ಈಗಾಗಲೇ ರಾಮನಗರ ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದೆ ಸರಿದು ಬಿಜೆಪಿ ಶಾಕ್ ನೀಡಿದ್ದಾರೆ. ಇದೇ ವೇಳೆ ಮಂಡ್ಯ ಬಿಜೆಪಿ ಅಭ್ಯರ್ಥಿ ನಿವೃತ್ತರಾಗಿದ್ದಾರೆ ಎಂದು ಬೇಳೂರು ಗೋಪಾಲಕೃಷ್ಣ ಹೇಳಿದ್ದು ಅವರ ವಿರುದ್ಧ ದೂರು ನೀಡುವುದಾಗಿ ಹೇಳಿದ್ದಾರೆ.
ಮಂಡ್ಯ: ನಾನು ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿ ಇದ್ದರೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ನಾನು ನಿವೃತ್ತಿಯಾಗಿದ್ದೇನೆ ಎಂದು ನೀಡಿರುವ ಹೇಳಿಕೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ತಿಳಿಸಿದ್ದಾರೆ.
ಶುಕ್ರವಾರ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ನಾನು ರಾಜಕೀಯದಲ್ಲಿ ಇನ್ನೂ ಅಂಬೆಗಾಲು ಇಡುತ್ತಿದ್ದೇನೆ. ನನ್ನ ತೇಜೋವಧೆ ಮಾಡುವ ಕೆಲಸವನ್ನು ವಿರೋಧಿಗಳು ಮಾಡುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿ ಇದ್ದೇನೆ, ಇರುತ್ತೇನೆ. ಆದರೂ ಕೆಲವರು ನಾನು ನಿವೃತ್ತಿ ಹೊಂದಿದೆ ಎಂದು ಅಪಪ್ರಚಾರ ಮಾಡುತ್ತಿರುವುದು ನನ್ನಂತಹ ಸೂಕ್ಷ್ಮ ಮನಸ್ಸಿನ ವ್ಯಕ್ತಿಗೆ ಆಘಾತವಾಗಿದೆ ಎಂದು ತಿಳಿಸಿದರು.
ಈ ಬೇಳೂರು ಗೋಪಾಲಕೃಷ್ಣ ಯಾರು ಅಂತಾನೇ ಗೊತ್ತಿಲ್ಲ. ಹಿಂದೆ ಸೈಕಲ್ ಹೊಡೆದುಕೊಂಡು, ಟೋಪಿ ಹಾಕೊಂಡು ಬಂದಿದ್ದು ಕೇಳಿದ್ದೆ. ಬಿಜೆಪಿ, ಕೆಜೆಪಿ ಹೀಗೆ ಎಲ್ಲ ಪಕ್ಷದಲ್ಲಿ ಇದ್ದರು. ಈಗ ಯಾವ ಪಕ್ಷದಲ್ಲಿ ಇದ್ದಾರೆ ಗೊತ್ತಿಲ್ಲ. ಮಂಡ್ಯಕ್ಕೆ ಬಂದರೆ ನನ್ನ ಬಗ್ಗೆ ಅವರಿಗೆ ಗೊತ್ತಾಗುತ್ತದೆ ಎಂದು ವ್ಯಂಗ್ಯವಾಗಿ ಹೇಳಿದರು.
ನಾನು ಈಗಗಾಲೇ ಬೇಳೂರು ಗೋಪಾಲಕೃಷ್ಣ ಮೇಲೆ ದೂರು ಕೊಡಲು ನಿರ್ಧರಿಸಿದ್ದೇನೆ. ನಾನು ಕಣದಿಂದ ನಿವೃತ್ತಿ ಹೊಂದುತ್ತಿದ್ದೇನೆ ಎಂದು ಊಹಾಪೋಹ ಹಬ್ಬಿಸುತ್ತಿದ್ದಾರೆ. ಕಣದಲ್ಲಿ ಇದ್ದು ಸೋಲು, ಗೆಲುವು ಎದುರಿಸುವುದು ನನ್ನ ನಿಲುವು. ನನ್ನ ನಿರೀಕ್ಷೆಗೂ ಮೀರಿ ನನಗೆ ಜನ ಬೆಂಬಲ ಸಿಕ್ಕಿದೆ. ಚುನಾವಣಾ ಕಣದಿಂದ ನಿವೃತ್ತಿ ಎಂಬುದು ನನ್ನ ಡಿಕ್ಷನರಿಯಲ್ಲಿ ಇಲ್ಲ ಎಂದು ಹೇಳಿದರು.