
ಬೆಂಗಳೂರು : ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಮೂರು ಲೋಕಸಭಾ ಕ್ಷೇತ್ರಗಳ ವಿದ್ಯುನ್ಮಾನ ಮತಯಂತ್ರ, ವಿ.ವಿ. ಪ್ಯಾಟ್ ಸಂಗ್ರಹಿಸಿಟ್ಟಿರುವ ಸ್ಟ್ರಾಂಗ್ ರೂಂ ಭದ್ರತೆ ಹಾಗೂ ಮತ ಎಣಿಕೆ ಕೇಂದ್ರಗಳ ಸಿದ್ಧತೆ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ನಗರ ಪೊಲೀಸ್ ಆಯುಕ್ತರು ಶನಿವಾರ ಜಂಟಿ ಪರಿಶೀಲನೆ ನಡೆಸಿದ್ದು, ಮತ ಎಣಿಕೆ ವೇಳೆ ಯಾವುದೇ ಗೊಂದಲ ಉಂಟಾಗದಂತೆ ಕಟ್ಟುನಿಟ್ಟಿನ ಕ್ರಮ ವಹಿಸಿರುವುದಾಗಿ ತಿಳಿಸಿದ್ದಾರೆ.
ಬೆಂಗಳೂರು ಕೇಂದ್ರಲೋಕಸಭಾ ಕ್ಷೇತ್ರದ ವಿದ್ಯುನ್ಮಾನ ಮತಯಂತ್ರ ಸಂಗ್ರಹಿಸಿರುವ ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜಿನ ಭದ್ರತಾ ಕೊಠಡಿ (ಸ್ಟ್ರಾಂಗ್ ರೂಂ), ಬೆಂಗಳೂರು ಉತ್ತರ ಕ್ಷೇತ್ರದ ಇವಿಎಂ ಶೇಖರಿಸಿರುವ ಮಲ್ಯ ಆಸ್ಪತ್ರೆ ರಸ್ತೆಯ ಸೆಂಟ್‌ಜೋಸಫ್ ಪ್ರೌಢಶಾಲೆ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಇವಿಎಂ ಯಂತ್ರಗಳನ್ನು ಹೊಂದಿರುವ ಜಯನಗರದ ಎಸ್‌ಎಸ್‌ಎಂಆರ್‌ವಿ ಕಾಲೇಜಿನ ಸ್ಟ್ರಾಂಗ್ ರೂಂ ಭದ್ರತೆಯನ್ನು ನಗರ ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ಹಾಗೂ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಪರಿಶೀಲನೆ ನಡೆಸಿದರು.
ಇದೇ ವೇಳೆ ಮೇ 23ರಂದು ಇದೇ ಕಾಲೇಜುಗಳಲ್ಲಿ ನಡೆಯುವ ಮತ ಎಣಿಕೆ ಸಿದ್ಧತೆ ಕುರಿತು ಪರಿಶೀಲಿಸಿದರು.
2 ಹಂತದ ತರಬೇತಿ: ಈ ವೇಳೆ ಮಾತನಾಡಿದ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್, ಮೇ 23ರಂದು ನಗರದ ಮೂರು ಕೇಂದ್ರದಲ್ಲಿ ಮತ ಎಣಿಕೆ ನಡೆಯಲಿದ್ದು, ಆಯಾ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರದ ಮತಯಂತ್ರಗಳನ್ನು ಸಂಬಂಧಪಟ್ಟಕೇಂದ್ರದಲ್ಲಿ ಎಣಿಕೆ ಮಾಡಲಾಗುವುದು. ಮತ ಎಣಿಕೆ ಕಾರ್ಯಕ್ಕಾಗಿ 1,080 ಅಧಿಕಾರಿಗಳ ಅಗತ್ಯವಿದ್ದು, ಹೆಚ್ಚುವರಿಯಾಗಿ ಶೇ.30 ರಷ್ಟು(325) ಸಿಬ್ಬಂದಿ ಸೇರಿದಂತೆ 1,405 ಮಂದಿ ಅಧಿಕಾರಿಗಳ ನೇಮಕಕ್ಕೆ ಆದೇಶಿಸಿದ್ದೇವೆ. ಜತೆಗೆ ಸಹಾಯಕರು ಸೇರಿ ಮೂರೂ ಕ್ಷೇತ್ರದ ಮತ ಎಣಿಕೆಗೆ 2 ಸಾವಿರ ಅಧಿಕಾರಿ ಸಿಬ್ಬಂದಿ ನೇಮಕ ಮಾಡಿಕೊಂಡಿದ್ದು, ಗೊಂದಲ ರಹಿತವಾಗಿ ಎಣಿಕೆ ಪ್ರಕ್ರಿಯೆ ನಡೆಯಲು ಮೇ 16 ಮತ್ತು ಮೇ 22ರಂದು ಎರಡು ಹಂತದಲ್ಲಿ ಮತ ಎಣಿಕಾ ಸಿಬ್ಬಂದಿಗೆ ತರಬೇತಿ ನೀಡಲಾಗುವುದು ಎಂದರು.
