧಗೊಳಿಸಿದೆ.

ಬಿಡಿಎ ವ್ಯಾಪ್ತಿಯಲ್ಲಿರುವ 1214.86 ಚ. ಕಿಮೀ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿರುವ 251 ಹಳ್ಳಿ​ಗಳನ್ನು ಒಳಗೊಂಡ ಯೋಜನೆ ಪರಿಷ್ಕರಣೆ ಕಾರ್ಯ​ವನ್ನು ರಾಯಲ್‌ ಹ್ಯಾಸ್ಕೋನಿಂಗ್‌ ಡಿಎಚ್‌ವಿ ಹಾಗೂ ಎಡಿಎಪಿಟಿ ಸಂಸ್ಥೆಗೆ ವಹಿಸಲಾ​ಗಿದೆ. 2012ರ ಸ್ಯಾಟಲೈಟ್‌ ಫೋಟೋ ಆಧಾರದಲ್ಲಿ ನಕ್ಷೆ ತಯಾರಿಸಿದೆ.

ಜನಸಂಖ್ಯೆ ಅಂದಾಜು: ವೈಜ್ಞಾನಿಕ ವಿಧಾನಗಳು, ಸಾಂಖ್ಯಿಕ ಇಲಾಖೆ, ಬಿಎಂಆರ್‌ಡಿಎ ಜತೆ ಚರ್ಚಿಸಿ, ಪ್ರಸ್ತುತ ಒಂದು ಕೋಟಿ ರುವ ಬೆಂಗಳೂರಿನ ಜನ​ಸಂಖ್ಯೆ 2031ರ ಹೊತ್ತಿಗೆ ದುಪ್ಪಟ್ಟಾಗಬಹುದು ಎಂದು ಅಂದಾಜಿಸಲಾಗಿದೆ. 1991ರಲ್ಲಿ ಪ್ರತಿ ಕುಟುಂ​ಬ ಸದಸ್ಯರು ಸರಾಸರಿ 5, 2011ರಲ್ಲಿ 4.01 ಮತ್ತು 2031ಕ್ಕೆ 3.89 ಆಗಬಹುದು. ಜನಸಂಖ್ಯೆಗೆ ಅನುಗುಣವಾಗಿ ಅಂದಾಜು 30 ಲಕ್ಷ ಮನೆಗಳನ್ನು ನಿರ್ಮಿಸಬೇಕಿದ್ದು, ಇದರಲ್ಲಿ ಶೇ.60 ಮನೆಗಳನ್ನು ಸಾಮಾನ್ಯ ಜನರಿಗೆ ಕೈಗೆಟುಕುವ ದರದಲ್ಲಿ ನಿರ್ಮಿಸಬೇಕು.

ಮೂರರ ಜತೆಗೆ ಎಂಟು ಉದ್ಯಾನ: ನಗರದ ಪ್ರತಿಷ್ಠಿತ ಲಾಲ್‌ಬಾಗ್‌, ಕಬ್ಬನ್‌ಪಾರ್ಕ್ ಮತ್ತು ಸ್ವಾತಂತ್ರ್ಯ ಉದ್ಯಾನದ ಮಾದರಿಯಲ್ಲಿಯೇ ಇನ್ನೂ ಎಂಟು ಉದ್ಯಾನಗಳನ್ನು ನಿರ್ಮಿಸಲು ಯೋಜನೆ​ಯಲ್ಲಿ ಪ್ರಸ್ತಾವ ಮಾಡಲಾಗಿದೆ. ಮಾಲಿನ್ಯ ನಿಯಂತ್ರ​ಣಕ್ಕಾಗಿ ಟ್ರಕ್‌ ಟರ್ಮಿನಲ್‌ ಮತ್ತು ಲಾಜಿಸ್ಟಿಕ್‌ ಹಬ್‌ಗಳ ನಿರ್ಮಾಣದಿಂದ ನಗರ ಪ್ರವೇಶಿಸುವ ಭಾರಿ ವಾಹನಗಳ ನಿರ್ಬಂಧ ಹೇರುವ ಪ್ರಸ್ತಾವವೂ ಇದೆ.

