ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು (ಮಂಗಳವಾರ) ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿ, ಹಲವು ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಸಭೆಯಲ್ಲಿ ಕೈಗೊಂಡ ಕೆಲ ತೀರ್ಮಾನಗಳು ಈ ಕೆಳಗಿನಂತಿವೆ.
ಮುಂಬೈ/ಬೆಂಗಳೂರು, (ಸೆ.03): ಕುಡಿಯುವ ನೀರನ್ನು ತರುವ ಭಾರ ನನ್ನ ಮೇಲಿದೆ. ಇದು ನನ್ನ ಜವಾಬ್ದಾರಿ. ಇಂದಿನಿಂದ ನೀರಿನ ಚಿಂತೆ ಬಿಟ್ಟುಬಿಡಿ ಎಂದು 2017 ಡಿಸೆಂಬರ್ ನಲ್ಲಿ ಮಹದಾಯಿ ಹೋರಾಟಗಾರರಿಗೆ ಯಡಿಯೂರಪ್ಪ ಭರವಸೆ ನೀಡಿದ್ದರು. ಆದ್ರೆ ಅದು ಭರವಸೆಯಾಗಿಯೇ ಉಳಿದಿತ್ತು.
ಇದೀಗ ಬಿಎಸ್‌ವೈ ಮುಖ್ಯಮಂತ್ರಿ ಕುರ್ಚಿ ಏರುತ್ತಿದ್ದಂತೆಯೇ ಅಂದು ಮಹದಾಯಿ ಹೋರಾಟಗಾರರಿಗೆ ಕೊಟ್ಟಿದ್ದ ಮಾತು ಉಳಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಇದಕ್ಕೆ ಪೂರಕವೆಂಬಂತೆ ಬಿಎಸ್‌ವೈ ಇಂದು (ಮಂಗಳವಾರ) ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡಿ ಮಹದಾಯಿ ಸೇರಿದಂತೆ ರಾಜ್ಯಕ್ಕೆ ಸಂಬಂಧಿಸಿದ ಕೆಲ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ.
ಉಭಯ ಸಿಎಂಗಳ ಸಭೆಯಲ್ಲಿ ಕೈಗೊಂಡ ನಿರ್ಧಾರಗಳು
* ಮಹದಾಯಿ ನದಿ ವಿವಾದ ನ್ಯಾಯಾಧಿಕರಣ ನೀರು ಹಂಚಿಕೆ ಮಾಡಿ ನೀಡಿರುವ ಆದೇಶವನ್ನು ಗೆಜೆಟ್ ಅಧಿಸೂಚನೆ ಹೊರಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಮುಖ್ಯಮಂತ್ರಿ ಗಳ ಸಭೆ ನಡೆಸಿ ಸಮಸ್ಯೆ ಬಗೆ ಹರಿಸಿ ಶೀಘ್ರವೇ ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
* ಕೃ ಷ್ಣಾ ನ್ಯಾಯಾಧಿಕರಣದ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳು ಸುಪ್ರೀಂ ಕೋರ್ಟ್‌ನಲ್ಲಿ ಜಂಟಿಯಾಗಿ ಅಫಿಡವಿಟ್ ಸಲ್ಲಿಸಿ ನೀರು ಹಂಚಿಕೆ ಆದೇಶವನ್ನು ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ನಿರ್ಧರಿಸಲಾಯಿತು.
* ಉತ್ತರ ಕರ್ನಾಟಕದ ಪ್ರವಾಹ ಪರಿಸ್ಥಿತಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಗಾರು ಪ್ರಾರಂಭವಾದ ಕೂಡಲೇ ಕೊಯ್ನಾ ಜಲಾಶಯದಿಂದ ಹಂತ ಹಂತವಾಗಿ ನೀರು ಬಿಡುವಂತೆ ಹಾಗು ಈ ಪ್ರಕ್ರಿಯೆಯ ಮೇಲ್ವಿಚಾರಣೆಗೆ ಉನ್ನತ ಮಟ್ಟದ ಸಮನ್ವಯ ಸಮಿತಿಯನ್ನು ರಚಿಸಲು ಉಭಯ ಸಿಎಂಗಳ ಸಭೆಯಲ್ಲಿ ತೀರ್ಮಾನವಾಗಿದೆ.
* ಮುಂಬಯಿ ಬೆಂಗಳೂರು ಕೈಗಾರಿಕಾ ಕಾರಿಡಾರ್ ರಚನೆಗೆ ಈಗಾಗಲೇ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಯೋಜನೆಗೆ ಚಾಲನೆ ನೀಡುವ ಬಗ್ಗೆ ಉಭಯ ಸರ್ಕಾರಗಳು ಜಂಟಿಯಾಗಿ ಮನವಿ ಸಲ್ಲಿಸಲು ನಿರ್ಧಾರಿಸಿವೆ.
* ಕಳೆದ ಆಗಸ್ಟ್ ನಲ್ಲಿ ಮಹಾರಾಷ್ಟ್ರ ಹಾಗು ಕರ್ನಾಟಕದಲ್ಲಿ ಸಂಭವಿಸಿದ ಪ್ರವಾಹ ಪರಿಸ್ಥಿತಿಯ ನಿರ್ವಹಣೆ ಹಾಗು ಪರಿಹಾರ ಕಾರ್ಯಗಳಿಗೆ ಕೇಂದ್ರ ಸರ್ಕಾರದಿಂದ ಹೆಚ್ಚುವರಿ ಅನುದಾನ ಒದಗಿಸುವಂತೆ ಎರಡು ರಾಜ್ಯಗಳಿಂದ ಜಂಟಿಯಾಗಿ ಮನವಿ ಸಲ್ಲಿಸಲು ತೀರ್ಮಾನ ಮಾಡಲಾಯಿತು.
ಈ ನಿಟ್ಟಿನಲ್ಲಿ ಕರ್ನಾಟಕ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿ ಸಮಸ್ಯೆ ಬಗೆ ಹರಿಸಿ ಶೀಘ್ರವೇ ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ನಿರ್ದರಿಸಲಾಯಿತು.https://t.co/iWDgv2HM9Z
— CM of Karnataka (@CMofKarnataka)ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವಥ್ ನಾರಾಯಣ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಾಗು ಮಹಾರಾಷ್ಟ್ರ ಸಚಿವರು ಉಪಸ್ಥಿತರಿದ್ದರು.