ಧರಂ ಸಿಂಗ್ ಸಿಎಂ ಸ್ಥಾನ ಕಳೆದುಕೊಳ್ಳಲು ನಾನೇ ಕಾರಣ : ಸಿಎಂ

By Web DeskFirst Published Jul 28, 2018, 10:37 AM IST
Highlights

ಧರ್ಮಸಿಂಗ್ ಅವರು ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಲು ತಾವೇ ಕಾರಣ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬಹಿರಂಗವಾಗಿ ಒಪ್ಪಿಕೊಂಡಿದ್ದರಿಂದ ಇಲ್ಲಿಯವರೆಗೆ ನನ್ನ ಮೇಲಿದ್ದ ಆರೋಪ ಖುಲಾಸೆಯಾಯಿತು ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. 

ಬೆಂಗಳೂರು : ದಿವಂಗತ ಧರ್ಮಸಿಂಗ್ ಅವರು 2004 ರಲ್ಲಿ ಮುಖ್ಯ ಮಂತ್ರಿ ಹುದ್ದೆಯಿಂದ ಕೆಳಗಿಳಿಯಲು ನಾನು ಮಾಡಿದ ತಪ್ಪೇ ಕಾರಣ. ಆದರೆ, ಅಂದಿನ ರಾಜಕೀಯ ದಲ್ಲಿ ಅನಿವಾರ್ಯವಾಗಿ ನಡೆದ ಘಟನೆ ಅದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಂದು ಹೇಳಿದ್ದಾರೆ.

ಶುಕ್ರವಾರ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ‘ಮಾಜಿ ಮುಖ್ಯಮಂತ್ರಿ ದಿವಂಗತ ಧರ್ಮಸಿಂಗ್ ಅವರ ಮೊದಲ ವರ್ಷದ ಪುಣ್ಯಸ್ಮರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ‘2004 ರ ಧರ್ಮಸಿಂಗ್ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್ ಪಕ್ಷದಿಂದ ಉಪ ಮುಖ್ಯಮಂತ್ರಿ ಯಾಗಿದ್ದರು. ಆ ಸರ್ಕಾರದಲ್ಲಿ ನಾನು ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾಗಿದ್ದೆ. ಅಂದಿನ ಸರ್ಕಾರ ಅವಧಿಗೂ ಮೊದಲೇ ಪತನಗೊಳ್ಳಲು, ಮುಖ್ಯಮಂತ್ರಿಯಾಗಿ  ಕಾರ್ಯ ನಿರ್ವಹಿಸುತ್ತಿದ್ದ ಧರ್ಮಸಿಂಗ್ ಸ್ಥಾನ ಕಳೆದುಕೊಳ್ಳಲು
ಎಲ್ಲೋ ಒಂದು ಕಡೆ ನನ್ನಿಂದಲೇ ತಪ್ಪಾಯಿತೇನೋ ಎಂಬ ಭಾವನೆ ನನಗಿದೆ ’ ಎಂದರು. 

‘ನಾನು ಸಿಎಂ ಆದ ಬಳಿಕ ಅವರ ಆಶೀರ್ವಾದ ಪಡೆಯಲು ಅವರ ಮನೆಗೆ ಹೋದೆ. ಆ ಸಂದರ್ಭದಲ್ಲಿ ಎಲ್ಲಿಯೂ ಅವರ ಮುಖದಲ್ಲಿ ಇವನಿಂದ ನನ್ನ ಅಧಿಕಾರ ಹೋಯಿತು ಎಂಬ ಭಾವನೆ ಕಾಣಲಿಲ್ಲ. ಅಲ್ಲದೆ, ನಾನು ಆಗಿನ ಅನಿವಾರ್ಯ ತೀರ್ಮಾನವನ್ನು ವಿವರಿಸಿ ಧರ್ಮಸಿಂಗ್ ಕ್ಷಮೆ ಕೇಳಿದೆ. ಅದಕ್ಕೆ ಅವರು, ಸ್ವಲ್ಪವೂ ಬೇಸರಗೊಳ್ಳದೆ ರಾಜಕಾರಣದಲ್ಲಿ ಇದೆಲ್ಲವೂ ಸಹಜ. ಇದೆಲ್ಲವನ್ನೂ ಮನಸ್ಸಿಗೆ ಹಚ್ಚಿಕೊಳ್ಳಬೇಡ,
ಒಳ್ಳೆಯ ಕೆಲಸ ಮಾಡು ಎಂದು ಹರಸಿದರು. ಅವರ ಹೃದಯ ವೈಶಾಲ್ಯತೆಯ ಕ್ಷಣವನ್ನು ಮರೆಯಲು ಎಂದಿಗೂ ಸಾಧ್ಯವಿಲ್ಲ’ ಎಂದು ಸ್ಮರಿಸಿದರು.

ಒಪ್ಪಿಕೊಂಡ ಸಿಎಂ

2004 ರಲ್ಲಿ ಧರ್ಮಸಿಂಗ್ ಅವರು ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಲು ತಾವೇ ಕಾರಣ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬಹಿರಂಗವಾಗಿ ಒಪ್ಪಿಕೊಂಡಿದ್ದರಿಂದ ಇಲ್ಲಿಯವರೆಗೆ ನನ್ನ ಮೇಲಿದ್ದ ಆರೋಪ ಖುಲಾಸೆಯಾಯಿತು ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಇದೇ ವೇಳೆ ಹೇಳಿದರು.

‘ಅಂದು ಧರ್ಮಸಿಂಗ್ ಸರ್ಕಾರ ಪತನಕ್ಕೆ ನಾನು ಮತ್ತು ಎಸ್.ಎಂ. ಕೃಷ್ಣ ಅವರು ಕಾರಣ ಎಂಬ ಆಪಾದನೆ ಇಲ್ಲಿಯವರೆಗೆ ಇತ್ತು. ಏಕೆಂದರೆ ಸಮ್ಮಿಶ್ರ ಸರ್ಕಾರ ಮುಂದುವರೆಯದಂತೆ ನಾವಿಬ್ಬರೂ ರಾಜಕೀಯ ಮಾಡುತ್ತಿದ್ದೇವೆ ಎಂದು ವರದಿಯಾಗಿತ್ತು. ಅಂದಿನ ಆರೋಪ ಇಂದು ಖುಲಾಸೆಯಾದಂತಾಯಿತು’ ಎಂದರು. 

click me!