
ಬೆಂಗಳೂರು (ನ.26): ಭ್ರಷ್ಟಾಚಾರ ಮತ್ತು ಅಕ್ರಮಗಳನ್ನು ಬಯಲಿಗಳೆಯುವ ನೇರ ಮತ್ತು ದಿಟ್ಟ ಪತ್ರಿಕೋದ್ಯಮಕ್ಕೆ ಕೇರಳದ ಎಲ್‌ಡಿಎಫ್ ಸರ್ಕಾರ ಗೂಂಡಾಗಿರಿ ಮೂಲಕ ಉತ್ತರ ನೀಡಿದೆ. ಏಷ್ಯಾನೆಟ್ ಮಾಧ್ಯಮ ಸಂಸ್ಥೆಯ ಮಾಲೀಕರೂ ಆಗಿರುವ ಪಕ್ಷೇತರ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರಿಗೆ ಸಂಬಂಧಿಸಿದ ಕೇರಳದ ಕೊಟ್ಟಾಯಂ ಜಿಲ್ಲೆಯ ಕುಮಾರಕೋಮ್ ಎಂಬಲ್ಲಿನ ನಿರಾಮಯ ರೆಸಾರ್ಟ್‌ನ ಮೇಲೆ ಎಲ್'ಡಿಎಫ್ ಸರ್ಕಾರದ ಪಾಲುದಾರ ಪಕ್ಷವಾಗಿರುವ ಸಿಪಿಎಂನ ಯುವ ಘಟಕ ಡಿವೈಎಫ್ ಐನ ಕಾರ್ಯಕರ್ತರು ದಾಳಿ ನಡೆಸಿ ಕೋಟ್ಯಂತರ ರುಪಾಯಿ ನಷ್ಟ ಉಂಟು ಮಾಡಿದ್ದಾರೆ.
ಕಳೆದ ನಾಲ್ಕು ತಿಂಗಳಿಂದ ಸತತವಾಗಿ ಭೂ ಒತ್ತುವರಿ ಬಗ್ಗೆ ಏಷ್ಯಾನೆಟ್ ನ್ಯೂಸ್ ವರದಿ ಮಾಡಿದ ಬಳಿಕ ಕೇರಳದ ಸಾರಿಗೆ ಸಚಿವರಾಗಿದ್ದ ಥಾಮಸ್ ಚಾಂಡಿ ಕಳೆದ ಇದೇ ತಿಂಗಳ 15 ರಂದು ರಾಜೀನಾಮೆ ನೀಡಬೇಕಾಯಿತು. ಜತೆಗೆ ತನಿಖಾ ವರದಿ ಹಿನ್ನೆಲೆಯಲ್ಲಿ ಇದುವರೆಗೆ ಮೂವರು ಕೇರಳ ಸಚಿವರು ರಾಜೀನಾಮೆ ನೀಡಿದ್ದಾರೆ. ಇದರಿಂದ ಕುಪಿತಗೊಂಡ ಅವರ ಬೆಂಬಲಿಗರು ಸೇಡಿನ ರಾಜಕಾರಣ ಪ್ರದರ್ಶಿಸಿದ್ದಾರೆ.
