ಲೋಕಸಭಾ ಚುನಾವಣೆಗೆ ನಾಲ್ವರು ಮಹಿಳೆಯರಿಗೆ ಕಾಂಗ್ರೆಸ್ ಟಿಕೆಟ್ ..?

First Published Jul 1, 2018, 7:22 AM IST
Highlights

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ ಮೂರರಿಂದ ನಾಲ್ಕು ಜನ ಅರ್ಹ ಮಹಿಳಾ ಅಭ್ಯರ್ಥಿಗಳಿಗೆ ರಾಜ್ಯದಲ್ಲಿ ಟಿಕೆಟ್‌ ನೀಡಬೇಕು ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಶಾಸಕಿ ಲಕ್ಷ್ಮೇ ಹೆಬ್ಬಾಳ್ಕರ್‌ ಹೈಕಮಾಂಡನ್ನು ಒತ್ತಾಯಿಸಿದ್ದಾರೆ.

ಬೆಂಗಳೂರು :  ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ ಮೂರರಿಂದ ನಾಲ್ಕು ಜನ ಅರ್ಹ ಮಹಿಳಾ ಅಭ್ಯರ್ಥಿಗಳಿಗೆ ರಾಜ್ಯದಲ್ಲಿ ಟಿಕೆಟ್‌ ನೀಡಬೇಕು ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಶಾಸಕಿ ಲಕ್ಷ್ಮೇ ಹೆಬ್ಬಾಳ್ಕರ್‌ ಹೈಕಮಾಂಡನ್ನು ಒತ್ತಾಯಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ನಡೆದ ಮಹಿಳಾ ಕಾಂಗ್ರೆಸ್‌ ರಾಜ್ಯ ಕಾರ್ಯಕಾರಿಣಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ತಿಂಗಳ ಬಳಿಕ ಮಹಿಳಾ ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಹಿಳಾ ಕಾಂಗ್ರೆಸ್‌ ಪಾತ್ರ ಕುರಿತು ಚರ್ಚೆ ನಡೆಸಲಾಗಿದೆ. ರಾಜ್ಯದಲ್ಲಿ ಕನಿಷ್ಠ ಮೂರರಿಂದ ನಾಲ್ಕು ಜನ ಅರ್ಹ ಮಹಿಳಾ ಅಭ್ಯರ್ಥಿಗಳಿಗೆ ಮುಂದಿನ ಲೋಕಸಭಾ ಚುನಾವಣೆ ವೇಳೆ ಪಕ್ಷದ ಟಿಕೆಟ್‌ ನೀಡಿ ಗೆಲ್ಲಿಸಿಕೊಂಡು ಬರಬೇಕು ಎಂದು ಹೈಕಮಾಂಡನ್ನು ಒತ್ತಾಯಿಸುವುದಾಗಿ ಹೇಳಿದರು.

ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಇನ್ನಷ್ಟುಸ್ಥಾನಗಳನ್ನು ನೀಡಬೇಕು. ಮುಂದಿನ ಸಂಪುಟ ವಿಸ್ತರಣೆಯಲ್ಲಿ ಇನ್ನೊಬ್ಬ ಮಹಿಳೆಗೆ ಸಚಿವ ಸ್ಥಾನ ನೀಡಬೇಕು ಎಂದು ಲಕ್ಷ್ಮೇ ಹೆಬ್ಬಾಳ್ಕರ್‌ ಇದೇ ವೇಳೆ ಬೇಡಿಕೆ ಇಟ್ಟರು.

ಕಾಂಗ್ರೆಸ್‌ ಬೆಂಬಲಿಸುವವರು ವಾಟ್ಸ್‌ಆ್ಯಪ್‌ ಮಾಡಿ

ಲೋಕಸಭಾ ಚುನಾವಣೆಗೆ ದೇಶಾದ್ಯಂತ ಮಹಿಳಾ ಕಾಂಗ್ರೆಸ್‌ ಬಲಪಡಿಸಲು ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ ರೂಪಿಸಿರುವ ಪ್ರೊಜೆಕ್ಟ್ ಶಕ್ತಿ ಕಾರ್ಯಕ್ರಮಕ್ಕೆ ರಾಜ್ಯದಲ್ಲೂ ಚಾಲನೆ ನೀಡಲಾಗಿದೆ. ಇಡೀ ದೇಶಕ್ಕೆ ಅನ್ವಯಿಸುವಂತೆ ಮಹಿಳಾ ಕಾಂಗ್ರೆಸ್‌ ಸಶಕ್ತೀಕರಣ ದೃಷ್ಟಿಯಿಂದ ವಾಟ್ಸ್‌ಆ್ಯಪ್‌ ನಂಬರ್‌ 7996479964 ನೀಡಲಾಗಿದೆ. ಬೂತ್‌, ಬ್ಲಾಕ್‌ ಮತ್ತು ರಾಜ್ಯಮಟ್ಟದ ಕಾರ್ಯಕರ್ತರೊಂದಿಗೆ ನೇರವಾಗಿ ಸಂಪರ್ಕ ಸಾಧಿಸುವ ಉದ್ದೇಶದಿಂದ ರಾಹುಲ್‌ಗಾಂಧಿ ಅವರು ಪ್ರೊಜೆಕ್ಟ್ ಶಕ್ತಿ ಎಂಬ ನೂತನ ಕಾರ್ಯಕ್ರಮ ಜಾರಿಗೆ ತಂದಿದ್ದಾರೆ. ಈ ವಾಟ್ಸ್‌ಆ್ಯಪ್‌ ಸಂಖ್ಯೆಗೆ ಮಹಿಳಾ ಕಾಂಗ್ರೆಸ್‌ ಸಬಲೀಕರಣಕ್ಕಾಗಿ ಅಗತ್ಯವಿರುವ ಸಲಹೆಗಳು, ಸೂಚನೆಗಳು, ಅಭಿಪ್ರಾಯಗಳನ್ನು ಸಲ್ಲಿಸಬಹುದಾಗಿದೆ. ಅಲ್ಲದೆ, ಕಾಂಗ್ರೆಸ್‌ ಪಕ್ಷದೊಂದಿಗೆ ಗುರುತಿಸಿಕೊಳ್ಳಲು ಇಚ್ಛಿಸುವ ಮಹಿಳೆಯರು ತಮ್ಮ ಮತದಾರ ಗುರುತಿನ ಚೀಟಿ ಸಂಖ್ಯೆಯನ್ನು ಈ ನಂಬರ್‌ಗೆ ಕಳುಹಿಸಬಹುದು ಎಂದು ಲಕ್ಷ್ಮೇ ಹೆಬ್ಬಾಳ್ಕರ್‌ ಹೇಳಿದರು.

click me!