
ಭುವನೇಶ್ವರ[ಮಾ.06]: ಭಾರತದಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಸಿದ್ಧತೆಗಳು ಆರಂಭವಾಗಿವೆ. ನಾಯಕರು ಕೂಡಾ ಟಿಕೆಟ್ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಆದರೆ ಇಲ್ಲೊಬ್ಬ ವ್ಯಕ್ತಿ 1957ರಿಂದ ಸತತವಾಗಿ ಎಲ್ಲಾ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. 62 ವರ್ಷಗಳಿಂದ ಸ್ಪರ್ಧಿಸುತ್ತಿರುವ ಇವರು ಬರೋಬ್ಬರಿ 23 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ಆದರೆ ದುರಾದೃಷ್ಟವಶಾತ್ ಎಲ್ಲಾ ಚುನಾವಣೆಗಳಲ್ಲೂ ಸೋಲುತ್ತಾ ಬಂದಿದ್ದಾರೆ. ಅಷ್ಟಕ್ಕೂ ಆ ವ್ಯಕ್ತಿ ಯಾರು? ಇಲ್ಲಿದೆ ನೋಡಿ ವಿವರ.
84 ವರ್ಷದ ಶಾಮ್ ಬಾಬು ಸುಬುಧಿ ಈವರೆಗೆ ಸ್ಪರ್ಧಿಸಿರುವ ಎಲ್ಲಾ ಚುನಾವಣೆಗಳಲ್ಲಿ ಸೋಲುಂಡಿದ್ದರೂ, ಒಂದಲ್ಲ ಒಂದು ದಿನ ತಾನು ಗೆದ್ದೇ ಗೆಲ್ಲುತ್ತೇನೆಂಬ ವಿಶ್ವಾಸ ಹೊಂದಿದ್ದಾರೆ. ಇದೇ ವಿಶ್ವಾಸದೊಂದಿಗೆ ಅವರು 2019ರ ಲೋಕಸಭಾ ಚುನಾವಣೆಯಲ್ಲೂ ಸ್ಪರ್ಧಿಸಲಿದ್ದಾರೆ. ಈ ಬಾರಿ ಅವರು ಒಡಿಶಾದ ಗಂಜಮ್ ಜಿಲ್ಲೆಯ ಎರಡು ಕ್ಷೇತ್ರಗಳಾದ ಅಸ್ಕಾ ಹಾಗೂ ಬರ್ಹಾಮ್ ಪುರ್ ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.
ಶಾಮ್ ಬಾಬು 1957ರಲ್ಲಿ ಅಂದಿನ ಮಂತ್ರಿಯಾಗಿದ್ದ ವೃಂದಾವನ್ ನಾಯಕ್ ವಿರುದ್ಧ ಮೊದಲ ಬಾರಿ ಕಣಕ್ಕಿಳಿದಿದ್ದರು. ಬರ್ಹಮ್ ಪುರದಲ್ಲಿ ಶಾಲೆಯೊಂದಕ್ಕೆ ಸಂಬಂಧಿಸಿದಂತೆ ಅಸಮಾಧಾನಗೊಂಡಿದ್ದ ಶಾಮ್ ಬಾಬು ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದರು. ಬಿಬಿಸಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು 'ನಾನು ಹಿಂಜಿಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದೆ' ಎಂದಿದ್ದಾರೆ. ಶಾಮ್ ಬಾಬು ಈವರೆಗೆ ಸೋತಿದ್ದರೂ, ಅವರ ಸ್ಟೈಲ್ ಮಾತ್ರ ಬಹಳ ಫೇಮಸ್ ಆಗಿದೆ. ಅವರು ಯಾವತ್ತೂ ತಲೆಗೊಂದು ಕ್ಯಾಪ್, ಹೆಗಲ ಮೇಲೊಂದು ಕಪ್ಪು ಬ್ಯಾಗ್ ಹಾಗೂ ಸೂಟ್ ಧರಿಸಿಕೊಂಡಿರುತ್ತಾರೆ. ಅದೆಷ್ಟೇ ಸೆಕೆ ಇದ್ದರೂ ಸೂಟ್ ಮಾತ್ರ ತಪ್ಪುವುದಿಲ್ಲ.
ಇದಾದ ಬಳಿಕ 1962ರಲ್ಲಿ ಶಾಮ್ ಬಾಬು ಮೊದಲ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. 'ನಾನು ಸೋಲು ಅಥವಾ ಗೆಲುವಿಗಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವುದು ನನ್ನಲ್ಲಿರುವ ಉತ್ಸಾಹದ ಪ್ರತೀಕವಾಗಿದೆ'. ವೃತ್ತಿಯಲ್ಲಿ ಹೋಮಿಯೋಪತಿ ಡಾಕ್ಟರ್ ಆಗಿರುವ ಶಾಮ್ ಬಾಬು ಚುನಾವಣೆ ಬಂದಾಗ ಪ್ರಚಾರಕ್ಕಾಗಿ ತಾನು ಸಂಪಾದಿಸಿದ ಹಣವನ್ನೆಲ್ಲಾ ಖರ್ಚು ಮಾಡುತ್ತಾರೆ. ಪ್ರಚಾರಕ್ಕಾಗಿ ಭಿತ್ತಿಪತ್ರಗಳನ್ನು ಮಾಡಿ ತಾವೇ ಮನೆ ಮನೆಗೆ ತೆರಳಿ ಹಂಚುತ್ತಾರೆ.
1996ರಲ್ಲಿ ಶಾಮ್ ಬಾಬು ತಮ್ಮ ಜೀವನದ ಅತ್ಯಂತ ಪ್ರಮುಖ ಚುನಾವಣೆಯನ್ನು ಎದುರಿಸಿದ್ದರು. ಅಂದು ಬರ್ರಮ್ ಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಅವರ ಎದುರಾಳಿಯಾಗಿ ಮಾಜಿ ದಿವಂಗತ ಪ್ರಧಾನಿ ಪಿ. ವಿ ನರಸಿಂಹರಾವ್ ಸ್ಪರ್ಧಿಸಿದ್ದರು. ಆದರೆ ನಿರೀಕ್ಷೆಯಂತೆ ಸೋಲನುಭವಿಸಿದ್ದರು. ಇಷ್ಟೇ ಅಲ್ಲದೆ ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಹಾಗೂ ಜೆ. ಬಿ ಪಟ್ನಾಯಕ್ ವಿರುದ್ಧವೂ ಕಣಕ್ಕಿಳಿದು ಸೋಲುಂಡಿದ್ದಾರೆ.
'ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುತ್ತೇನೆ' ಎನ್ನುವ ಶಾಮ್ ಬಾಬು ಜೀವನ ಪಯಣದ 84 ವಸಂತಗಳನ್ನು ನೋಡಿದ್ದಾಋಎ ಹಾಘೂ ಈ ಬಾರಿಯೂ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. 2018ರಲ್ಲಿ ಶಾಮ್ ಬಾಬು ಪತ್ನಿ ನಿಧನರಾಗಿದ್ದಾರೆ. ಇವರ ನಾಲ್ವರು ಮಕ್ಕಳಿಗೆ ಮದುವೆಯಾಗಿದೆ. ಅತ್ಯಂತ ಉತ್ಸಾಹದಿಂದ ಚುನಾವಣೆಗಳಲ್ಲಿ ಸ್ಪರ್ಧಿಸುವ ಇವರಿಗೆ ಪ್ರಜಾಪ್ರಭುತ್ವದ ಮೇಲೆ ಅತಿ ಹೆಚ್ಚು ವಿಶ್ವಾಸ ಹೊಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.