ಭದ್ರತಾ ತಪಾಸಣೆ ನೆಪದಲ್ಲಿ ಕಳ್ಳತನ: ಪೊಲೀಸರ ಬಲೆಗೆ ‘ಕಮಿಷನರ್’

Published : Oct 20, 2017, 01:27 PM ISTUpdated : Apr 11, 2018, 12:56 PM IST
ಭದ್ರತಾ ತಪಾಸಣೆ ನೆಪದಲ್ಲಿ ಕಳ್ಳತನ: ಪೊಲೀಸರ ಬಲೆಗೆ ‘ಕಮಿಷನರ್’

ಸಾರಾಂಶ

ಜಸ್ಟ್ ಡಯಲ್ ಕಂಪನಿಯಲ್ಲಿ ಭದ್ರತಾ ತಪಾಸಣೆ ನೆಪ | ವಾಚ್, ಮೊಬೈಲ್‌ಗಳನ್ನು ಕದ್ದು ಪರಾರಿ | ನಿರುದ್ಯೋಗ ಸೃಷ್ಟಿಸಿದ ಕಳ್ಳತನದ ಅನಿವಾರ್ಯ | ಕಮಿಷನರ್ ಹೆಸರಲ್ಲೇ ಗುರುತಿನ ಚೀಟಿ ಬಳಸಿ ಕಳ್ಳತನ!

ಬೆಂಗಳೂರು: ಪೊಲೀಸ್ ಆಯುಕ್ತರ ಹೆಸರಿನಲ್ಲೇ ನಕಲಿ ಗುರುತಿನ ಚೀಟಿ ಸೃಷ್ಟಿಸಿ ಖಾಸಗಿ ಸಂಸ್ಥೆಗಳಿಗೆ ಭದ್ರತಾ ವ್ಯವಸ್ಥೆ ಪರಿಶೀಲನೆ ನೆಪದಲ್ಲಿ ನುಗ್ಗಿ ಕಳ್ಳತನ ಮಾಡುತ್ತಿದ್ದ ಎಂಬಿಎ ಪದವೀಧರ ಸೇರಿ ಇಬ್ಬರು ಕೋರಮಂಗಲ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬಿಟಿಎಂ ಲೇಔಟ್ 1ನೇ ಹಂತದ ಇರ್ಫಾನ್ ಪಾಷಾ ಹಾಗೂ ಕೋಲಾರದ ಅರ್ಬಾಜ್ ಖಾನ್ ಬಂಧಿತರು. ಆರೋಪಿಗಳಿಂದ ₹3 ಲಕ್ಷ ಮೌಲ್ಯದ 5 ಮೊಬೈಲ್‌ಗಳು ಹಾಗೂ ನಕಲಿ ಗುರುತಿನ ಚೀಟಿಗಳನ್ನು ಜಪ್ತಿ ಮಾಡಲಾಗಿದೆ. ಕೋರಮಂಗಲದ ಕೈಗಾರಿಕಾ ಪ್ರದೇಶದ ಜಸ್ಟ್ ಡಯಲ್ ಕಂಪನಿಗೆ ರಾತ್ರಿ ವೇಳೆ ಭದ್ರತಾ ತಪಾಸಣೆ ನೆಪದಲ್ಲಿ ತೆರಳಿದ್ದ ಕಿಡಿಗೇಡಿಗಳು, ಆ ಕಂಪನಿಯಲ್ಲಿ ಮೊಬೈಲ್ ಹಾಗೂ ಕೈ ಗಡಿಯಾರ ಕಳವು ಮಾಡಿದ್ದರು.

ಈ ಕೃತ್ಯದ ತನಿಖೆಗಿಳಿದ ಪೊಲೀಸರು, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯಾವಳಿ ಆಧರಿಸಿ ಚಾಲಾಕಿಗಳನ್ನು ಸೆರೆ ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.

