
ಮಂಗಳೂರು(ಮಾ.16): ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ 2009ರ ಮಂಗಳೂರು ಪಬ್ ದಾಳಿಯ ಆರೋಪಿಗಳು ಖುಲಾಸೆಯಾಗೋದಕ್ಕೆ ಮಂಗಳೂರು ಪೊಲೀಸರ ಬೇಜವಾಬ್ದಾರಿಯೇ ಕಾರಣ ಅನ್ನೋ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.
ದುರಂತವನ್ನು ಇಡೀ ದೇಶವೇ ಕಣ್ಣಿಟ್ಟು ನೋಡಿದ್ದ, ಮಾಧ್ಯಮಗಳಲ್ಲಿ ವಾರ ಪೂರ್ತಿ ಪ್ರಸಾರವಾಗಿದ್ದ ಪಬ್ ದಾಳಿಯ ಪ್ರತ್ಯಕ್ಷ ದೃಶ್ಯಾವಳಿಗಳನ್ನ ಮಂಗಳೂರು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿಯೇ ಇಲ್ಲ ಅನ್ನೋದು ಕೋರ್ಟ್ ತೀರ್ಪಿನ ಪ್ರತಿಯಲ್ಲಿ ಬಹಿರಂಗವಾಗಿದೆ. ಮಂಗಳೂರು ನ್ಯಾಯಾಲಯ ನೀಡಿರೋ ಈ ಮಹತ್ವದ ತೀರ್ಪಿನ ಪ್ರತಿ ಸುವರ್ಣ ನ್ಯೂಸ್ ಗೆ ಲಭ್ಯವಾಗಿದ್ದು, ಇದರಲ್ಲಿ ಸಾಕ್ಷ್ಯ ಸಲ್ಲಿಸೋಕೆ ವಿಫಲವಾದ ಬಗ್ಗೆ ಉಲ್ಲೇಖ ಮಾಡಲಾಗಿದೆ.
ಅಮ್ನೇಷಿಯಾ ಪಬ್ ದಾಳಿಗೆ ಸಂಬಂಧಿಸಿದ ವಿಡಿಯೋ ತುಣುಕುಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸದೇ ಇದ್ದದ್ದು ಹಾಗೂ ಸಂತ್ರಸ್ತ ಮಹಿಳೆಯರನ್ನು ಸಾಕ್ಷಿಯನ್ನಾಗಿ ಹಾಜರು ಪಡಿಸದೇ ಇದ್ದದ್ದರಿಂದಾಗಿ ಪ್ರಕರಣ ಆರೋಪಿಗಳು ದೋಷಮುಕ್ತವಾಗಲು ಸಾಧ್ಯವಾಯಿತು ಎಂಬ ಅಂಶ ನ್ಯಾಯಾಲಯದ ಆದೇಶ ಪ್ರತಿಯಿಂದ ಸ್ಪಷ್ಟಗೊಂಡಿದೆ. ಪಬ್ ದಾಳಿ ಪ್ರಕರಣದಲ್ಲಿ ಆರೋಪ ಸಾಬೀತು ಪಡಿಸುವಲ್ಲಿ ಪ್ಯಾಸಿಕ್ಯೂಷನ್ ಹಾಗೂ ಪೊಲೀಸ್ ಇಲಾಖೆ ವಿಫಲಗೊಂಡಿರುವುದನ್ನು ಆದೇಶ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿರುವುದಕ್ಕೆ ವಿಡಿಯೋ ಹಾಗೂ ಪೋಟೋಗಳು ಪ್ರಮುಖ ಸಾಕ್ಷಿಯಾಗಿರುತ್ತೆ. ಆದರೆ ತನಿಖಾಧಿಕಾರಿಗಳು ನ್ಯಾಯಾಲಯದ ಮುಂದೆ ಯಾವುದೇ ಪೋಟೋ ಹಾಗೂ ವಿಡಿಯೋ ಹಾಜರು ಪಡಿಸಿಲ್ಲ. ಜೊತೆಗೆ ಸಂತ್ರಸ್ತ ಮಹಿಳೆಯರನ್ನು ಗುರುತಿಸಿ ಅವರನ್ನು ಸಾಕ್ಷಿಯಾಗಿ ಹೆಸರಿಸಿಲ್ಲ.
ಅಲ್ಲದೇ ಘಟನೆಗೆ ಸಂಬಂಧಿಸಿದಂತೆ ದೂರು ನೀಡಿದ್ದ ಪಬ್ ಗುತ್ತಿಗೆ ಪಡೆದಿದ್ದ ವ್ಯಕ್ತಿ ಡಾ. ರಾಜಶೇಖರ್, ಬಾರ್ ಮಾಲಿಕ ಸಂತೋಷ್ ಹಾಗೂ ಸಿಬ್ಬಂದಿ ಸೇರಿದಂತೆ ಹಲವು ಸಾಕ್ಷಿಗಳು ವಿಚಾರಣೆಯ ವೇಳೆ ಪ್ರತಿಕೂಲ ಸಾಕ್ಷಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ಚಾರ್ಜ್'ಶೀಟ್'ನಲ್ಲಿ ಲಗತ್ತಿಸಿದ ಹೇಳಿಕೆಗಳನ್ನು ನಿರಾಕರಿಸಿದ್ದಾರೆ ಎಂದು ಆದೇಶ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ. ಇವೆಲ್ಲವೂ ಪ್ರಕರಣದಲ್ಲಿ ಆರೋಪಿಗಳು ದೋಷಮುಕ್ತರಾಗಲು ಸಾಧ್ಯವಾಯಿತು ಎಂದು ನ್ಯಾಯಾಲಯದ ಆದೇಶದ ಪ್ರತಿಯಿಂದ ಸ್ಪಷ್ಟಗೊಳಿಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.