ಇದೀಗ ಸಿಪಿಎಂ ಮುಖಂಡರು ‘ರಾಜೀವ್ ಚಂದ್ರಶೇಖರ್ ಅವರಿಗೆ ಸಂಬಂಧಿಸಿದ ರೆಸಾರ್ಟ್ ಕೂಡ ಭೂ ಒತ್ತುವರಿ ಮಾಡಿದೆ’ ಎಂಬ ಆರೋಪವನ್ನು ಮಾಡಿದ್ದಾರೆ. ಅದೂ ಎಕರೆಗಟ್ಟಲೇ ಅಲ್ಲ. ಕೇವಲ ೧ ಸೆಂಟ್'ನಷ್ಟು ಮಾತ್ರ. ಆದರೆ, ರೆಸಾರ್ಟ್‌ನ ಆಡಳಿತ ಮಂಡಳಿಯು ಈ ಆರೋಪವನ್ನು ಕೂಡ ಬಲವಾಗಿ ಅಲ್ಲಗಳೆದಿದ್ದು, ‘1 ಸೆಂಟ್ ಕೂಡ ಒತ್ತುವರಿ ಆಗಿಲ್ಲ’ ಎಂದಿದೆ. ಕಂಪನಿಯು ತಾನು ಎಲ್ಲಾ ಕಾನೂನುಗಳಿಗೆ ಬದ್ಧವಾಗಿರುವುದಾಗಿ ಹಾಗೂ ಭೂಮಿಗೆ ಸಂಬಂಧಪಟ್ಟ ಎಲ್ಲ ದಾಖಲೆ ಗಳನ್ನು ಹೊಂದಿರುವುದಾಗಿ ಘೋಷಿಸಿಕೊಂಡಿದೆ. ಅಲ್ಲದೆ, ‘ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಿ. ಯಾವುದೇ ರೀತಿಯ ತನಿಖೆ ಎದುರಿಸಲು ಸಿದ್ಧ’ ಎಂದು ರಾಜೀವ್ ಅವರೂ ಸ್ಪಷ್ಟಪಡಿಸಿದ್ದಾರೆ.
ಇದು ಮೊದಲಲ್ಲ: ಸಾರ್ವಜನಿಕ ಹಿತಾಸಕ್ತಿ ಉದ್ದೇಶ ಇಟ್ಟುಕೊಂಡು ಹಲವಾರು ರೀತಿಯ ಹೋರಾಟಗಳನ್ನು ಕೈಗೊಂಡಿರುವ ರಾಜೀವ್ ಚಂದ್ರಶೇಖರ್ ವಿರುದ್ಧ ಪಟ್ಟಭದ್ರ ಹಿತಾಸಕ್ತಿಗಳಿಂದ ಆರೋಪಗಳು ಕೇಳಿಬರುತ್ತಿರುವುದು ಇದೇ ಮೊದಲೇನಲ್ಲ. ರಾಜೀವ್ ಅವರು ‘ಒನ್ ರ್ಯಾಂಕ್ ಒನ್ ಪೆನ್ಶನ್’ ಜಾರಿಗಾಗಿ ಹೋರಾಟ ನಡೆಸಿದಾಗಲೂ ಅವರ ವಿರುದ್ಧ ಶಸ್ತ್ರಾಸ್ತ್ರಗಳ ದಲ್ಲಾಳಿ ಎಂಬ ಆರೋಪವನ್ನು ವಿರೋಧಿಗಳು ಮಾಡಿದ್ದರು. ಅಲ್ಲದೆ, ಬೆಂಗಳೂರಿನಲ್ಲಿನ ಕೆರೆಗಳ ಒತ್ತುವರಿ ವಿರುದ್ಧ ಹೋರಾಟ ಹಮ್ಮಿಕೊಂಡಿದ್ದಾರೆ. ಇದಕ್ಕಾಗಿ ಸುಪ್ರೀಂಕೋರ್ಟ್ ಮೆಟ್ಟಿಲನ್ನೂ ಹತ್ತಿದ್ದಾರೆ. ಜತೆಗೆ ಪರಿಸರಕ್ಕೆ ಧಕ್ಕೆ ತರಬಲ್ಲದ್ದಾಗಿದ್ದ ಹಾಗೂ ಭ್ರಷ್ಟಾಚಾರದ ಗಣಿಯಾಗಿದ್ದ ವಿವಾದಾ ತ್ಮಕ ಉಕ್ಕಿನ ಸೇತುವೆ ಯೋಜನೆ ಸ್ಥಗಿತಗೊಳಿಸುವಲ್ಲಿ ರಾಜೀವ್ ಅವರ ಹೋರಾಟ ಪ್ರಮುಖವಾದದ್ದು.