ಯೋಜನಾ ಸಮಿತಿ ರಚನೆ ಹೇಗೆ?: ಬಿಡಿಎ ಆಯುಕ್ತರು, ಅಧ್ಯಕ್ಷರು, ಕಾರ್ಯದರ್ಶಿ, ನಗರ ಯೋಜನಾ ಸದ​ಸ್ಯರು, ಎಂಜಿನಿಯರ್‌ ಸದಸ್ಯರು, ಕಾನೂನು ಸದಸ್ಯರು, ಪಾಲಿಕೆ ಆಯುಕ್ತರು, ಜಲಮಂಡಳಿ ಅಧ್ಯಕ್ಷರನ್ನು ಒಳಗೊಂಡ 18 ಸದಸ್ಯರ ನಗರ ಯೋಜನಾ ಸಮಿತಿಯು ಕರಡು ಪ್ರತಿ ಸಿದ್ಧಗೊಳಿಸಿದೆ. 1984ರಲ್ಲಿ ಅನುಮೋದನೆ​ಗೊಂಡ ವರದಿಯು 1995, 2007ರ ಬಳಿಕ ಇದೀಗ ನಾಲ್ಕನೇ ಬಾರಿಗೆ ಪರಿಷ್ಕರಣೆಗೊಂಡಿದೆ. ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961, ಕಲಂ 9ರ ಅಡಿ ಸ್ಥಳೀಯ ಯೋಜನಾ ಪ್ರದೇಶಕ್ಕೆ ಅನುಗುಣವಾಗಿ ಯೋಜನೆ ಸಿದ್ಧಗೊಂಡಿದೆ. ಪ್ರತಿ ಹತ್ತು ವರ್ಷಗಳಿಗೊಮ್ಮೆ ಪರಿಷ್ಕರಣೆಗೆ ಅವಕಾಶ​ವಿದ್ದು, 2031ರ ಅವಧಿಗೆ ತಯಾರಿಸಲಾಗುತ್ತಿದೆ. ರಾಜ್ಯ ಸರ್ಕಾರದಿಂದ 2031ರ ಯೋಜನೆ ಅಂತಿ​ಮವಾಗಿ ಅನುಮೋದನೆಗೊಂಡ ಬಳಿಕ, ಪ್ರಸ್ತುತ ಜಾರಿಯಲ್ಲಿರುವ ಬೆಂಗಳೂರು ಆರ್‌ಎಂಪಿ-2015 ಯೋಜನೆ ಅನೂರ್ಜಿತಗೊಳ್ಳಲಿದೆ.

ಯೋಜನೆ ಅನುಷ್ಠಾನ ಹೇಗೆ?: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಯಾವುದೇ ಯೋಜನೆ​ಯನ್ನು ಜನರ ಅಭಿಪ್ರಾಯಗಳನ್ನು ಪರಿಗಣಿಸದೆ, ನೇರವಾಗಿ ಅನುಷ್ಠಾನಕ್ಕೆ ತರುತ್ತದೆ ಎಂಬ ಆರೋಪ ಬಾರದಂತೆ ತಡೆಯಲು ಈ ಬಾರಿ ಯೋಜನೆ ವಿವರವನ್ನು ಜನರ ಮುಂದಿಡುತ್ತಿದೆ. ಯೋಜನಾ ಸಮಿತಿ ಸಿದ್ಧಪಡಿಸಿರುವ ವರದಿಯನ್ನು ವಲಯವಾರು ಸಭೆಗಳ ಮೂಲಕ ಜನರಿಗೆ ತಿಳಿಸಲಿದೆ. ಬಿಡಿಎ ವ್ಯಾಪ್ತಿಯನ್ನೂ ಮೀರಿ ನಗರದ ಹೊರ ವಲಯದಲ್ಲಿನ ಜನರು ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ವ್ಯಕ್ತ​ಪಡಿಸಲು ಮುಕ್ತ ಅವಕಾಶ ಕಲ್ಪಿಸಲಿದೆ. ಸ್ಥಳೀಯ ಜನಪ್ರತಿನಿಧಿಗಳು, ನಗರ ತಜ್ಞರು, ವಿವಿಧ ಕ್ಷೇತ್ರಗಳ ತಜ್ಞರು, ನಾಗರಿಕರು ಯೋಜನಾ ವರದಿ ತಿದ್ದುಪಡಿಸಿಗೆ ಅನಿಸಿಕೆ ತಿಳಿಸಬಹುದು. 6-7 ತಿಂಗಳು ಸಭೆಗಳನ್ನು ನಡೆಸಿ ಜನರ ಅಭಿಪ್ರಾಯಗಳನ್ನು ಸರ್ಕಾ​ರಕ್ಕೆ ತಿಳಿಸಲಿದೆ. ಸರ್ಕಾರ ಮತ್ತೊಮ್ಮೆ ಪರಿಶೀಲಿಸಿ ವರದಿ ಸಿದ್ಧಪಡಿಸಲಾಗಿದೆ. ಸರ್ಕಾರದ ಆ ವರದಿಯನ್ನು ಮತ್ತೊಮ್ಮೆ ಜನರ ಮುಂದಿಡ​ಲಿದೆ. ಅಂತಿಮವಾಗಿ ಯೋಜನಾ ವರದಿ ಸಿದ್ಧಗೊಳ್ಳಲಿದೆ. ಮುಂದಿನ 8ರಿಂದ 9 ತಿಂಗಳಿನಲ್ಲಿ ವರದಿ ಅನುಷ್ಠಾನಕ್ಕೆ ಸಿದ್ಧಗೊಳ್ಳಬಹುದು ಎಂದು ಅಂದಾಜಿಸಲಾಗಿದೆ.

