ಲಿಂಗಾಯತ ಸ್ವತಂತ್ರ ಧರ್ಮ ಹೌದೋ ಅಲ್ಲವೋ ಎಂಬ ಬಗ್ಗೆ ವಾಗ್ವಾದ; ಪೇಜಾವರ ಪಂಥಾಹ್ವಾನಕ್ಕೆ ಜಾಮದಾರ್ ಒಪ್ಪಿಗೆ

By Suvarna Web DeskFirst Published Oct 24, 2017, 5:25 PM IST
Highlights

ಜನವರಿ ಅಂತ್ಯಕ್ಕೆ ಬೆಂಗಳೂರಿನಲ್ಲಿ ಬಹಿರಂಗ ಚರ್ಚೆ | ಲಿಂಗಾಯತ ಸ್ವತಂತ್ರ ಧರ್ಮ ಹೌದೋ ಅಲ್ಲವೋ ಎಂಬ ಬಗ್ಗೆ ವಾಗ್ವಾದ 

ಬೆಂಗಳೂರು : ಲಿಂಗಾಯತರು ಹಿಂದೂ ಧರ್ಮದ ಭಾಗವೇ ಎಂಬ ವಿಚಾರವಾಗಿ ಚರ್ಚಿಸಲು ಉಡುಪಿಗೆ ಬನ್ನಿ, ಇಲ್ಲವೇ ಜನವರಿ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ಚರ್ಚೆ ನಡೆಸಲು ಸಿದ್ಧ ಎಂದು ಹೇಳಿದ್ದ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಆಹ್ವಾನ ಸ್ವೀಕರಿಸಿರುವ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಡಾ.ಶಿವಾನಂದ್ ಜಾಮದಾರ್, ಜನವರಿ ಮಾಸಾಂತ್ಯಕ್ಕೆ ಬೆಂಗಳೂರಿನಲ್ಲಿ ಬಹಿರಂಗ ಚರ್ಚೆ ನಡೆಸೋಣ ಬನ್ನಿ ಎಂದು ಪಂಥಾಹ್ವಾನ ನೀಡಿದ್ದಾರೆ.

ಈ ಕುರಿತು ಸೋಮವಾರ ‘ಲಿಂಗಾಯತ ಧರ್ಮ ವೇದಿಕೆ’ ಕಾರ್ಯದರ್ಶಿ ಹೆಸರಿನಲ್ಲಿ ಪತ್ರಿಕಾ ಪ್ರಕಟಣೆ ನೀಡಿರುವ ಡಾ.ಜಾಮದಾರ್, ‘ಲಿಂಗಾಯತ ಸ್ವತಂತ್ರ ಧರ್ಮದ ಬಗ್ಗೆ ಚರ್ಚಿಸಲು ಪೇಜಾವರ ಸ್ವಾಮೀಜಿ ಒಪ್ಪಿರುವುದಕ್ಕೆ ಧನ್ಯವಾದಗಳು. ಅವರೇ ಸೂಚಿಸಿದ ಜನವರಿ ತಿಂಗಳ ಕೊನೆಯ ವಾರದಲ್ಲಿ ಬೆಂಗಳೂರಿನ ಸೂಕ್ತ ಸ್ಥಳದಲ್ಲಿ ಚರ್ಚಿಸಲು ನಾವು ಸಂತೋಷದಿಂದ ಒಪ್ಪಿಕೊಂಡಿರುತ್ತೇವೆ.

Latest Videos

ನಮ್ಮ ತಂಡದವರು ಚರ್ಚೆಯಲ್ಲಿ ಭಾಗವಹಿಸಿ ತಾವು ಕೇಳುವ ಪ್ರಶ್ನೆಗಳಿಗೆ ಸೂಕ್ತವಾದ ಉತ್ತರ ನೀಡಲಿದ್ದಾರೆ ಎಂದು ತಿಳಿಸಲು ಸಂತೋಷ ವಾಗುತ್ತದೆ’ ಎಂದು ತಿಳಿಸಿದ್ದಾರೆ.

‘ಲಿಂಗಾಯತರು ಶಿವನ ಆರಾಧಕರು. ಹೀಗಾಗಿ ಲಿಂಗಾಯತರೂ ಕೂಡ ಹಿಂದುಗಳೇ. ಈ ಬಗ್ಗೆ ಚರ್ಚೆಗೆ ಸಿದ್ಧ’ ಎಂದು ಇತ್ತೀಚೆಗೆ ಪೇಜಾವರ ಸ್ವಾಮೀಜಿ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಡಾ.ಜಾಮದಾರ್, ‘ಲಿಂಗಾಯತರ ಶಿವ ಇಷ್ಟಲಿಂಗವಾಗಿದ್ದು, ಹಿಂದೂಗಳು ಸ್ಥಾವರ ಲಿಂಗ ಪೂಜಿಸುವವರು ಹಾಗೂ ಹಿಂದೂಗಳ ಶಿವನು ಸ್ಥಾವರ ಲಿಂಗ. ಹೀಗಾಗಿ ಲಿಂಗಾಯತರು ಹಿಂದೂಗಳಲ್ಲ. ಈ ಬಗ್ಗೆ ಬಹಿರಂಗ ಚರ್ಚೆಗೆ ತಾವೂ ಸಿದ್ಧ’ ಎಂದಿದ್ದರು.

ಜಾಮದಾರ್ ಪ್ರತಿಕ್ರಿಯೆಗೆ ಮರು ಹೇಳಿಕೆ ನೀಡಿದ್ದ ಪೇಜಾವರ ಸ್ವಾಮೀಜಿ, ಸದ್ಯ ಧಾರ್ಮಿಕ ಪೂಜಾಕಾರ್ಯಗಳ ನಿಮಿತ್ತ ಜನವರಿ ಕೊನೆಯ ವಾರದವರೆಗೂ ಉಡುಪಿಯಲ್ಲೇ ಇರಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಜನವರಿ ಕೊನೆಯ ವಾರದ ಬೆಂಗಳೂರಿನಲ್ಲಿ ಸಭೆ ನಡೆಸಿ ಇಲ್ಲವೇ ಉಡುಪಿಗೆ ಬನ್ನಿ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಜನವರಿ ಕೊನೆ ವಾರದಲ್ಲೇ ತಾವು ತಿಳಿಸಿದ ದಿನಾಂಕದಂದೇ ಚರ್ಚೆಗೆ ಸಿದ್ಧ ಎಂದು ಡಾ. ಜಾಮದಾರ್ ಹೇಳಿದ್ದಾರೆ.

ಇದೀಗ ಲಿಂಗಾಯತರು ಹಿಂದೂಗಳಲ್ಲ ಎಂಬ ವಿವಾದದ ಕುರಿತಂತೆ ನಡೆಯುತ್ತಿರುವ ಚರ್ಚೆಯು ತಾರ್ಕಿಕ ಅಂತ್ಯ ಕಾಣುವುದೇ ಎಂಬ ಕುತೂಹಲ ಉಂಟಾಗಿದ್ದು, ಜನವರಿ ಅಂತ್ಯಕ್ಕೆ ಬಹಿರಂಗ ಚರ್ಚೆ ಏರ್ಪಡುವುದೇ ಎಂಬುದನ್ನು ಕಾದು ನೋಡಬೇಕಿದೆ.

click me!