ಮಂಗಳೂರಿನ ಕಬ್ಬಿಣದ ಉಂಡೆಗೆ ಭರ್ಜರಿ ಡಿಮ್ಯಾಂಡ್

By ಪ್ರಭುಸ್ವಾಮಿ ನಟೇಕರ್First Published Oct 7, 2017, 5:35 PM IST
Highlights

ಹೊಸ ಅಧ್ಯಾಯ | ಮೇಕ್ ಇನ್ ಇಂಡಿಯಾದಿಂದ ಕುದುರೆಮುಖ ಸಂಸ್ಥೆಗೆ ಮರುಜೀವ | ಬ್ರೆಜಿಲ್‌ನಿಂದ ಅದಿರು ತರಿಸಿ, ಉಂಡೆ ಮಾಡಿ ರಫ್ತು

ಬೆಂಗಳೂರು: ಹಲವು ವರ್ಷಗಳಿಂದ ಎದುರಿಸುತ್ತಿದ್ದ ಕಬ್ಬಿಣ ಅದಿರು ಸಮಸ್ಯೆಗಳನ್ನು ಮೇಕ್ ಇನ್ ಇಂಡಿಯಾ ಮೂಲಕ ಬಗೆಹರಿಸಿಕೊಂಡ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ (ಕೆಐಒಸಿಎಲ್) ಇದೀಗ ಹೊಸ ಅಧ್ಯಾಯದೊಂದಿಗೆ ವಿದೇಶಗಳಿಗೆ ಅದಿರು ಉಂಡೆಗಳನ್ನು ರಫ್ತು ಮಾಡುವಲ್ಲಿ ದಾಪುಗಾಲು ಹಾಕುತ್ತಿದೆ.

ಉತ್ಕೃಷ್ಟ ಅದಿರು ಲಭ್ಯವಾಗದ ಕಾರಣ ಹಲವು ವರ್ಷಗಳಿಂದ ಅದಿರು ಉಂಡೆಗಳ ಉತ್ಪಾದನೆಗೆ ಭಾರಿ ಹಿನ್ನಡೆಯಾಗಿತ್ತು. ಹೀಗಾಗಿ ವಿದೇಶಗಳಿಗೆ ಅದಿರು ಉಂಡೆಗಳ ರಫ್ತಿಗೆ ತೊಡಕಾಗಿತ್ತು. ಇದೀಗ ಉತ್ತಮ ಗುಣಮಟ್ಟದ ಅದಿರು ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ವಿದೇಶಿ ಮಾರುಕಟ್ಟೆಯಲ್ಲಿ ಸಂಸ್ಥೆಯು ಅದಿರು ಉಂಡೆಗಳಿಗೆ ಬೇಡಿಕೆ ಹೆಚ್ಚಿಸಿಕೊಂಡಿದೆ. ಮಂಗಳೂರಿನಲ್ಲಿ ಅದಿರು ಉಂಡೆಗಳನ್ನು ಉತ್ಪಾದಿಸಿ ರಫ್ತು ಮಾಡುವ ವಹಿವಾಟು ಚುರುಕುಗೊಂಡಿದೆ.

ಕಳೆದ ಐದು ವರ್ಷಗಳಿಂದ ಜಪಾನ್‌ಗೆ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದ ಅದಿರು ಉಂಡೆ ರಫ್ತು ಇದೀಗ ಮತ್ತೆ ಪುನಾರಂಭಗೊಂಡಿದೆ. ಅಲ್ಲದೇ, ಇರಾನ್, ಚೀನಾ, ದಕ್ಷಿಣ ಕೊರಿಯಾಗಳಿಗೆ ಇತ್ತೀಚೆಗೆ ರಫ್ತು ಮಾಡಲಾಗುತ್ತಿದ್ದು, ಲಾಭದತ್ತ ಕೆಐಒಸಿಎಲ್ ಹೆಜ್ಜೆ ಇಟ್ಟಿದೆ. ದಕ್ಷಿಣ ಕೊರಿಯಾ ರಾಷ್ಟ್ರಕ್ಕೆ ಅತಿ ಹೆಚ್ಚು ಅದಿರು ಉಂಡೆ ರಫ್ತು ಮಾಡಲಾಗುತ್ತಿದ್ದು, ಪ್ರತಿ ತಿಂಗಳು ಸುಮಾರು ಒಂದು ಲಕ್ಷ ಟನ್ ರಫ್ತಾಗುತ್ತಿದೆ. ಐದು ವರ್ಷಗಳ ಬಳಿಕ ಜಪಾನ್‌ಗೆ 60 ಸಾವಿರಕ್ಕೂ ಹೆಚ್ಚು ಟನ್ ರಫ್ತಾಗುತ್ತಿದೆ. ಕಳೆದ ಒಂದು ವರ್ಷದ ಹಿಂದೆ ಇರಾನ್‌ನೊಂದಿಗೆ 66,500 ಟನ್ ರಫ್ತು ವ್ಯವಹಾರ ಕುದುರಿಸಿಕೊಂಡು ರಫ್ತು