ಜ.12ರಂದು ಮೊದಲ ಸಾರ್ವಜನಿಕ ಸಭೆ: ಯೋಜನೆಯನ್ನು ಜನರಿಗೆ ತಲುಪಿಸಲು ವಲಯ​ವಾರು ಸಭೆ ನಡೆಸುತ್ತಿದ್ದು, ಜ.12ರಂದು ಮೊದಲ ಸಾರ್ವಜನಿಕ ಸಭೆ ಆಯೋಜಿಸಲಾಗಿದೆ. ಸಭೆಯಲ್ಲಿ ಮತ್ತು ಇ ಮೇಲ್‌ ಮೂಲಕವೂ ಜನರು ತಮ್ಮ ಅನಿಸಿಕೆ ಹಂಚಿಕೊಳ್ಳಬಹುದು. ತಮ್ಮ ಸಲಹೆ, ಸೂಚನೆಗಳನ್ನು suggestions.rmp2031@gmail.com ವಿಳಾಸಕ್ಕೆ ಕಳುಹಿಸಬಹುದು ಎಂದು ಬಿಡಿಎ ಆಯುಕ್ತ ರಾಜ​ಕು​ಮಾರ್‌ ಖತ್ರಿ ‘ಕ​ನ್ನ​ಡ​ಪ್ರ​ಭ​'ಕ್ಕೆ ತಿಳಿ​ಸಿ​ದ​ರು.

ಸಂಚಾರ ದಟ್ಟಣೆ ಕಡಿತಕ್ಕೆ ಮಾರ್ಗಗಳು
■ ಮೆಟ್ರೋ, ಮಾನೋ ರೈಲು, ಎಲಿವೇಟೆಡ್‌ ಬಸ್‌ ಸಂಚಾರ ವ್ಯವಸ್ಥೆ ಹೆಚ್ಚಳ
■ ಬಿಎಂಟಿಸಿ ಬಸ್‌ಗಳ ಸಂಖ್ಯೆಯನ್ನು ಕಡಿತಗೊಳಿಸಿ ಇತರೆ ಸಮೂಹ ಸಾರಿಗೆ ಬಳಕೆಗೆ ಪ್ರೋತ್ಸಾಹ- ಆದ್ಯತೆ
■ ಹೊಸ ವರ್ತುಲ ರಸ್ತೆಗಳ ನಿರ್ಮಾಣ, ವಾಣಿಜ್ಯ/ಸಾರ್ವಜನಿಕ ಚಟುವಟಿಕಾ ಕೇಂದ್ರಗಳನ್ನು ವಿವಿಧ ದಿಕ್ಕುಗಳಿಗೆ ವಿಸ್ತರಣೆ
■ ನಗರದ ನಾಲ್ಕೂ ದಿಕ್ಕುಗಳಲ್ಲಿ ಟ್ರಕ್‌ ಟರ್ಮಿನಲ್‌ಗಳ ನಿರ್ಮಾಣ