ತಲಾ ಒಂದು ವಿಧಾನಸಭಾ ಕ್ಷೇತ್ರದ ಮತ ಎಣಿಕೆಗೆ 45 ಅಧಿಕಾರಿ ನೇಮಕ ಮಾಡಲಾಗುವುದು. ಇದರಲ್ಲಿ 15 ಮತ ಎಣಿಕೆ ಅಧೀಕ್ಷಕರು, 15 ಸಹಾಯಕ ಅಧೀಕ್ಷಕರು, 15 ಸೂಕ್ಷ್ಮ ವೀಕ್ಷಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಸೂಕ್ಷ್ಮ ವೀಕ್ಷಕರು ಕೇಂದ್ರ ಸರ್ಕಾರಿ ಅಧಿಕಾರಿಗಳಾಗಿರುತ್ತಾರೆ.
ಗೆಲುವಿನ ಅಂತರ ಕಡಿಮೆ ಇದ್ದರೆ ಅಂಚೆ ಮತ ಮರು ಎಣಿಕೆ
ಮತ ಎಣಿಕೆ ದಿನ ಮೊದಲು ಅಂಚೆ ಮತ ಎಣಿಕೆ ನಡೆಸಿ ಬಳಿಕ ಇವಿಎಂ ಮತ ಎಣಿಕೆ ನಡೆಸಲಿದ್ದೇವೆ. ಮತ ಎಣಿಕೆ ಕಾರ್ಯ ಮುಕ್ತಾಯದ ಬಳಿಕ ಗೆಲುವಿನ ಅಂತರ ಅಂಚೆ ಮತ ಪತ್ರಗಳಿಗಿಂತ ಕಡಿಮೆ ಇದ್ದರೆ ಮತ್ತೊಂದು ಬಾರಿ ಅಂಚೆ ಮತಪತ್ರಗಳನ್ನು ಎಣಿಕೆ ಮಾಡಬೇಕೆಂದು ಆಯೋಗ ಈ ಬಾರಿ ಹೊಸ ಸೂಚನೆ ನೀಡಿದೆ. ಅದರಂತೆ ಅಂಚೆ ಮತಗಳಿಂತ ಕಡಿಮೆ ಅಂತರ ಬಂದರೆ ಮತ್ತೊಂದು ಬಾರಿ ಅಂಚೆ ಬ್ಯಾಲೆಟ್ ಎಣಿಕೆ ಮಾಡಲಾಗುವುದು ಎಂದು ಮಂಜುನಾಥ್ ಪ್ರಸಾದ್ ತಿಳಿಸಿದರು.
ಲಾಟರಿ ಮೂಲಕ ವಿವಿ ಪ್ಯಾಟ್ ಮತ ಎಣಿಕೆ
ಸುಪ್ರಿಂ ಕೋರ್ಟ್ ಹಾಗೂ ಆಯೋಗದ ನಿರ್ದೇಶನದಂತೆ ಪ್ರತಿ ವಿಧಾನ ಸಭಾ ಕ್ಷೇತ್ರದ ಐದು ವಿವಿ ಪ್ಯಾಟ್‌ಗಳ ಮತಪತ್ರ (ಬ್ಯಾಲೆಟ್) ಎಣಿಕೆ ನಡೆಸಲಾಗುವುದು. ಎಣಿಕೆ ಮಾಡುವ ವಿವಿ ಪ್ಯಾಟ್‌ಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದ್ದು, ಆಯ್ಕೆಯಾದ ವಿವಿ ಪ್ಯಾಟ್‌ಗಳನ್ನು ಒಂದರ ಬಳಿಕ ಒಂದರಂತೆ ಎಣಿಕೆ ಮಾಡಲಾಗುವುದು. ಎಲ್ಲಾ ಎಣಿಕೆ ಮುಕ್ತಾಯದ ಬಳಿಕವಷ್ಟೇ ಅಂತಿಮ ಹಾಗೂ ಅಧಿಕೃತ ಫಲಿತಾಂಶ ಘೋಷಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಮತ ಎಣಿಕೆ ವಿಡಿಯೋ ಚಿತ್ರಣ
ಬೆಳಗ್ಗೆಯಿಂದ ಆರಂಭವಾಗುವ ಮತ ಎಣಿಕೆ ಕಾರ್ಯ ಮುಕ್ತಾಯವಾಗುವವರೆಗೂ ವಿಡಿಯೋ ಮಾಡಲಾಗುವುದು. ಅದನ್ನು ಪ್ರತಿಯೊಬ್ಬ ಸ್ಪರ್ಧಿಗಳಿಗೆ ಸಿಡಿ ಮಾಡಿ ಉಚಿತವಾಗಿ ವಿತರಣೆ ಮಾಡುವಂತೆ ಆಯೋಗ ಸೂಚನೆ ನೀಡಿದೆ. ಅದರಂತೆ ವಿಡಿಯೋ ಎಡಿಟ್ ಇಲ್ಲದೇ ಅಭ್ಯರ್ಥಿಗಳಿಗೆ ವಿತರಿಸಲಾಗುವುದು ಎಂದು ನಗರ ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.