ಮಾಡಲಾಗುತ್ತಿದೆ. ಚೀನಾಕ್ಕೂ ಬೇಡಿಕೆಗೆ ತಕ್ಕಂತೆ ಅದಿರು ಉಂಡೆ ರಫ್ತು ಮಾಡಲಾಗುತ್ತಿದೆ. ಉತ್ಕೃಷ್ಟ ಗುಣಮಟ್ಟದ ಕಬ್ಬಿಣದ ಅದಿರನ್ನು ಬ್ರೆಜಿಲ್ ರಾಷ್ಟ್ರದಿಂದ ಆಮದು ಮಾಡಿಕೊಂಡು ಅದನ್ನು ಮಂಗಳೂರಿನಲ್ಲಿ ಉಂಡೆ ಮಾಡಿ ರಫ್ತು ಮಾಡಲಾಗುತ್ತಿದೆ ಎಂದು ಕೆಐಒಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಛತ್ತೀಸ್‌ಗಢದ ಕೆರಂದೂರು ಮತ್ತು ಬಚೇರಿಯಿಂದ ಕಬ್ಬಿಣದ ಅದಿರು ಪಡೆಯಬಹುದು. ಆದರೆ, ಬ್ರೆಜಿಲ್‌ನ ಗುಣಮಟ್ಟ ಇಲ್ಲಿನ ಅದಿರಿಗೆ ಇರುವುದಿಲ್ಲ. ಅಲ್ಲದೇ, ಛತ್ತೀಸ್‌ಗಢದಿಂದ ಕಬ್ಬಿಣದ ಅದಿರು ತರಲು ಬ್ರೆಜಿಲ್‌ಗಿಂತ ಹೆಚ್ಚಿನ ಮೊತ್ತ ಭರಿಸಬೇಕಾಗುತ್ತದೆ. ಛತ್ತೀಸ್‌ಗಢದಿಂದ ರೈಲಿನಲ್ಲಿ ವಿಶಾಖಪಟ್ಟಣಂ ಬಂದರಿಗೆ ತಂದು ಅಲ್ಲಿಂದ ಅದಿರನ್ನು ಮಂಗಳೂರಿಗೆ ತರಬೇಕು. ಇದು ದುಬಾರಿಯಾಗಲಿದೆ. ಹೀಗಾಗಿ ಬ್ರೆಜಿಲ್’ನಿಂದ ಕಡಿಮೆ ಮೊತ್ತದಲ್ಲಿ ಉತ್ಕೃಷ್ಟ ಕಬ್ಬಿಣ ಅದಿರು ಲಭ್ಯವಾಗುವುದರಿಂದ ಅಲ್ಲಿಂದ ಆಮದು ಮಾಡಿಕೊಂಡು ಅದಿರು ಉಂಡೆಗಳನ್ನು ತಯಾರಿಸಲಾಗುತ್ತದೆ ಎನ್ನುತ್ತಾರೆ.

ನಷ್ಟದ ಹಾದಿಯಲ್ಲಿದ್ದ ಸಂಸ್ಥೆಯು ಇದೀಗ ಲಾಭದತ್ತ ಸಾಗಿದ್ದು, ಕಬ್ಬಿಣದ ಅದಿರು ಪಡೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಶೀಘ್ರದಲ್ಲಿಯೇ ರಾಜ್ಯದಲ್ಲಿ ಅದಿರು ತೆಗೆಯುವ ಕಾರ್ಯ ಆರಂಭಿಸಲಾಗುತ್ತದೆ ಎಂದು ಹೇಳಿದ್ದಾರೆ. ಕುದುರೆಮುಖದಲ್ಲಿನ ಗಣಿಗಾರಿಕೆ ಸ್ಥಗಿತಗೊಂಡ ತರುವಾಯ ಬಳ್ಳಾರಿ ಗಣಿಗಾರಿಕೆಗೆ ಸುಪ್ರೀಂಕೋರ್ಟ್‌ಗೆ ನಿಷೇಧ ಹೇರಿತು. ಪರಿಣಾಮ ಅದಿರು ಉಂಡೆ ಉತ್ಪನ್ನಕ್ಕೆ ಭಾರಿ ಹಿನ್ನಡೆ ಉಂಟಾಗಿತ್ತು. ಮಂಗಳೂರಿನ ಅದಿರು ಉಂಡೆ ಉತ್ಪನ್ನ ಘಟಕಕ್ಕೆ ಕೆಲಸವೇ

ಇಲ್ಲದಂತಾಯಿತು. ವರ್ಷದಲ್ಲಿ ಕೇವಲ 20-30 ದಿನಗಳ ಕಾಲ ಮಾತ್ರ ಕೆಲಸ ಮಾಡಿರುವ ಉದಾಹರಣೆಗಳಿವೆ. ಆದರೆ, ಈಗ ಅದಿರು ನಿರಂತರ ಕೆಲಸ ನಡೆಯುವಂತಾಗಿದೆ ಎಂದು ವಿವರಿಸಿದ್ದಾರೆ.

 

click me!