ಘನ ತ್ಯಾಜ್ಯ ನಿರ್ವಹಣೆ ಹೇಗೆ?
2009ರಲ್ಲಿ ಉತ್ಪತ್ತಿಯಾಗುತ್ತಿದ್ದ ತ್ಯಾಜ್ಯ ಪ್ರಮಾಣ ಆಧಾರವಾಗಿಟ್ಟು ಕೊಂಡು ಪ್ರತಿ ವರ್ಷಕ್ಕೆ 1.3 ಜಿಪಿಸಿಡಿ (ಗ್ಯಾಲನ್‌ ಪರ್‌ ಕ್ಯಾಪಿಟಾ ಪರ್‌ ಡೇ) ಕಸ ಉತ್ಪತ್ತಿಯಾ ಗಬಹುದೆಂದು ಅಂದಾಜಿಸಲಾಗಿದೆ. ಅದರಂತೆ 2031ರ ವೇಳೆಗೆ 18,390 ಟನ್‌ (ಎಂ.ಟಿ) ಕಸ ಉತ್ಪತ್ತಿಯಾಗಬಹುದೆಂದು ಅಂದಾಜು ಮಾಡಲಾಗಿದೆ. ಅಪಾರ್ಟ್‌ಮೆಂಟ್‌ಗಳು ತಮ್ಮಲ್ಲೇ ಸಂಸ್ಕರಣೆ ಮಾಡಿಕೊಳ್ಳುವ ವ್ಯವಸ್ಥೆ ಜಾರಿಗೆ ಪ್ರಸ್ತಾವವೂ ನೀಲನಕ್ಷೆಯಲ್ಲಿದೆ.

ಮಲಿನ ನೀರು ಸಂಸ್ಕರಣೆ, ಕೆರೆಗಳ ರಕ್ಷಣೆಗೆ ಒತ್ತು
ಕೈಗಾರಿಕೆಗಳ ಮಲಿನ ನೀರು ಹಳ್ಳಗಳ ಮೂಲಕ ಕೆರೆಗಳನ್ನು ಸೇರುತ್ತಿದೆ. ಒಂದರಿಂದ ಮತ್ತೊಂದು ಕೆರೆಗೆ ಸಂಪರ್ಕವಿರುವುದರಿಂದ ಎಲ್ಲ ಕೆರೆಗಳ ನೀರು ಜೈವಿಕ ಮತ್ತು ರಾಸಾಯನಿಕವಾಗಿ ಬಳಕೆಗೆ ಯೋಗ್ಯವಾಗಿಲ್ಲ. ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಇದನ್ನು ತಪ್ಪಿಸುವುದಕ್ಕಾಗಿ 1985ರಲ್ಲಿ ಸರ್ಕಾರ ನೇಮಿಸಿದ ಲಕ್ಷ್ಮಣರಾವ್‌ ಕೆರೆ ಅಭಿವೃದ್ಧಿ ಮತ್ತು ಸಂರಕ್ಷಣೆ ವರದಿ ಅನುಷ್ಠಾನಕ್ಕೆ ಶಿಫಾರಸು ಮಾಡಲಾಗಿದೆ.
1) ಹೊಸದಾಗಿ ನಿರ್ಮಾಣಗೊಳ್ಳುವ ಬಡಾವಣೆಗಳು, ಅಪಾರ್ಟ್‌ಮೆಂಟ್‌, ವಾಣಿಜ್ಯ ಸಂಕೀರ್ಣಗಳಲ್ಲಿಯೇ ಮಲಿನ ನೀರು ಶೂನ್ಯ ವಿಲೇವಾರಿ ಪರಿಕಲ್ಪನೆ ಕಡ್ಡಾಯ
2) ಮಳೆ ನೀರು ಕೊಯ್ಲು, ಹಳ್ಳಗಳ ಸಂರಕ್ಷಣೆ, ಇಂಗು ಗುಂಡಿ ನಿರ್ಮಾಣ
3) ಪ್ರಾಧಿಕಾರ ವ್ಯಾಪ್ತಿಯಲ್ಲಿ ಗಣಿಗಾರಿಕೆ ಚಟುವಟಿಕೆ ನಿಷೇಧ, ನಿರ್ಬಂಧಿತ ಗಣಿ ಪ್ರದೇಶಗಳಲ್ಲಿ ಉದ್ಯಾನ ನಿರ್ಮಾಣ
4) ಮಲಿನ ನೀರು, ಘನ ತ್ಯಾಜ್ಯ ನೀರು ಕೆರೆ ಸೇರದಂತೆ ತಡೆಗಟ್ಟುವುದು (ವಾಣಿಜ್ಯ, ಕೈಗಾರಿಕೆ, ಗೃಹ ತ್ಯಾಜ್ಯ)
5) ಈಗಾಗಲೇ ಒತ್ತುವರಿಯಾಗಿರುವ ಕೆರೆಗಳನ್ನು ನಿವೇಶನ, ಕಟ್ಟಡ ನಿರ್ಮಾಣಕ್ಕೆ ಬಳಸದೆ ಉದ್ಯಾನಕ್ಕೆ ಮೀಸಲಿಡಬೇಕು
6) ಬಿಡಿಎ, ಬಿಬಿಎಂಪಿ, ಸಣ್ಣ ನೀರಾವರಿ, ಅರಣ್ಯ ಮತ್ತು ಕೆರೆ ಅಭಿವೃದ್ಧಿ ಪ್ರಾಧಿಕಾರಗಳು ಕೆರೆಗಳ ಅಭಿವೃದ್ಧಿ, ಸಂರಕ್ಷಣೆಗೆ ಒತ್ತು ನೀಡಬೇಕು,