ಹೊಸೂರು ರಸ್ತೆಯ ಖಾಸಗಿ ಕಾಲೇಜಿನಲ್ಲಿ ಎಂಬಿಎಂ ಸ್ನಾತಕೋತ್ತರ ಪದವಿ ಪಡೆದ ಇರ್ಫಾನ್, ನಂತರ ಪದವೀಧರರಿಗೆ ಉದ್ಯೋಗಾವಕಾಶದ ಕುರಿತು ಮಾರ್ಗದರ್ಶನ ನೀಡುವ ಸಂಸ್ಥೆಯನ್ನು ಪ್ರಾರಂಭಿಸಿದ್ದ. ಆಗ ಅವನಿಗೆ ಚಾರ್ಟೆಡ್ ಅಕೌಂಟೆಂಟ್ ವಿದ್ಯಾರ್ಥಿ ಅರ್ಬಾಜ್ ಸಹಾಯಕನಾಗಿದ್ದ. ಆದರೆ ನಿರೀಕ್ಷಿತ ಲಾಭ ಕಾಣದೆ ಆರ್ಥಿಕವಾಗಿ ನಷ್ಟ ಅನುಭವಿಸಿದ ಆರೋಪಿಗಳು, ಹಣ ಸಂಪಾದನೆಗೆ ನಕಲಿ ಕಮೀಷನರ್ ಹೆಸರಿನಲ್ಲಿ ಕಳ್ಳತನಕ್ಕೆ ಇಳಿದಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಕೋರಮಂಗಲ ಕೈಗಾರಿಕಾ ಪ್ರದೇಶದಲ್ಲಿ ಜಸ್ಟ್ ಡಯಲ್ ಕಂಪನಿಗೆ ಸೆ.16ರ ನಸುಕಿನ 2.30ರ ಸುಮಾರಿಗೆ ಪೊಲೀಸ್ ಸಮವಸ್ತ್ರದಲ್ಲಿ ಅಲ್ಲಿಗೆ ಹೋಗಿದ್ದ ಆರೋಪಿಗಳು, ನಾವು ಪೊಲೀಸ್ ಕಮಿಷನರ್, ನಿಮ್ಮ ಕಂಪನಿಯಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲಿಸಬೇಕು ಎಂದು ಸೆಕ್ಯೂರಿಟಿ ಗಾರ್ಡ್‌ಗೆ ತಿಳಿಸಿದ್ದರು.

ಈ ಮಾತನ್ನು ನಂಬಿದ ಸೆಕ್ಯುರಿಟಿ ಗಾರ್ಡ್, ಕಂಪನಿಯ ಕೀಗಳನ್ನು ಅವರಿಗೆ ಕೊಟ್ಟಿದ್ದ. ಆನಂತರ ಒಳ ಹೋಗಿ ಕೈಗಡಿಯಾರ ಹಾಗೂ ಐದು ಮೊಬೈಲ್‌ಗಳನ್ನು ದೋಚಿದ ಆರೋಪಿಗಳು, ಪರಿಶೀಲನೆ ಮುಗಿಯಿತು. ನಾವಿನ್ನು ಹೊರಡುತ್ತೇವೆ ಎಂದು ಹೇಳಿ ಕೀ ಕೊಟ್ಟು ಹೊರಟು ಹೋಗಿದ್ದರು.

ಈ ನಡೆ ಬಗ್ಗೆ ಶಂಕೆಗೊಂಡ ಕಾವಲುಗಾರ, ಕಂಪನಿ ಪ್ರಧಾನ ವ್ಯವಸ್ಥಾಪಕ ಎಂ.ನೂರುದ್ದೀನ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ತಕ್ಷಣ ಅವರು ಕಂಪನಿಗೆ ಬಂದು ಪರಿಶೀಲಿಸಿದಾಗ ಕಳ್ಳತನ ಸಂಗತಿ ಬೆಳಕಿಗೆ ಬಂದಿತು. ನಂತರ ಕೋರಮಂಗಲ ಠಾಣೆಗೆ ಅವರು ದೂರು ಕೊಟ್ಟಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಸರ್ಕಾರದ ಲೋಗೋ ಬಳಕೆ

