ಮಧ್ಯಪ್ರದೇಶ ಸರ್ಕಾರದ ಉಚಿತ ಪಾದರಕ್ಷೆಯಲ್ಲಿ ಕ್ಯಾನ್ಸರ್‌ ಅಂಶ!

By Web DeskFirst Published Aug 29, 2018, 8:03 AM IST
Highlights

ಮಧ್ಯಪ್ರದೇಶ ಸರ್ಕಾರದ ಉಚಿತ ಪಾದರಕ್ಷೆಯಲ್ಲಿ ಕ್ಯಾನ್ಸರ್‌ ಅಂಶ | 2 ಲಕ್ಷ ಶೂ ತಿರಸ್ಕರಿಸಿದ ಬಡವರು |ಯೋಜನೆಯೇ ಸ್ಥಗಿತ|

ಭೋಪಾಲ್‌ (ಆ. 29): ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ಮಧ್ಯಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಬಡವರಿಗೆ ಉಚಿತ ಶೂ ನೀಡುವ ಯೋಜನೆ ತೀವ್ರ ವಿವಾದಕ್ಕೀಡಾಗಿದೆ.

ಸರ್ಕಾರ ನೀಡುತ್ತಿರುವ ಶೂಗಳಲ್ಲಿ ಕ್ಯಾನ್ಸರ್‌ಕಾರಕ ರಾಸಾಯನಿಕ ಅಂಶವಿದೆ ಎಂದು ಸಂಶೋಧನಾ ಸಂಸ್ಥೆಯೊಂದು ಎಚ್ಚರಿಸಿದ ಹಿನ್ನೆಲೆಯಲ್ಲಿ ಬಡವರು ಸುಮಾರು 2 ಲಕ್ಷ ಪಾದರಕ್ಷೆಗಳನ್ನು ತಿರಸ್ಕರಿಸಿದ್ದಾರೆ. ಸರ್ಕಾರ ಕೂಡ ಯೋಜನೆಯನ್ನು ಸ್ಥಗಿತಗೊಳಿಸಿದೆ. ಇದರಿಂದಾಗಿ ಬಿಜೆಪಿ ಸರ್ಕಾರಕ್ಕೆ ಮುಜುಗರ ಉಂಟಾಗಿದೆ.

ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಡವರನ್ನು ಗುರಿಯಾಗಿಸಿಕೊಂಡು ‘ಚರಣ ಪಾದುಕಾ ಯೋಜನೆ’ಯನ್ನು ಶಿವರಾಜಸಿಂಗ್‌ ಚೌಹಾಣ್‌ ನೇತೃತ್ವದ ಸರ್ಕಾರ ಜಾರಿಗೆ ತಂದಿತ್ತು. ತೆಂಡು ಎಲೆ (ಬೀಡಿ ತಯಾರಿಗೆ ಬಳಸುವ ಎಲೆ) ಸಂಗ್ರಹಿಸುವ ಬಡವರಿಗೆ ಉಚಿತವಾಗಿ ಶೂ ಹಂಚುವ ಯೋಜನೆ ಇದಾಗಿತ್ತು. ಆದರೆ ಈ ಸರ್ಕಾರ ವಿತರಿಸುತ್ತಿರುವ ಶೂಗಳಲ್ಲಿ ಕ್ಯಾನ್ಸರ್‌ಕಾರಕ ಅಜೋ ಡೈ ಇದೆ ಎಂದು ಕೇಂದ್ರೀಯ ಚರ್ಮ ಸಂಶೋಧನಾ ಸಂಸ್ಥೆ ಎಚ್ಚರಿಸಿತ್ತು.

ಇಂತಹ ಶೂ ಧರಿಸುವುದರಿಂದ ಚರ್ಮ ಕ್ಯಾನ್ಸರ್‌ ಕಾಣಿಸಿಕೊಳ್ಳುವ ಸಾಧ್ಯತೆ ಜತೆಗೆ ಮಕ್ಕಳ ಜನನಕ್ಕೂ ಸಮಸ್ಯೆಯಾಗುತ್ತದೆ ಎಂದು ಪರಿಸರ ತಜ್ಞರು ತಿಳಿಸಿದರು. ಇದು ರಾಜಕೀಯ ತಿರುವು ಪಡೆದುಕೊಂಡಿತು. ಜತೆಗೆ ಬಡವರು ಕೂಡ ಶೂಗಳನ್ನು ಧರಿಸುವುದನ್ನು ನಿಲ್ಲಿಸಿದರು. ಈಗ ಸರ್ಕಾರ ಯೋಜನೆಯನ್ನೇ ಸ್ಥಗಿತಗೊಳಿಸಿದೆ.

ಕ್ಯಾನ್ಸರ್‌ಕಾರಕ ಶೂ ಹಂಚಿದ ಮುಖ್ಯಮಂತ್ರಿಗಳು, ಆ ಶೂಗಳನ್ನು ಮೊದಲು ತಾವೇ ಬಳಸಬೇಕಿತ್ತು ಎಂದು ಕಿಡಿಕಾರಿರುವ ಕಾಂಗ್ರೆಸ್‌, ಸರ್ಕಾರದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಹೇಳಿದೆ.

click me!