ಇದು ಸೇಡಿನ ಕ್ರಮ; ಯಾವುದೇ ತನಿಖೆಗೂ ಸಿದ್ಧ- ರಾಜೀವ್: ನಿರಾಮಯ ರೆಸಾರ್ಟ್‌ನಿಂದ ಭೂ ಒತ್ತುವರಿ ಆಗಿಲ್ಲ. ಆರೋಪ ಶುದ್ಧ ಸುಳ್ಳು. ಇದು ಕೇರಳ ರಾಜ್ಯ ಸರ್ಕಾರದ ಸೇಡಿನ ಕ್ರಮ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಪ್ರತಿಕ್ರಿಯೆ ನೀಡಿದ್ದಾರೆ. ‘ಕೇರಳದ ಕಮ್ಯುನಿಸ್ಟ್ ಸರ್ಕಾರ ದುರುದ್ದೇಶ ಪೂರಿತವಾಗಿ ಈ ಆರೋಪ ಮಾಡುತ್ತಿದೆ. ನನ್ನ ಒಡೆತನದ ಮಾಧ್ಯಮ ಸಂಸ್ಥೆಗಳಿಂದ ಕೇರಳ ಸರ್ಕಾರ ಬೆತ್ತಲಾಗಿದೆ. ಕಮ್ಯುನಿಸ್ಟ್ ಸರ್ಕಾರದ ಅಕ್ರಮಗಳನ್ನು ಬಯಲಿಗೆಳೆದಿದೆ. ನಮ್ಮ ತನಿಖಾ ವರದಿಗಳಿಂದ ಮೂವರು ಸಚಿವರು ರಾಜೀನಾಮೆ ನೀಡಿದ್ದಾರೆ. ವರದಿ ಹಿನ್ನೆಲೆಯಲ್ಲಿ ಸಚಿವ ಥಾಮಸ್ ಚಾಂಡಿ ರಾಜೀನಾಮೆ ಕೊಡಬೇಕಾಯಿತು. ಇದೇ ಕಾರಣಕ್ಕೆ ಕೇರಳ ರಾಜ್ಯ ಸರ್ಕಾರ ರೆಸಾರ್ಟ್ ಒತ್ತುವರಿ ಆರೋಪ ಮಾಡುತ್ತಿದೆ. ಈ ಸಂಬಂಧ ಯಾವುದೇ ತನಿಖೆಗೆ ನಾವು ಸಿದ್ಧರಿದ್ದೇವೆ’ ಎಂದು ಹೇಳಿದ್ದಾರೆ. ‘ಡಿವೈಎಫ್‌ಐನಿಂದ ರೆಸಾರ್ಟ್ ಮೇಲಿನ ದಾಳಿ ಖಂಡನೀಯ. ಸೂಕ್ತ ದಾಖಲೆಗಳಿದ್ದರೆ ಕಾನೂನು ಹೋರಾಟ ಮಾಡಲಿ. ಕಮ್ಯುನಿಸ್ಟ್ ಆಡಳಿತದ ಗ್ರಾಮ ಪಂಚಾಯಿತಿಯಿಂದ ನೋಟಿಸ್ ನೀಡಲಾ ಗಿದೆ. ಸಚಿವ ಥಾಮಸ್ ಚಾಂಡಿ ರಾಜೀನಾಮೆಗೆ ಕಾರಣವಾಗಿದ್ದಕ್ಕೆ ಸೇಡಿನ ಕ್ರಮ ಇದಾಗಿದೆ. ಭೂ ಒತ್ತುವರಿ ವಿರುದ್ಧ ನನ್ನ ಹೋರಾಟ ನಿಲುವುದಿಲ್ಲ. ಸರ್ಕಾರದ ಭ್ರಷ್ಟಾಚಾರಗಳನ್ನು ಹಾಗೂ ಎಡವ ಟ್ಟುಗಳನ್ನು ದಿಟ್ಟತನದಿಂದ ಜನರ ಮುಂದಿಡುತ್ತಿರುವ ಸುದ್ದಿ ವಾಹಿನಿಯನ್ನು ಬೆದರಿಸುವು ದರ ಮೂಲಕ ಈ ಷಡ್ಯಂತ್ರ ಶುರುವಾಯಿತು ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.