ಕರ್ನಾಟಕ ಸರ್ಕಾರ ಎಂಬ ಲೋಗೋ ಬಳಸಿ ನಕಲಿ ಗುರುತಿನ ಚೀಟಿ ಸೃಷ್ಟಿಸಿದ್ದ ಇರ್ಫಾನ್, ಅದರಲ್ಲಿ ತಾನು ಪೊಲೀಸ್ ಸಮವಸ್ತ್ರದಲ್ಲಿರುವ ಭಾವಚಿತ್ರ ಅಂಟಿಸಿದ್ದ. ‘ಕಮೀಷನರ್, ಅಪರ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ)’ ಎಂಬ ವಿವರಗಳನ್ನು ಕಾರ್ಡ್‌ನಲ್ಲಿ ಮುದ್ರಿಸಿದ್ದ. ಅಲ್ಲದೆ ವಿಧಾನಸೌಧದ ಮೊದಲನೇ ಮಹಡಿಯಲ್ಲಿ (ಕೊಠಡಿ ಸಂಖ್ಯೆ 101) ತನ್ನ ಕಚೇರಿ ಇದ್ದು, ತನ್ನ ಸಂಪರ್ಕಿಸುವ ದೂರವಾಣಿ ಸಂಖ್ಯೆಗಳು ಹಾಗೂ ಇಮೇಲ್ ವಿಳಾಸವನ್ನು ಸಹ ಕಾರ್ಡ್‌ನಲ್ಲಿ ವಿವರಿಸಿದ್ದ!

ಸೆರೆ ಆಗಿದ್ದು ಹೇಗೆ?

ಜಸ್ಟ್ ಡಯಲ್ ಕಂಪನಿ ಕಳ್ಳತನ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ತಿಂಗಳ ಹಿಂದೆ ಸಹ ಬನ್ನೇರುಘಟ್ಟ ರಸ್ತೆಯ ‘ಆಡಿ’ ಕಾರು ಶೋ ರೂಂನಲ್ಲೂ ಇದೇ ರೀತಿ ಮತ್ತೊಂದು ಕಳ್ಳತನ ನಡೆದಿರುವ ಮಾಹಿತಿ ಸಿಕ್ಕಿತು. ಕೂಡಲೇ ಜಾಗೃತರಾದ ಪೊಲೀಸರು, ಆ 2 ಕಂಪನಿಗಳ ಕಳ್ಳತನ ಕುರಿತು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಆಗ ಎರಡು ಕೃತ್ಯದಲ್ಲೂ ಒಂದೇ ತಂಡ ಎಸಗಿದೆ ಎಂಬುದು ಖಚಿತವಾಯಿತು. ಕ್ಯಾಮರಾದಲ್ಲಿ ಪತ್ತೆಯಾದ ಇರ್ಫಾನ್ ಚಹರೆ ಮುದ್ರಿಸಿ ನಗರದ ವಿವಿಧೆಡೆ ಹಂಚಿದೆವು. ಆಗ ಆತನ ಕಂಪನಿಯಿಂದ ವಂಚನೆಗೊಳಗಾಗಿದ್ದ ವ್ಯಕ್ತಿಯೊಬ್ಬರು, ಆತನ ಕುರಿತು ಸುಳಿವು ನೀಡಿದರು. ಆ ಮಾಹಿತಿ ಮೇರೆಗೆ ಆರೋಪಿ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಹೊರಬಂತು ಎಂದು ಅಧಿಕಾರಿಗಳು ಹೇಳಿದ್ದಾರೆ.

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಂದಿನ 72 ಗಂಟೆಯಲ್ಲಿ ಭೂಮಿಯತ್ತ 10 ಕ್ಷುದ್ರ ಗ್ರಹ, ಡೇಂಜರ್ ಝೋನ್‌ನಲ್ಲಿದೆಯಾ ಜಗತ್ತು?
ಆರ್‌ಒ ಪ್ಲ್ಯಾಂಟ್‌ಗಳ ನಿರ್ವಹಣೆಯೇ ಸರ್ಕಾರಕ್ಕೆ ಸವಾಲು: ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದೇನು?