
ಬೆಂಗಳೂರು : ನನ್ನ ಜೀವನ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಮಾಡದಿದ್ದರೆ ನನ್ನ ಜತೆ ಇರುವ ಫೋಟೋವನ್ನು ನಿನ್ನ ಪತ್ನಿಗೆ ಕೊಡುವುದಾಗಿ ಬೆದರಿಕೆ ಹಾಕಿದ್ದ ತನ್ನ ಲವರ್ ಅನ್ನು ಒಂದು ತಿಂಗಳ ಹಿಂದೆ ಕೊಂದು ಸಕಲೇಶಪುರ ಅರಣ್ಯ ಪ್ರದೇಶದಲ್ಲಿ ಎಸೆದಿದ್ದ, ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕೆ.ಜಿ.ಹಳ್ಳಿ ನಿವಾಸಿ ಸುನೀತಾ (25) ಕೊಲೆಯಾದ ಮಹಿಳೆ. ಪಾದರಾಯನಪುರ ನಿವಾಸಿ ಡೇವಿಡ್ ಕುಮಾರ್ (28) ಬಂಧಿತ ಆರೋಪಿ. ಮತ್ತೊಬ್ಬ ಆರೋಪಿ ಕಾರು ಚಾಲಕ ಶ್ರೀನಿವಾಸ್ ಅಲಿಯಾಸ್ ಸೀನು ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ.
ಆರೋಪಿ ಡೇವಿಡ್ ಕುಮಾರ್ ಮೂಲತಃ ತಮಿಳುನಾಡಿನವನಾಗಿದ್ದು, ಕಾರು ಮೆಕಾನಿಕ್ ಆಗಿದ್ದ. ಆರೋಪಿಗೆ ಐದು ವರ್ಷಗಳ ಹಿಂದೆ ಸುನೀತಾಳ ಪರಿಚಯವಾಗಿತ್ತು. ವಿವಾಹವಾಗದಿದ್ದರೂ ಇಬ್ಬರು ಜತೆಯಾಗಿಯೇ ಜೀವನ ನಡೆಸುತ್ತಿದ್ದರು. ಈ ನಡುವೆ ಎರಡು ವರ್ಷಗಳ ಹಿಂದೆ ಡೇವಿಡ್ ಬೇರೊಂದು ಯುವತಿ ಜತೆ ವಿವಾಹವಾಗಿದ್ದ. ಈ ವಿಷಯ ಸುನೀತಾಳಗೆ ತಿಳಿದು ಡೇವಿಡ್ ಜತೆ ಜಗಳ ಮಾಡಿದ್ದಳು. ಅಲ್ಲದೆ, ಏಳು ತಿಂಗಳ ಹಿಂದೆ ಸುನೀತಾಗೆ ಗಂಡು ಮಗು ಜನಿಸಿತ್ತು. ಈ ಮಗುವಿನ ತಂದೆ ನೀನೆ, ನಮ್ಮಿಬ್ಬರಿಗೆ ಬೇರೆ ಮನೆ ಮಾಡಿ ಕೊಡುವಂತೆ ಪದೇ ಪದೇ ಒತ್ತಾಯ ಮಾಡುತ್ತಿದ್ದಳು.
ನಮ್ಮನ್ನು ಚೆನ್ನಾಗಿ ನೋಡಿಕೊಳ್ಳದಿದ್ದರೆ, ನಾವಿಬ್ಬರು ಒಟ್ಟಿಗೆ ಇರುವ ಫೋಟೋವನ್ನು ನಿನ್ನ ಪತ್ನಿಗೆ ಕೊಡುವುದಾಗಿ ಸುನೀತಾ ಬೆದರಿಕೆ ಹಾಕುತ್ತಿದ್ದಳು. ಸುನೀತಾಳನ್ನು ಹಾಗೇ ಬಿಟ್ಟರೆ ನನ್ನ ಜೀವನ ಹಾಳು ಮಾಡುತ್ತಾಳೆ ಎಂದು ಆರೋಪಿ ಆಕೆಯ ಹತ್ಯೆ ಮಾಡಲು ನಿರ್ಧರಿಸಿದ್ದ. ಅದರಂತೆ ಮೇ 12ರಂದು ಸಂಜೆ ನಾಲ್ಕು ಗಂಟೆಗೆ ಸುನೀತಾಗೆ ನಿನ್ನ ಬಳಿ ಮಾತನಾಡಬೇಕಿದೆ ಎಂದು ಆಕೆಯನ್ನು ಸಿಲ್‌್ಕಬೋರ್ಡ್ ಬಳಿ ಆರೋಪಿ ಕರೆಸಿಕೊಂಡಿದ್ದ.
ಪತಿಯ ಸಂಬಂಧಿಕರು ತಮಿಳುನಾಡಿನಲ್ಲಿ ಮೃತಪಟ್ಟಿದ್ದು, ತಮಿಳುನಾಡಿಗೆ ಹೊರಟಿದ್ದೇನೆ ಎಂದು ಸುನೀತಾ ತಾಯಿಗೆ ಹೇಳಿ ಡೇವಿಡ್ ಬಳಿ ಏಳು ತಿಂಗಳ ಮಗುವಿನ ಜತೆ ಹೋಗಿದ್ದಳು. ನಂತರ ಸ್ನೇಹಿತ ಶ್ರೀನಿವಾಸ್‌ನ ಇಂಡಿಕಾ ಕಾರಿನಲ್ಲಿ ಆರೋಪಿ ಮಹಿಳೆಯನ್ನು ಸಕಲೇಶಪುರಕ್ಕೆ ಕರೆದೊಯ್ದಿದ್ದ. ಕಾರಿನಲ್ಲಿ ರಾತ್ರಿ 12.30ರ ಸುಮಾರಿಗೆ ಸುನೀತಾ ನಿದ್ರೆಗೆ ಜಾರಿದ್ದ ವೇಳೆ ಸಕಲೇಶಪುರದ ಟೌನ್ ಸಮೀಪ ಮಹಿಳೆಯ ಕುತ್ತಿಗೆಗೆ ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದ. ಹತ್ಯೆ ಮಾಡಿದ ಬಳಿಕ ಮಹಿಳೆಯ ಶವವನ್ನು ಆರೋಪಿಗಳು ಸಕಲೇಶಪುರದ ಘಾಟ್‌ನಲ್ಲಿ ಎಸೆದು ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಜಗಳ ಮಾಡಿಕೊಂಡು ಹೋದ್ಲು!
ಮರುದಿನ ಆರೋಪಿ ಡೇವಿಡ್ ಮಗುವನ್ನು ತಂದು ಸುನೀತಾ ತಾಯಿ ವಶಕ್ಕೆ ಒಪ್ಪಿಸಿದ್ದ. ಈ ವೇಳೆ ಆರೋಪಿ ‘ಸುನೀತಾ ನೆಲಮಂಗಲದ ಬಸ್ ನಿಲ್ದಾಣದ ಬಳಿ ನನ್ನ ಜತೆ ಜಗಳ ಮಾಡಿಕೊಂಡು ಮಂಗಳೂರಿನ ಬಸ್ ಹತ್ತಿ ಹೋದಳು’ ಎಂದು ತಿಳಿಸಿದ್ದ. ಈ ಬಗ್ಗೆ ಮಹಿಳೆಯ ತಾಯಿ ಮೇ 13ರಂದು ಕೆ.ಜಿ.ಹಳ್ಳಿ ಠಾಣೆಗೆ ಪುತ್ರಿಯ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಕೆ.ಜಿ.ಹಳ್ಳಿಯಲ್ಲಿ ಪೊಲೀಸರು ಸುನೀತಾ ಹುಡುಕಾಟದ ಬಗ್ಗೆ ಅಷ್ಟಾಗಿ ಲಕ್ಷ್ಯವಹಿಸುವುದಿಲ್ಲ. ಹೀಗಾಗಿ ಸುನೀತಾ ಕುಟುಂಬಸ್ಥರು ಸಿಸಿಬಿ ಪೊಲೀಸರ ಗಮನಕ್ಕೆ ತಂದಿದ್ದರು. ಡೇವಿಡ್‌ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.
ಸಕಲೇಶಪುರದ ಘಾಟ್‌ನಲ್ಲಿ ಅಪಚಿತ ಶವ ಪತ್ತೆಯಾಗಿರುವ ಸ್ಥಳೀಯರು ಮೇ 13 ರಂದು ಠಾಣೆಗೆ ದೂರು ನೀಡಿದ್ದರು. ಕೊಲೆ ಪ್ರಕರಣ ದಾಖಲಿಸಿಕೊಂಡು ಮಹಿಳೆಯ ಫೋಟೋವನ್ನು ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೂ ಕಳುಹಿಸಲಾಗಿತ್ತು. ಅಲ್ಲದೆ, ಆಕೆಯ ಕೈ ಮೇಲೆ ಯೇಸುದಾಸ್ ಎಂದು ಹೆಸರಿತ್ತು. ಈ ಬಗ್ಗೆಯೂ ಮಾಹಿತಿ ನೀಡಲಾಗಿತ್ತು. ಮೂರು ದಿನಗಳ ಬಳಿಕ ಶವವನ್ನು ಅಂತ್ಯ ಸಂಸ್ಕಾರ ಮಾಡಲಾಗಿತ್ತು. ಆರೋಪಿಯನ್ನು ಸಿಸಿಬಿ ಪೊಲೀಸರಿಂದ ತಮ್ಮ ವಶಕ್ಕೆ ಪಡೆಯಲಾಗಿದೆ ಎಂದು ಸಕಲೇಶಪುರದ ಠಾಣೆ ಪೊಲೀಸರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.