ನೀರಿನ ನಿರ್ವಹಣೆ ಹೇಗೆ?
ಸದ್ಯ ಬೆಂಗಳೂರಿಗೆ ನಿತ್ಯ 1470 ಎಂಎಲ್‌ಡಿ (19 ಟಿಎಂಸಿ) ಕಾವೇರಿ ನೀರು ಸರಬರಾಜಾಗುತ್ತಿದೆ. ಇಷ್ಟಾದರೂ ಹಲವೆಡೆ ಕಾವೇರಿ ನೀರಿನ ಸಂಪರ್ಕವಿಲ್ಲದ ಕಾರಣ ಸುಮಾರು 400 ಎಂಎಲ್‌ಡಿಯಷ್ಟುಕೊಳವೆಬಾವಿ ನೀರು ಬಳಕೆಯಾಗುತ್ತಿದ್ದರೂ ನೀರಿನ ಬವಣೆ ತೀರುತ್ತಿಲ್ಲ. ಹೀಗಾಗಿ 2031ರ ವೇಳೆಗೆ ಒಟ್ಟಾರೆ 35 ಟಿಎಂಸಿ ನೀರು ಬೇಕಾಗಬಹುದು ಎಂದು ಅಂದಾಜಿಸಿದೆ. ಸಮರ್ಪಕ ನೀರು ಪೂರೈಕೆಗೆ ಪೂರಕ ಯೋಜನೆಗಳನ್ನು ಪ್ರಸ್ತಾಪಿಸಿದೆ.
1) ನೀರು ಪೋಲಾಗುವ ಪ್ರಮಾಣ ಶೇ.46ರಿಂದ 15ಕ್ಕೆ ಇಳಿಕೆ
2) ಹೊಸ ಯೋಜನೆಗಳಲ್ಲಿ ಡ್ಯುಯಲ್‌ ಪೈಪಿಂಗ್‌ ವ್ಯವಸ್ಥೆ ಕಡ್ಡಾಯ
3) ಹಳ್ಳ, ತೊರೆಗಳ ಸಮೀಪವೇ ಮಲಿನ ನೀರಿನ ಸಂಸ್ಕರಣೆ ಘಟಕ ಸ್ಥಾಪಿಸಿ ನೀರಿನ ಸಂಸ್ಕರಣೆ ಬಳಿಕ ಗೃಹೇತರ ಉದ್ದೇಶಕ್ಕೆ ಬಳಕೆ
4) ಎತ್ತಿನಹೊಳೆ ಮತ್ತು ಇತರ ಹಳ್ಳಗಳಿಂದ ಟಿ.ಜಿ. ಹಳ್ಳಿ ಜಲಾಶಯದಲ್ಲಿ 10 ಟಿಎಂಸಿ, ಲಿಂಗನಮಕ್ಕಿಯಿಂದ ಟಿ.ಜಿ. ಹಳ್ಳಿಗೆ 20 ಟಿಎಂಸಿ ಮತ್ತು ಹೇಮಾವತಿ ನಾಲೆಯಿಂದ 5 ಟಿಸಿಎಂ, ಬೆಂಗಳೂರು ಸುತ್ತಮುತ್ತಲ ಮಳೆ ನೀರಿನಿಂದ 10 ಟಿಎಂಸಿ ಮತ್ತು ಉದ್ದೇಶಿತ ಮೇಕೆ ದಾಟು.

(epaer.kannadaprabha.in)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Mysore: ಗೌರವ ಕೊಡದ ಹೆಂಡ್ತಿ ಕೊಲ್ಲಲು ಸುಪಾರಿ ಕೊಟ್ಟ ಪತಿರಾಯ!
ರಹಸ್ಯ ಡಿನ್ನರ್ ಮೀಟಿಂಗ್‌ನಲ್ಲಿ 'ಅಹಿಂದ' ಮಾಸ್ಟರ್ ಪ್ಲಾನ್! ಸಿಎಂ ಕುರ್ಚಿ ಉಳಿಸಿಕೊಳ್ಳಲು ಬೆಳಗಾವಿಯಲ್ಲಿ ಹೊಸ ರಣತಂತ್ರ?